ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನಾಲ್ಕು ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ನಿವಾಸಿ ಅಡಕೆ ವ್ಯಾಪಾರಿ ಅಚ್ಯುತ ಭಟ್ ಮನೆಗೆ ನುಗ್ಗಿ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸಿದ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿ ಅವರಿಂದ ದರೋಡೆ ಮಾಡಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಸೋಮವಾರ ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಶ್ಯಂತ್ ಅವರು ಈ ಮಾಹಿತಿ ನೀಡಿದರು.
ಮುಂಡಾಜೆ ಗ್ರಾಮದನಿವಾಸಿಗಳಾದ ನವಾಜ್ (38) ರಿಯಾಜ್ ಹಾಗೂ ಬೆಂಗಳೂರಿನ ಕೃಷ್ಣ ಬಂಧಿತರು. ಇವರಿಂದ, ಕಳವು ಮಾಡಲಾಗಿದ್ದ 104 ಗ್ರಾಂ ಚಿನ್ನಾಭರಣ, 288 ಗ್ರಾಂ ಬೆಳ್ಳಿಯ ವಸ್ತುಗಳನ್ನು ಹಾಗೂ ರು. 25 ಸಾವಿರ ನಗದು ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಘಟನೆ ಹಿನ್ನಲೆ:
2020 ಜೂ. 6ರಂದು ರಲ್ಲಿ ಕಲ್ಮಂಜ ಗ್ರಾಮದ ನಿವಾಸಿ ಅಚ್ಯುತ ಭಟ್ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಅಚ್ಯುತ ಭಟ್, ಅವರ ತಾಯಿ ಹಾಗೂ ತಮ್ಮನ ಪತ್ನಿಯನ್ನು ಕಟ್ಟಿ ಮನೆಯಲ್ಲಿದ್ದ ನಗ-ನಗದು ದರೋಡೆ ಮಾಡಿ ಪರಾರಿಯಾಗುದ್ದರು.ಆರೋಪಿಗಳು ಸುಮಾರು 30 -35 ಪವನ್ ಚಿನ್ನಾಭರಣ, ಒಂದು ಕೆ.ಜಿ. ಬೆಳ್ಳಿಯ ಆಭರಣಗಳನ್ನು ದರೋಡೆ ಮಾಡಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ನಿರಂತರವಾಗಿ ತನಿಖೆ ನಡೆಸಿದರೂ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಬಿ ರಿಪೋರ್ಟ್ ಹಾಕಲಾಗಿತ್ತು.ಲಭ್ಯವಾದ ಸುಳಿವು:
ಆರೋಪಿಗಳು ಜಾಗರೂಕತೆಯಿಂದ ಚಿನ್ನಾಭರಣಗಳನ್ನು ಸ್ವಲ್ಪ ಸ್ವಲ್ಪ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ನಡುವೆ ಮೇ 22ರಂದು ಆರೋಪಿ ರಿಯಾಜ್ ಎಂಬಾತ ದಾಖಲೆಯಿಲ್ಲದ ಚಿನ್ನ ಮಾರಾಟಮಾಡಲು ಮುಂದಾಗುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.ಆತನಿಂದ ಲಭಿಸಿದ ಮಾಹಿತಿ ಮೇರೆಗೆ ಪೊಲೀಸರು ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಭಾಗಿಗಳಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಜಿಲ್ಲಾ ಎಸ್.ಪಿ. ಸಿ.ಬಿ. ರಿಶ್ಯಂತ್ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಎಂ. ಜಗದೀಶ್ ಮತ್ತು ರಾಜೇಂದ್ರ ಡಿ. ಎಸ್. ಮತ್ತು ಪೋಲಿಸ್ ಉಪಾಧೀಕ್ಷಕ ಬಂಟ್ವಾಳ ವಿಜಯ ಪ್ರಸಾದ್ ಎಸ್. ನಿರ್ದೆಶನದಂತೆ, ಬೆಳ್ತಂಗಡಿ ಗ್ರಾಮಾಂತರ ಪೋಲಿಸ್ ವೃತ್ತ ನಿರೀಕ್ಷಕ ವಸಂತ್ ಆರ್ ಆಚಾರ್, ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ಎಚ್.ಇ, ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ಸುಬ್ಬಾಪುರ ಮಠ ಮಾರ್ಗದರ್ಶದಂತೆ ಕಾರ್ಯಾಚರಣೆ ನಡೆದಿತ್ತು.
ಧರ್ಮಸ್ಥಳ ಪೋಲಿಸ್ ಠಾಣಾ ಪೋಲಿಸ್ ಉಪ-ನಿರೀಕ್ಷಕ ಅನೀಲ್ ಕುಮಾರ ಡಿ., ಸಮರ್ಥಗಾಣಿಗೇರ ಹಾಗೂ ಸಿಬ್ಬಂದಿ ಎಚ್.ಸಿ ರಾಜೇಶ ಎನ್ , ಹೆಚ್.ಸಿ ಪ್ರಶಾಂತ್ ಎಂ , ಹೆಚ್.ಸಿ ಸತೀಶ್ ನಾಯ್ಕ್ , ಎಚ್.ಸಿ ಪ್ರಮೋದಿನಿ , ಎಚ್.ಸಿ ಶೇಖರ್ ಗೌಡ , ಎಚ್‌ಸಿ ಕೃಷ್ಣಪ್ಪ, ಆನಿಲ್ ಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ವಿನಯ್ ಪ್ರಸನ್ನ , ಗೋವಿಂದರಾಜ್, ಭಿಮೇಶ್, ನಾಗರಾಜ್ ಬುಡ್ರಿ ಹಾಗೂ ಹುಲಿರಾಜ್ ಪತ್ತೆ ಕಾರ್ಯಕ್ಕೆ ಸಹಕರಿಸಿರುತ್ತಾರೆ ಎಂದು ಎಸ್.ಪಿ. ತಿಳಿಸಿದ್ದಾರೆ.