ಮಣ್ಣಿನಿಂದ ದೂರವಾದಷ್ಟು ನೆಮ್ಮದಿಯೂ ದೂರ

KannadaprabhaNewsNetwork |  
Published : Jun 20, 2024, 01:02 AM IST
19ಡಿಡಬ್ಲೂಡಿ1ಅನ್ವೇಷಣಕೂಟವು ಸಾಧನಕೇರಿಯ `ಚೈತ್ರ’ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನಿಂದ ದೂರ, ಆರೋಗ್ಯದಿಂದ ದೂರ ವಿಷಯದ ಮೇಲಿನ ಉಪನ್ಯಾಸದಲ್ಲಿ ಡಾ. ಸಂಜೀವ ಕುಲಕರ್ಣಿ ಮಾತನಾಡಿದರು.  | Kannada Prabha

ಸಾರಾಂಶ

ಸೆಗಣಿಯಿಂದ ಸಾರಿಸಿದ ಚಿಕ್ಕ ಮನೆಯಲ್ಲಿ ಸುಖ ಕಂಡ ನಾವಿಂದು ಟೈಲ್ಸ್‌ ಹಾಸುಗಳಿಂದ, ಕಾಂಕ್ರೀಟ್ ಮಹಡಿ ಮನೆ ಕಟ್ಟಿಕೊಂಡರೂ ಅಂದಿನ ಆ ಸುಖಗಳಿಂದ ವಂಚಿತರಾಗಿಲ್ಲವೆ? ಆ ಕಾಲದಲ್ಲಿಲ್ಲದ ಅವೆಷ್ಟೋ ರೋಗಗಳಿಗೆ ನಾವಿಂದು ಬಲಿಯಾಗುತ್ತಿಲ್ಲವೆ?

ಧಾರವಾಡ:

ಹೊಸ ಉಪಭೋಗದ ವಸ್ತುಗಳು ನಮ್ಮ ಪ್ರಗತಿಯ ಸೂಚ್ಯಂಕಗಳೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಯಾವತ್ತು ನಾವು ಮಣ್ಣಿನಿಂದ ದೂರವಾದೆಯೋ ಅಂದಿನಿಂದ ನೆಮ್ಮದಿ ಕಳೆದುಕೊಳ್ಳುವಂತಾಯಿತು ಎಂದು ಪರಿಸರವಾದಿ ಡಾ. ಸಂಜೀವ ಕುಲಕರ್ಣಿ ಹೇಳಿದರು.

ಇಲ್ಲಿಯ ಅನ್ವೇಷಣಕೂಟವು ಸಾಧನಕೇರಿಯ `ಚೈತ್ರ’ದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಣ್ಣಿನಿಂದ ದೂರ, ಆರೋಗ್ಯದಿಂದ ದೂರ ವಿಷಯದ ಮೇಲಿನ ಉಪನ್ಯಾಸದಲ್ಲಿ ಮಾತನಾಡಿದರು.

ಮೂವತ್ತು ಸಾವಿರ ವರ್ಷಗಳಿಂದೀಚೆಗೆ ನಾಗರೀಕತೆ ಪ್ರಾರಂಭವಾಗಿದ್ದು ಮುಂದೆ ಅದು ಸಾವಕಾಶವಾಗಿ ವಿಕಾಸವಾಗತೊಡಗಿತು. ಬೇಟೆ ಆರಂಭಿಸಿದ ಜನರೆಲ್ಲ ಬೇಟೆಗಾರರು, ಅಲೆಮಾರಿಗಳಾಗಿದ್ದು ಸುಡುವುದು, ನಾಶಮಾಡುವುದು, ನಂತರ ಆ ಸ್ಥಳ ಬಿಟ್ಟು ಬೇರೆಡೆಗೆ ಹೋಗುವುದು ಆರಂಭವಾಯಿತು. ಈ ಮೂಲಕ ಸಾವಕಾಶವಾಗಿ ಪರಿಸರ ನಾಶ ಪ್ರಾರಂಭವಾಯಿತು ಎಂದರು.

250 ವರ್ಷಗಳ ಈಚೆಗೆ ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯಾಗಿ ನಾಗರೀಕತೆಯ ಮತ್ತೊಂದು ಕವಲಾಗಿ ಒಡೆದು ಬಿಟ್ಟಿತು. ಅಂದಿನಿಂದ ಮನುಷ್ಯ ಈ ಪ್ರಕೃತಿಯನ್ನು ಗುಲಾಮನನ್ನಾಗಿಸಿಕೊಂಡನು. ಅಂದಿನಿಂದ ಪ್ರಾರಂಭವಾದ ವಿಜ್ಞಾನ, ತಂತ್ರಜ್ಞಾನದ ಅತಿ ಬಳಕೆಯಿಂದ ಅವುಗಳನ್ನು ಲೌಕಿಕ ಸುಖವೆಂದೇ ಭ್ರಮಿಸುತ್ತ ಸಾಗಿ ಬಿಟ್ಟಿದ್ದೇವೆ ಎಂದು ಹೇಳಿದರು.

ಸೆಗಣಿಯಿಂದ ಸಾರಿಸಿದ ಚಿಕ್ಕ ಮನೆಯಲ್ಲಿ ಸುಖ ಕಂಡ ನಾವಿಂದು ಟೈಲ್ಸ್‌ ಹಾಸುಗಳಿಂದ, ಕಾಂಕ್ರೀಟ್ ಮಹಡಿ ಮನೆ ಕಟ್ಟಿಕೊಂಡರೂ ಅಂದಿನ ಆ ಸುಖಗಳಿಂದ ವಂಚಿತರಾಗಿಲ್ಲವೆ? ಆ ಕಾಲದಲ್ಲಿಲ್ಲದ ಅವೆಷ್ಟೋ ರೋಗಗಳಿಗೆ ನಾವಿಂದು ಬಲಿಯಾಗುತ್ತಿಲ್ಲವೆ? ಮಣ್ಣಿನೊಡನೆಯ ಆ ಅವಿನಾಭಾವ ಸಂಬಂಧಗಳಿಂದ ವಂಚಿತರಾಗುತ್ತಿರುವ ನಾವಿಂದು ಅಂಗಾಲಿಗೂ ಮಣ್ಣು ಹತ್ತದಂತೆ ಸದಾ ಶೂಧಾರಿಗಳಾದ ಮಕ್ಕಳೊಂದಿಗೆ ಎತ್ತ ಕಡೆ ಸಾಗಿದ್ದೇವೆ ಎನ್ನುವುದು ಪ್ರಶ್ನೆಯಾಗಿದೆ ಎಂದು ಪ್ರಸ್ತುತ ಜೀವನಶೈಲಿಯನ್ನು ಡಾ. ಸಂಜೀವ ಕುಲಕರ್ಣಿ ತೆರದಿಟ್ಟರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ಅಭಿವೃದ್ಧಿ ತಜ್ಞ, ಪರಿಸರವಾದಿ ಡಾ. ಪ್ರಕಾಶ ಭಟ್ಟ, ಯೋಗ ಮತ್ತು ಸಾಂಖ್ಯ ಬುದ್ಧಿಯ ನಡುವಿನ ಅಂತರವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದೆಂಬ ಆಚಾರ‍್ಯ ವಿನೋಬಾರ ವಿಚಾರ ಇಂದು ಅತ್ಯವಶ್ಯಕ ಸಂಗತಿಯಾಗಿದೆ. ಸರಳ ಸುಖ ಜೀವನ ಕಾಣುವ ರೀತಿ ಮತ್ತು ಸಾಧನೆಗಳನ್ನು ನಾವೆಲ್ಲರೂ ಇಂದು ಸಾಧಿಸಿ, ಅಳವಡಿಸಿಕೊಳ್ಳಬೇಕಿದೆ ಎಂದರು.

ಪ್ರಾರಂಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಸರೋದ ವಾದಕ ಪಂಡಿತ ರಾಜೀವ ತಾರಾನಾಥ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಅನಿಲ ಕಾಖಂಡಕಿ, ಪ್ರೊ. ದುಷ್ಯಂತ ನಾಡಗೌಡ, ಅನಂತ ಸಿದ್ಧೇಶ್ವರ, ಸತ್ಯಧೀರ ಕಟ್ಟಿ, ಶ್ರೀಧರ ಗಾಂವಕರ, ಅನಂತ ಥಿಟೆ, ಪ್ರೊ. ಸಿ.ಆರ್. ಜೋಶಿ, ಶ್ರೀನಿವಾಸ ವಾಡಪ್ಪಿ, ರಮೇಶ ನಾಡಗೀರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕ ಸಂಸ್ಕೃತಿ ಸಂವೇದನೆಗೆ ಸಂಬಂಧಿಸಿದ್ದು: ಬರಗೂರು
ಜಿಬಿಎ ಚುನಾವಣೆಗೆ ಕಾಂಗ್ರೆಸ್‌ ಅರ್ಜಿಗೆ ₹50 ಸಾವಿರ!