ಮೂರು ತಿಂಗಳಿಂದ ಕೈ ಸೇರದ ಪಿಂಚಣಿ!

KannadaprabhaNewsNetwork |  
Published : May 30, 2024, 12:50 AM ISTUpdated : May 30, 2024, 01:27 PM IST
44 | Kannada Prabha

ಸಾರಾಂಶ

ಬಹುತೇಕ ಫಲಾನುಭವಿಗಳ ಪಿಂಚಣಿ ಜನವರಿ ವರೆಗೆ ಮಾತ್ರ ಜಮೆ ಆಗಿದೆ. ನಂತರ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಿಲ್ಲ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪಿಂಚಣಿಗಳಿಗೆ ಗ್ರಹಣ ಹಿಡಿದಂತಾಗಿದೆ ಎಂಬ ಸಂಶಯ ಮೂಡಿದೆ.

ಧಾರವಾಡ:  ಅಸಹಾಯಕ ಹಾಗೂ ವಿಧವೆಯರು ಮತ್ತು ಅಂಗವಿಕಲರ ಜೀವನಕ್ಕೆ ಭದ್ರತೆ ದೊರೆಯಲಿ ಎಂದು ಅನೇಕ ಸಾಮಾಜಿಕ ಭದ್ರತೆ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಪ್ರತಿ ತಿಂಗಳು ಈ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಬರುವ ಹಣವನ್ನೇ ನೆಚ್ಚಿಕೊಂಡು ಜೀವನ ನಡೆಸುವ ಅದೆಷ್ಟೋ ಜನರಿಗೆ ಕಳೆದ ಮೂರು ತಿಂಗಳಿಂದ ಈ ಪಿಂಚಣಿ ಹಣ ಬಂದಿಲ್ಲ.

ಇದೀಗ ಸಾಮಾಜಿಕ ಭದ್ರತೆ ಯೋಜನೆ ಅಡಿ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಅಂಗವಿಕಲ, ಸಂಧ್ಯಾ ಸುರಕ್ಷಾ, ಮನಸ್ವಿನಿ ಹೀಗೆ ವಿವಿಧ ಮಾಸಾಶನಗಳನ್ನು ನೀಡಲಾಗುತ್ತಿದೆ. ಆದರೆ, ಎರಡ್ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಮಾಸಾಶನ ಜಮೆ ಆಗುತ್ತಿಲ್ಲ ಎಂಬುದು ಫಲಾನುಭವಿಗಳಿಗೆ ಆತಂಕ ಸೃಷ್ಟಿಸಿದೆ. ಫಲಾನುಭವಿಗಳು ನಿತ್ಯ ತಹಸೀಲ್ದಾರ ಕಚೇರಿ, ಬ್ಯಾಂಕ್​ಗಳಿಗೆ ಎಡತಾಕುತ್ತಿದ್ದಾರೆ.

ಧಾರವಾಡ ತಾಲೂಕಿನಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ 10332, ಸಂಧ್ಯಾ ಸುರಕ್ಷಾದಲ್ಲಿ 27802, ವಿಧವಾ ವೇತನ 14912, ಅಂಗವಿಕಲ 23269, ಮೈತ್ರಿ 5, ಮನಸ್ವಿನಿ 2211, ಫಾರ್ಮರ್​ ವಿಡೊ ಪೆನ್ಶನ್​ 52 ಸೇರಿ ಒಟ್ಟು 78583 ಫಲಾನುಭವಿಗಳು ನೋಂದಣಿ ಮಾಡಿಸಿದ್ದಾರೆ. ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ ಯೋಜನೆ (64 ರಿಂದ 65 ವಯಸ್ಸು)ಯಲ್ಲಿ ₹ 600, ಇಂದಿರಾಗಾಂಧಿ ರಾಷ್ಟ್ರೀಯ ಪಿಂಚಣಿ (65 ವರ್ಷ ಮೇಲ್ಪಟ್ಟು) ₹ 1200, ಸಂಧ್ಯಾ ಸುರಕ್ಷಾ ₹1200, ಮನಸ್ವಿನಿ ₹ 600, ವಿಧವಾ ಯೋಜನೆ ₹ 800, ಅಂಗವಿಕಲ (ಶೇ. 45) ₹ 800, ಅಂಗವಿಕಲ (ಶೇ. 75) ₹ 1400, ಅಂಗವಿಕಲ (ಮಾನಸಿಕ) ₹ 2000, ಫಾರ್ಮರ್​ ವಿಡೊ ಪೆನ್ಶನ್​ ₹ 2000 ಹಾಗೂ ಮೈತ್ರಿ ಯೋಜನೆಯಲ್ಲಿ ₹ 600 ಪಿಂಚಣಿ ನೀಡಲಾಗುತ್ತಿದೆ.

ಬಹುತೇಕ ಫಲಾನುಭವಿಗಳ ಪಿಂಚಣಿ ಜನವರಿ ವರೆಗೆ ಮಾತ್ರ ಜಮೆ ಆಗಿದೆ. ನಂತರ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಿಲ್ಲ. ಚುನಾವಣೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಪಿಂಚಣಿಗಳಿಗೆ ಗ್ರಹಣ ಹಿಡಿದಂತಾಗಿದೆ. ತಮ್ಮನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂಬ ಚಿಂತೆಯಲ್ಲಿರುವ ಫಲಾನುಭವಿಗಳು ನಿತ್ಯ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಖಾತೆ ಮಾಹಿತಿ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಆರು ತಿಂಗಳ ಹಿಂದೆ ಪಿಂಚಣಿ ಹಣವನ್ನು ಫಲಾನುಭವಿ ನೀಡಿದ ಬ್ಯಾಂಕ್​ ಖಾತೆ ಬದಲು ಆಧಾರ ಲಿಂಕ್​ ಆಗಿರುವ ಬ್ಯಾಂಕ್​ ಖಾತೆಗೆ ಜಮೆ ಆಗುತ್ತಿರುವುದರಿಂದ ಫಲಾನುಭವಿಗಳಲ್ಲಿ ಗೊಂದಲ ಉಂಟಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಆಧಾರ್​ ಲಿಂಕ್​ ಆಗಿರುವ ಖಾತೆಗೂ ಪಿಂಚಣಿ ಜಮೆ ಆಗಿಲ್ಲ ಎಂದು ಫಲಾನುಭವಿಗಳು ದೂರುತ್ತಿದ್ದಾರೆ. ಹೀಗಾಗಿ ಪಿಂಚಣಿ ಜಮೆಯಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ. ಈ ಸಮಸ್ಯೆಗೆ ಅಧಿಕಾರಿಗಳೇ ಪರಿಹಾರ ನೀಡಬೇಕಿದೆ. ಒಂದು ವೇಳೆ ಅನುದಾನ ಕೊರತೆಯಿಂದ ಸರ್ಕಾರವೇ ಪಿಂಚಣಿ ಪಾವತಿಯಲ್ಲಿ ವಿಳಂಬ ಮಾಡಿದ್ದರೆ, ಜನರ ಕಷ್ಟ ಪರಿಹರಿಸಲು ಸದಾ ಸಿದ್ಧ ಎನ್ನುವ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಈ ಸಮಸ್ಯೆಗೆ ಪರಿಹಾರ ಕೊಡಿಸಬೇಕು ಎನ್ನುತ್ತಾರೆ ಫಲಾನುಭವಿಗಳು.

ಪಿಂಚಣ ಹಣ ಜಮೆಯಾಗಿಲ್ಲ:

ಸುಮಾರು 3 ತಿಂಗಳಿಂದ ಪಿಂಚಣಿ ಹಣ ಜಮೆ ಆಗಿಲ್ಲ. ಕಚೇರಿಯಲ್ಲಿ ಕೇಳಿದರೆ ಆಧಾರ್​ ಲಿಂಕ್​ ಆಗಿರುವ ಖಾತೆಗೆ ಜಮೆ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಆ ಖಾತೆಗೂ ಹಣ ಬಂದಿಲ್ಲ. ಪಿಂಚಣಿ ಹಣವನ್ನೇ ನಂಬಿರುವ ನಮಗೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ಸಂಬಂಧಿಸಿದವರು ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಹೆಸರು ಹೇಳಲಿಚ್ಛಿಸದ ಫಲಾನುಭವಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ