ಪೆನ್ ಡ್ರೈವ್: 30ರಂದು ಹಾಸನ ಚಲೋ ಆಂದೋಲನ

KannadaprabhaNewsNetwork |  
Published : May 26, 2024, 01:30 AM IST
ಪ್ರಜ್ವಲ್ | Kannada Prabha

ಸಾರಾಂಶ

ಚುನಾವಣೆಯಲ್ಲಿ ಲೈಂಗಿಕ ಪ್ರಕರಣ ಆರೋಪಿ ಸಂಸದನೊಂದಿಗೆ ಮೈತ್ರಿ ಮಾಡಿಕೊಂಡ ಸರಕಾರಕ್ಕೆ ಮೂರು ತಿಂಗಳ ಮುಂಚಿತವಾಗಿಯೇ ಇಂತಹದೊಂದು ಮಹಾ ದುರಂತ ನಡೆದಿರುವುದರ ಅರಿವಿಗೆ ಬಂದಿದ್ದರೂ ರಾಜಕೀಯ ಲಾಭಕೋಸ್ಕರ ಆತನಿಗೆ ಮತ್ತೆ ಟಿಕೆಟ್ ನೀಡಿ, ಇಡೀ ಸಂಸತ್ತಿನ ಮಾನ, ಮರ್ಯದೆಯನ್ನೇ ಹರಾಜು ಹಾಕಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಹಾಸನದ ಪೆನ್ ಡ್ರೈವ್ ಲೈಂಗಿಕ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಒತ್ತಾಯಿಸಿ, ಹಾಗೂ ಸಂತ್ರಸ್ತ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಮೇ 30ರ ಗುರುವಾರ ‘ಹಾಸನ ಚಲೋ’ ಅಂದೋಲನ ಹಮ್ಮಿಕೊಂಡಿದ್ದು, ಸಂತ್ರಸ್ತ ಮಹಿಳೆಯರ ಘನತೆ, ಗೌರವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸುವಂತೆ ಒಕ್ಕೂಟದ ಇಂದಿರಮ್ಮ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಘಟನೆ ನಡೆದು ಒಂದು ತಿಂಗಳು ಕಳೆದರೂ ಆರೋಪಿಯನ್ನು ಬಂಧಿಸಿಲ್ಲ. ಪೆನ್‌ಡ್ರೈವ್ ಅನ್ನು ಹಾದಿ ಬೀದಿಯಲ್ಲಿ ಹಂಚಿದವರನ್ನು ಬಂಧಿಸಿಲ್ಲ. ಜಾತಿಯ ಕಾರಣಕ್ಕೆ ಸಂತ್ರಸ್ತ ಮಹಿಳೆಯರು ಕೌಟುಂಬಿಕ ಮರ್ಯಾದೆ ಮತ್ತಿತರರ ಕಾರಣಗಳಿಂದ ಎಸ್.ಐ.ಟಿ ಮುಂದೆ ದೂರು ನೀಡಲು ಮುಂದೆ ಬರುತ್ತಿಲ್ಲ. ಈಗ ದೂರು ನೀಡಿದವರಿಗೂ ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನು ಸರಕಾರ ಮಾಡಿಲ್ಲ. ಕಾನೂನು ಸುವ್ಯವಸ್ಥೆಯ ಜೊತೆಗೆ, ಹೆಣ್ಣು ಮಕ್ಕಳ ಘನತೆ,ಗೌರವ ಕಾಪಾಡುವಲ್ಲಿಯೂ ಸರಕಾರ ವಿಫಲವಾಗಿದೆ.ಮುಖ್ಯಮಂತ್ರಿ ಹಾಗೂ ಗೃಹಸಚಿವರು ಕೂಡಲೇ ಸಂತ್ರಸ್ತ ಮಹಿಳೆಯರನ್ನು ಭೇಟಿಯಾಗಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಆದರೆ ಇದುವರೆಗೂ ಅದು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಚುನಾವಣೆಯಲ್ಲಿ ಲೈಂಗಿಕ ಪ್ರಕರಣ ಆರೋಪಿ ಸಂಸದನೊಂದಿಗೆ ಮೈತ್ರಿ ಮಾಡಿಕೊಂಡ ಸರಕಾರಕ್ಕೆ ಮೂರು ತಿಂಗಳ ಮುಂಚಿತವಾಗಿಯೇ ಇಂತಹದೊಂದು ಮಹಾ ದುರಂತ ನಡೆದಿರುವುದರ ಅರಿವಿಗೆ ಬಂದಿದ್ದರೂ ರಾಜಕೀಯ ಲಾಭಕೋಸ್ಕರ ಆತನಿಗೆ ಮತ್ತೆ ಟಿಕೆಟ್ ನೀಡಿ, ಇಡೀ ಸಂಸತ್ತಿನ ಮಾನ, ಮರ್ಯದೆಯನ್ನೇ ಹರಾಜು ಹಾಕಿದೆ. ಅಲ್ಲದೇ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತಲೆತಪ್ಪಿಸಿಕೊಂಡು 33 ದಿನಗಳು ಕಳೆದರೂ ಆತನ ಪಾಸ್‌ಪೋರ್ಟ್, ವೀಸಾ ರದ್ದು ಮಾಡದೇ, ರೆಡ್ ಕಾರ್ನರ್ ನೊಟೀಸ್ ಹೊರಡಸದೇ, ದಿನ ಕಳೆಯುತ್ತಿರುವುದರ ಹಿಂದಿನ ಹುನ್ನಾರ, ಆರೋಪಿಯನ್ನು ರಕ್ಷಿಸುವುದೇ ಆಗಿದೆ. ಇದರ ವಿರುದ್ಧ ಜನಾಂದೋಲನ ರೂಪಿಸಿ, ಆರೋಪಿಯನ್ನು ಬಂಧಿಸುವಂತೆ ಸರಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ಮೇ 30ರಂದು ಇಡೀ ರಾಜ್ಯದ ಮೂಲೆ ಮೂಲೆಯಿಂದ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಹೆಸರಿನಲ್ಲಿ ಜನವಾದಿ ಮಹಿಳಾ ಸಂಘಟನೆ ಸೇರಿ ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಸಂಘಟನೆಗಳೂ ಹೋರಾಟಕ್ಕೆ ಮುಂದಾಗಿವೆ ಎಂದು ಇಂದಿರಮ್ಮ ನುಡಿದರು.

ಸುದ್ದಿಗೋಷ್ಠಿಯಲ್ಲಿ ಚಿಂತಕ ಕೆ.ದೊರೆರಾಜು, ಸಂಯುಕ್ತ ಹೋರಾಟ-ಕರ್ನಾಟಕದ ಸಿ.ಯತಿರಾಜು,ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಮಹಿಳಾ ಹೋರಾಟಗಾರ್ತಿ ಬಿ.ಸಿ.ಶೈಲಾ ನಾಗರಾಜು, ಆರ್.ರಾಮಕೃಷ್ಣಪ್ಪ, ಪಿ.ಎನ್.ರಾಮಯ್ಯ, ಸೈಯದ್ ಮುಜೀಬ್, ಎಐಎಂಎಸ್‌ಎಸ್‌ನ ಕಲ್ಯಾಣಿ, ಮಂಜುಳ ಗೋನಾವರ್ ಮೇ ೩೦ರ ಹಾಸನ ಚಲೋ ಕುರಿತು ಮಾತನಾಡಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ(ಎಂ)ನ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಎ.ಲೋಕೇಶ್, ಡೊಂಬತ್ತನಹಳ್ಳಿ ನಾಗರಾಜು, ರಾಣಿಚಂದ್ರಶೇಖರ್, ಟಿ.ಆರ್.ಕಲ್ಪನಾ ಸೇರಿ ಹಲವರು ಉಪಸ್ಥಿತರಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು