ಕನ್ನಡಪ್ರಭ ವಾರ್ತೆ ತುಮಕೂರು
ಪೆನ್‌ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಕುಟುಂಬದ ವರ್ಚಸ್ಸು ಕುಂದಿಸಿ, ಹೆಣ್ಣುಮಕ್ಕಳ ಮಾನ ಹರಾಜು ಹಾಕುತ್ತಿರುವ ಪ್ರಕರಣದ ಹಿಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಜಿಲ್ಲಾ ಜೆಡಿಎಸ್ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾ ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಮುಖಂಡರು, ನಂತರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಮಾತನಾಡಿ, ಇತ್ತೀಚೆಗೆ ಇಡೀ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಲೈಂಗಿಕ ಹಗರಣ ಮತ್ತು ಅದನ್ನು ಪೆನ್‌ಡ್ರೈವ್ ಹಾಗೂ ಅಶ್ಲೀಲ ವಿಡಿಯೋ ಮೂಲಕ ರಾಜ್ಯಾದ್ಯಂತ ಹಂಚುತ್ತಾ, ಸಂತ್ರಸ್ತ ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬದವರ ಮಾನ ಕಳೆಯುತ್ತಿರುವ ಪ್ರಕರಣದ ಹಿಂದಿನ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.ಲೈಂಗಿಕ ಹಗರಣದಲ್ಲಿ ಸಂತ್ರಸ್ತೆಯಾಗಿರುವ ಹೆಣ್ಣುಮಕ್ಕಳ ಅಶ್ಲೀಲ ವಿಡಿಯೋ, ಪೆನ್‌ಡ್ರೈವ್ ಹಂಚಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದರ ಹಿಂದಿನ ರೂವಾರಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂಬುದು ಜಗಜನಿತವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ವಕೀಲ ದೇವರಾಜೇಗೌಡರು ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿ.ಕೆ.ಶಿವಕುಮಾರ್ ಅವರು ಇಂತಹ ನೀಚ ಕೆಲಸಕ್ಕೆ ಇಳಿದಿರುವುದು ಖಂಡನೀಯ. ಹೆಣ್ಣುಮಕ್ಕಳ ರಕ್ಷಣೆ ಮಾಡಬೇಕಾದ, ಹೆಣ್ಣುಮಕ್ಕಳ ಮಾನ ಕಾಪಾಡಬೇಕಾದವರೇ ಮಾನ ಹರಾಜು ಮಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ. ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶಿಕ್ಷೆ ಆಗಬೇಕು ಎಂದು ಆರ್.ಸಿ.ಆಂಜನಪ್ಪ ಒತ್ತಾಯಿಸಿದರು.
ಈ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ವರ್ಚಸ್ಸು ಕುಂದಿಸಿ, ಜೆಡಿಎಸ್‌ಗೆ ಕಳಂಕ ತರುವುದು ಅವರ ಉದ್ದೇಶವಾಗಿದೆ. ಅಲ್ಲದೇ ಮೈತ್ರಿ ಪಕ್ಷವಾಗಿರುವ ಬಿಜೆಪಿಗೂ ಮುಜುಗರ ತರುವ ಪ್ರಯತ್ನ ನಡೆದಿದೆ ಎಂದು ಟೀಕಿಸಿದರು.ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಲೈಂಗಿಕ ಹಗರಣವನ್ನು ಜೆಡಿಎಸ್ ನಾಯಕರ ತೇಜೋವಧೆಗೆ ಬಳಸಿಕೊಂಡು, ಸಂತ್ರಸ್ತ ಹೆಣ್ಣುಮಕ್ಕಳ ಮರ್ಯಾದೆ ಕಳೆಯುವ ಕೃತ್ಯದ ಹಿಂದಿರುವ, ಹೀನ ಕೃತ್ಯವೆಸಗಿರುವ ಡಿ.ಕೆ.ಶಿವಕುಮಾರ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವವರೆಗೂ ಜೆಡಿಎಸ್ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತದೆ ಎಂದರು.
ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಪೆನ್‌ಡ್ರೈವ್ ಸೃಷ್ಟಿಕರ್ತರು ಹಾಗೂ ಅದರ ಹಂಚಿಕೆದಾರರ ವಿರುದ್ಧ ಈ ನೆಲದ ಕಾನೂನಿನ ಅನ್ವಯ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ತಿಮ್ಮರಾಯಪ್ಪ ಮಾತನಾಡಿ, ಪೆನ್‌ಡ್ರೈವ್ ಪ್ರಕರಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹಂಚಿ ಹೆಣ್ಣುಮಕ್ಕಳಿಗೆ ಅಪಮಾನ ಮಾಡಿದ ಕೃತ್ಯದ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಸಲು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ನಗರಸಭೆ ಅಧ್ಯಕ್ಷ ವಿಜಯ್‌ಗೌಡ, ಮುಖಂಡರಾದ ಗುಬ್ಬಿ ನಾಗರಾಜು, ಎಸ್.ಆರ್.ಗೌಡ, ಸೋಲಾರ್ ಕೃಷ್ಣಮೂರ್ತಿ, ಕೊಂಡವಾಡಿ ಚಂದ್ರಶೇಖರ್, ಟಿ.ಕೆ.ನರಸಿಂಹಮೂರ್ತಿ, ಎಚ್.ಡಿ.ಕೆ.ಮಂಜುನಾಥ್, ಟಿ.ಜಿ.ನರಸಿಂಹರಾಜು, ಮುದಿಮಡು ರಂಗಸ್ವಾಮಯ್ಯ, ದೊಡೇರಿ ಬಸವರಾಜು, ಲಕ್ಷಮ್ಮ, ಲೀಲಾವತಿ, ತಾಹಿರಾಬಾನು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.