ಧಾರ್ಮಿಕ ಕಾರ್ಯಕ್ರಮಗಳಿಂದ ನೆಮ್ಮದಿ

KannadaprabhaNewsNetwork | Published : Jan 30, 2025 1:46 AM

ಸಾರಾಂಶ

ಪವಿತ್ರವಾದ ಮನುಷ್ಯ ಜನ್ಮವೆತ್ತಿ ಬಂದ ಮೇಲೆ ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬದುಕಬೇಕು

ಶಿರಹಟ್ಟಿ: ಧಾರ್ಮಿಕ ಕಾರ್ಯಕ್ರಮಗಳಿಂದ ಎಲ್ಲರಿಗೂ ನೆಮ್ಮದಿ ದೊರೆಯುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಸದಾಚಾರ ಸಂಪನ್ನರಾಗಿ ಬಾಳಬೇಕು. ಭಕ್ತಿ ಆಚರಣೆಯಿಂದ ಮನುಷ್ಯನ ಆತ್ಮಶುದ್ಧಿ ಸಾಧ್ಯವಾಗುತ್ತದೆ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನಮಠದ ಶ್ರೀಜಗದ್ಗುರು ಫಕೀರ ಸಿದ್ದರಾಮ ಸ್ವಾಮಿಗಳು ಕರೆ ಹೇಳಿದರು.

ಮಂಗಳವಾರ ಸಂಜೆ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಮೈಲಾರಲಿಂಗೇಶ್ವರ ನೂತನ ದೇವಸ್ಥಾನ, ಸಿಬಾರದ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಜರುಗಿದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಮಾಡಿ ಆಶೀರ್ವಚನ ನೀಡಿದರು.ಇಂದಿನ ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.

ಮನುಷ್ಯನ ಜೀವನ ಅತ್ಯಂತ ಪವಿತ್ರವಾದದ್ದು ಎಂದು ಭಾವಿಸಲಾಗುತ್ತದೆ. ಇಂತಹ ಪವಿತ್ರವಾದ ಮನುಷ್ಯ ಜನ್ಮವೆತ್ತಿ ಬಂದ ಮೇಲೆ ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆ ಅಳವಡಿಸಿಕೊಂಡು ಬದುಕಬೇಕು. ಸತ್ಯದ ಮಾರ್ಗದಲ್ಲಿ ನಡೆಯಬೇಕಾದರೆ ಭಕ್ತಿ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿ ಭಕ್ತಿಯ ಆಚರಣೆ ಜೀವನದಲ್ಲಿ ಬಹಳ ಅಗತ್ಯವಾದದ್ದು ಎಂದು ತಿಳಿಸಿದರು.

ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠ ಎಂಬುವುದು ಅರಿತಾಗ ಸಹಬಾಳ್ವೆಯ ಬಳ್ಳಿ ಜಿಗುರೊಡೆಯಲು ಸಾಧ್ಯ. ದೇಶದಲ್ಲಿ ಕನ್ನಡ ನಾಡು ತನ್ನದೇ ಆದ ವಿಶಿಷ್ಟ ಭಕ್ತಿ ಪರಂಪರೆ ಇಂದಿಗೂ ಕಾಯ್ದುಕೊಂಡು ಬಂದಿದೆ. ನಾಡಿನ ಭವ್ಯ ಧರ್ಮ ಪರಂಪರೆಯ ಬೇರುಗಳು ಹಳ್ಳಿಗಳಲ್ಲಿಯೇ ಭದ್ರವಾಗಿ ನೆಲೆಯೂರಿವೆ ಎಂದರೆ ತಪ್ಪಾಗದು. ಇಂತಹ ಸುಂದರ ಸಾಮರಸ್ಯದ ಗ್ರಾಮ ಶಿರಹಟ್ಟಿ ತಾಲೂಕಿನಲ್ಲಿ ಇದೆ ಎಂದರೆ ಅದು ಖಾನಾಪೂರ ಗ್ರಾಮ. ಇದಕ್ಕೆ ಇಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನವೇ ಸಾಕ್ಷಿ ಎಂದರು.

ದೈನಂದಿನ ಒತ್ತಡದ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ. ಯಾಂತ್ರಿಕ ಜೀವನದಲ್ಲಿ ಮನುಷ್ಯರಿಗೆ ವಿಶ್ರಾಂತಿ ಎನ್ನುವುದೇ ಇಲ್ಲವಾಗಿದ್ದು, ಈ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುತ್ತದೆ. ಖಾನಾಪೂರ ಗ್ರಾಮದಲ್ಲಿ ಪ್ರತಿವರ್ಷವೂ ಪುರಾಣ, ನಾನಾ ದೇವರುಗಳ ಉತ್ಸವ ಹಮ್ಮಿಕೊಳ್ಳುವುದರಿಂದ ಶಾಂತಿಯುತ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ವಿಜಯಪುರ ಜ್ಞಾನಯೋಗಾಶ್ರಮದ ಲಿಂ.ಸಿದ್ದೇಶ್ವರ ಮಹಾಸ್ವಾಮಿಗಳ ಶಿಷ್ಯ ಸಂಗಮೇಶ್ವರ ಸ್ವಾಮಿಗಳು ಮಾತನಾಡಿ, ಒಳ್ಳೆಯ ಸಂಸ್ಕಾರದಿಂದ ಕಲುಷಿತ ಸಮಾಜವೂ ತಿಳಿಗೊಳ್ಳಲು ಸಾಧ್ಯ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಶಾಂತಿ,ನೆಮ್ಮದಿ ಪ್ರಾಪ್ತಿಯಾಗುತ್ತದೆ. ಯುವ ಪೀಳಿಗೆ ಧಾರ್ಮಿಕಾಚರಣೆ ನಿರ್ಲಕ್ಷಿಸದೇ ಶ್ರದ್ಧೆ ಭಕ್ತಿಯಿಂದ ನಾಡಿನ ಆಚಾರ ವಿಚಾರ ಮುಂದಿನ ಪೀಳಿಗೆಗೆ ಕಲಿಸಿಕೊಡುವ ಪ್ರಯತ್ನ ಮಾಡಬೇಕು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಸೌಹಾರ್ಧಯುತ ಮತ್ತು ಭಕ್ತಿಭಾವಗಳ ಸಂಗಮದಂತೆ ಕೂಡಿರುವ ಖಾನಾಪೂರ ಗ್ರಾಮದ ಜನರ ಭಕ್ತಿ ಭಾವ ಮಾದರಿಯಾಗಿದೆ.ಮನುಷ್ಯ ಎಷ್ಟೇ ಹಣ ಸಂಪಾದನೆ ಮಾಡಿದರೂ ಧಾರ್ಮಿಕ ಕಾರ್ಯಗಳಿಂದ ಮಾತ್ರ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.

ಪ್ರಸ್ತುತ ಸನ್ನಿವೇಶದಲ್ಲಿ ದೇಶಿ ಸಂಸ್ಕೃತಿ ನಾಶವಾಗುತ್ತಿದೆ. ಟಿವಿ, ಸಿನಿಮಾ ವೀಕ್ಷಣೆ ಬದಲಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನೆಮ್ಮದಿ ಸಿಗುತ್ತದೆ. ಜಾತಿ, ಮತ ಎನ್ನದೇ ಎಲ್ಲರೂ ಕೂಡಿ ಐಕ್ಯತೆಯಿಂದ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಪಪಂ ಸದಸ್ಯೆ ಚನ್ನಬಸವ್ವ ಕಲಾದಗಿ, ಎಸ್.ಪಿ. ಹಲಸೂರ, ಸುರೇಶ ಅಕ್ಕಿ, ಪಂಚಾಕ್ಷರಿ ಹಿರೇಮಠ ಪ್ರಕಾಶ ರಡ್ಡೇರ, ಬಸವರಾಜ ಹಲಸೂರ, ಈಶ್ವರಪ್ಪ ರಡ್ಡೇರ, ರಾಜಶೇಖರಯ್ಯ ಹಿರೇಮಠ, ನಿಂಗಪ್ಪ ಚಂಡ್ರಪ್ಪ ಗಾಣಿಗೇರ, ಈರಪ್ಪ ಗುಕ್ಕನವರ, ರಮೇಶ ಗಾಬರಿ, ಇಬ್ರಾಹೀಮಸಾಬ್‌ ತಹಸೀಲ್ದಾರ, ಹುಸೇನಸಾಬ ಟಪಾಲ್‌, ಅಶೋಕ ಮಡಿವಾಳರ, ಬಸಪ್ಪ ಬೆಟಗೇರಿ, ಬಸಪ್ಪ ಹಡಪದ, ಪಂಚಪ್ಪ ಹಲಸೂರ, ದೇವಪ್ಪ ಛಬ್ಬಿ, ಶಂಕ್ರಪ್ಪ ಬಡಿಗೇರ, ತಿಪ್ಪಣ್ಣ ಹೂಗಾರ ಇದ್ದರು.

Share this article