ಸೋಮರಡ್ಡಿ ಅಳವಂಡಿ
ಕಾರ್ಖಾನೆ ತ್ಯಾಜ್ಯದಿಂದ ಕೊಪ್ಪಳ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಜನ, ಜಾನುವಾರುಗಳು ಸಾವನ್ನಪ್ಪುತ್ತಿದ್ದರೆ ಕ್ಯಾನ್ಸರ್ ಮತ್ತು ಕ್ಷಯ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಹಿರೇಬಗನಾಳ ಗ್ರಾಮವೊಂದರಲ್ಲಿ ಒಂದೇ ವರ್ಷದಲ್ಲಿ ನಾಲ್ವರು ಕ್ಯಾನ್ಸರ್‌ಗೆ ಬಲಿಯಾಗಿದ್ದರೆ ಕಾರ್ಖಾನೆ ವ್ಯಾಪ್ತಿಯ ಹತ್ತು ಗ್ರಾಮಗಳಲ್ಲಿ ನಾಲ್ಕು ವರ್ಷದಲ್ಲಿ 300 ಜನರು ಕ್ಷಯ ರೋಗದಿಂದ ಬಳಲುತ್ತಿದ್ದಾರೆ. ಅಚ್ಚರಿ ಎಂದರೆ ಇಡೀ ದೇಶವನ್ನು (ಭಾರತವನ್ನು) 2025ರ ವೇಳೆಗೆ ಕ್ಷಯ ರೋಗ ಮುಕ್ತ ಮಾಡಲು ಕೇಂದ್ರ ಸರ್ಕಾರ ಶ್ರಮಿಸುತ್ತಿದ್ದರೆ ಕೊಪ್ಪಳ ತಾಲೂಕಿನ ಹತ್ತೆ ಗ್ರಾಮಗಳಲ್ಲಿ ನಾಲ್ಕು ವರ್ಷದಲ್ಲಿಯೇ ಬರೋಬ್ಬರಿ 300ಕ್ಕೂ ಹೆಚ್ಚು ರೋಗಿಗಳು ಕ್ಷಯರೋಗದಿಂದ ಬಳಲುತ್ತಿರುವ ಅಘಾತಕಾರಿ ಅಂಕಿ-ಅಂಶಗಳು ಪತ್ತೆಯಾಗಿವೆ. ಕ್ಷಯರೋಗ ನಿರ್ಮೂಲನಾಧಿಕಾರಿ ಕಚೇರಿಯಿಂದಲೇ ಸಿಕ್ಕಿರುವ ಅಂಕಿಸಂಖ್ಯೆ ಇದಾಗಿದೆ.ಹೌದು, ಕೊಪ್ಪಳ ತಾಲೂಕಿನ ಕುಣಿಕೇರಿ, ಕುಣಿಕೇರಿತಾಂಡ, ಬಹುದ್ದೂರಬಂಡಿ, ಬಿ. ಹೊಸಳ್ಳಿ, ಗಿಣಿಗೇರಿ, ಹಿರೇಬಗನಾಳ, ಚಿಕ್ಕಬಗನಾಳ, ಹುಲಿಗಿ, ಮುನಿರಾಬಾದ್ ಹಾಗೂ ಕರ್ಕಿಹಳ್ಳಿ ಗ್ರಾಮಗಳಲ್ಲಿಯೇ 2021ರಿಂದ 2024ರ ವರೆಗೂ ನಾಲ್ಕು ವರ್ಷದಲ್ಲಿ 300ಕ್ಕೂ ಹೆಚ್ಚು ಕ್ಷಯರೋಗಿಗಳು ಪತ್ತೆಯಾಗಿದ್ದಾರೆ, ಕ್ಷಯರೋಗದಿಂದ ಬಳಲಿ ಮೃತಪಟ್ಟವರ ಸಂಖ್ಯೆ ಇನ್ನೆಷ್ಟು ಇದೆಯೋ ದೇವರೇ ಬಲ್ಲ.
ಕ್ಯಾನ್ಸರ್‌ಗೆ ಬಲಿ:
ಜಾನವಾರು ಬಲಿ:
ಮುದ್ದಾಬಳ್ಳಿ ಗ್ರಾಮ ಪಶುಕಿತ್ಸಾಲಯದ ವೈದ್ಯರು ಈ ಕುರಿತು ವರದಿಯನ್ನೇ ಮಾಡಿದ್ದು, ಈ ಭಾಗದಲ್ಲಿ ಜಾನುವಾರು ಸಾಕುವುದು ಸೂಕ್ತವಲ್ಲ. ಇಲ್ಲಿಯ ಮೇವು ಕಾರ್ಖಾನೆ ತ್ಯಾಜ್ಯದಿಂದ ವಿಷವಾಗಿರುವುದರಿಂದ ಜಾನುವಾರುಗಳನ್ನು ಸಾಕಬೇಡಿ ಎಂದು ಪಶು ವೈದ್ಯಕೀಯ ಇಲಾಖೆಗೆ ವರದಿಯನ್ನೇ ನೀಡಿದ್ದಾರೆ. ಹೀಗಾಗಿ, ಈ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಡಿದ್ದ ಅನೇಕ ತೋಟದ ಡೈರಿಗಳು ಮುಚ್ಚಿ ಹೋಗಿವೆ. ರೈತರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ.ಟಿಬಿ ಅಥವಾ ಕ್ಷಯ ರೋಗದಿಂದ ಬಳಲುವವರ ಸಂಖ್ಯೆ ಅಘಾತಕಾರಿಯಾಗಿದೆ. ದೇಶವನ್ನು ಕ್ಷಯರೋಗ ಮುಕ್ತ ಮಾಡುವ ವೇಳೆಯಲ್ಲಿ ಇಷ್ಟೊಂದು ಕ್ಷಯ ರೋಗ ಪತ್ತೆಯಾಗಿರುವುದು ನಿಜಕ್ಕೂ ಅಚ್ಚರಿಯಾಗಿದೆ ಎಂದು ವೈದ್ಯ ಡಾ. ಮಂಜುನಾಥ ಹೇಳಿದರು.ಕೊಪ್ಪಳ ಸುತ್ತಮುತ್ತಲ ಪ್ರದೇಶದಲ್ಲಿ ಕ್ಯಾನ್ಸರ್ ಮತ್ತು ಟಿಬಿ ರೋಗಗಳು ಅಧಿಕವಾಗಿವೆ. ಅನೇಕರು ಬಂದು ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿದ್ದಾರೆ. ಈ ವರ್ಷ ಕುಣಿಕೇರಿಯಲ್ಲಿಯೇ 9 ಕ್ಷಯರೋಗಿಗಳು ಇದ್ದಾರೆಂದು ಗ್ರಾಮಸ್ಥರೇ ಹೇಳಿದ್ದಾರೆ ಎಂದು ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.