ಜನರಿಗೆ ಅಲರ್ಜಿಯಂತಾಗಿವೆ ಸರ್ಕಾರಿ ಶಾಲೆಗಳು

KannadaprabhaNewsNetwork |  
Published : Sep 06, 2024, 01:11 AM IST
೫ ಟಿವಿಕೆ ೧ - ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಹಾಗೂ ಅತ್ಯುತ್ತಮ ಶಿಕ್ಷಕರುಗಳನ್ನು ಅಭಿನಂಧಿಸಲಾಯಿತು. | Kannada Prabha

ಸಾರಾಂಶ

ಸರ್ಕಾರಿ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿ ಓದಿಸುತ್ತಿದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗಳು ಮುಚ್ಚದೇ ಮತ್ತೇನಾಗುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ತುರುವೇಕೆರೆ: ಸರ್ಕಾರಿ ಶಾಲೆಯ ಶಿಕ್ಷಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿ ಓದಿಸುತ್ತಿದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗಳು ಮುಚ್ಚದೇ ಮತ್ತೇನಾಗುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ನಡೆದ ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಸರ್ಕಾರಿ ಶಾಲೆಗಳು ಎಂದರೆ ಜನರಿಗೆ ಅಲರ್ಜಿಯಂತಾಗಿದೆ. ಬಹುಪಾಲು ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ಆಸೆ ಪಡುತ್ತಾರೆ. ಇತ್ತ ಮಕ್ಕಳಿಲ್ಲ ಎಂಬ ಕಾರಣಕ್ಕೆ ಶಾಲೆಯನ್ನು ಮುಚ್ಚುವ ಪರಿಸ್ಥಿತಿ ಇದೆ. ತಾಲೂಕಿನಲ್ಲಿ ಸುಮಾರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ. ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸರ್ಕಾರದ ಸವಲತ್ತು ಪಡೆಯುವ ಎಲ್ಲರೂ ಸರ್ಕಾರಿ ಶಾಲೆಯಲ್ಲೇ ತಮ್ಮ ಮಕ್ಕಳನ್ನು ಓದಿಸಿದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳು ಉದ್ದಾರವಾಗುತ್ತವೆ. ಅಲ್ಲದೇ ಗುಣಮಟ್ಟವೂ ಸಹ ಹೆಚ್ಚುತ್ತದೆ ಎಂದರು. ಶಾಲಾ ಶಿಕ್ಷಕರುಗಳೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಿದರೆ, ಬೇರೆ ಪೋಷಕರು ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಓದಿಸಲು ಬಯಸುವುದರಲ್ಲಿ ತಪ್ಪೇನಿಲ್ಲ. ಹೀಗಾಗಿ ಶಿಕ್ಷಕರಿಗೂ ಸಹ ಬೇರೆಯವರನ್ನು ಸರ್ಕಾರಿ ಶಾಲೆಗೆ ಕಳಿಸಿ ಎಂದು ಕೇಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಶಿಕ್ಷಕರ ಹುದ್ದೆ ಅತ್ಯಂತ ಶ್ರೇಷ್ಠ ಹುದ್ದೆ. ಅದನ್ನು ಯಾವುದೇ ಕಾರಣಕ್ಕೂ ಶಿಕ್ಷಕರು ದುರುಪಯೋಗಪಡಿಸಿಕೊಳ್ಳಬಾರದು. ತಮ್ಮ ಮಕ್ಕಳಂತೆ ಇತರೆ ಮಕ್ಕಳು ಎಂದು ಭಾವಿಸಿ ಮಕ್ಕಳ ಭವಿಷ್ಯವನ್ನು ರೂಪಿಸಲು ಶ್ರಮಿಸಬೇಕು. ಸರ್ಕಾರ ೭ನೇ ವೇತನವನ್ನೂ ಸಹ ನೀಡಿದೆ. ಕೈ ತುಂಬಾ ಸಂಬಳ ದೊರೆಯುತ್ತಿದೆ. ಆ ಸಂಬಳಕ್ಕಾದರೂ ಸಹ ಶಿಕ್ಷಕರು ಪ್ರಾಮಾಣಿಕವಾಗಿ ದುಡಿಯಬೇಕೆಂದು ಹೇಳಿದರು.

ಲಾ ಕಾಲೇಜು ತರಲು ಚಿಂತನೆ

ತಾಲೂಕಿಗೆ ಕಾನೂನು ಪದವಿ ಕಾಲೇಜನ್ನು ತರಲು ಚಿಂತಿಸಲಾಗಿದೆ. ಕ್ಷೇತ್ರದಲ್ಲಿನ ಬಡವರು, ಕೂಲಿಕಾರ್ಮಿಕರು ಮತ್ತು ರೈತರ ಮಕ್ಕಳು ಉನ್ನತ ಶಿಕ್ಷಣ ಓದಲು ಹೊರ ಜಿಲ್ಲೆಗಳಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಗುಡ್ಡೇನಹಳ್ಳಿ ಪ್ರಥಮ ದರ್ಜೆ ಕಾಲೇಜು ಕ್ಯಾಂಪಸ್‌ನಲ್ಲಿ ಸ್ನಾತಕೋತ್ತರ ವಿಭಾಗದ ಅರ್ಥಶಾಸ್ತ್ರ ಮತ್ತು ಎಂ.ಕಾಂ ಪದವಿಗಳನ್ನು ಹೊಸದಾಗಿ ತೆರೆಯುವಂತೆ ಕುಲಪತಿಗಳ ಬಳಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲೇ ಶೈಕ್ಷಣಿಕವಾಗಿ ತುರುವೇಕೆರೆ ೨ನೇ ಸ್ಥಾನದಲ್ಲಿದೆ. ಮೊದಲ ಸ್ಥಾನಕ್ಕೆ ತಲುಪಲು ಶಿಕ್ಷಕರು, ಅಧಿಕಾರಿಗಳು ಕಠಿಣ ಶ್ರಮ ಹಾಕಬೇಕು. ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ಶಿಕ್ಷಕರ ಪಾತ್ರ ಅಪಾರ. ನಮ್ಮಂತಹ ರಾಜಕಾರಣಿಗಳಿಂದ ಹಿಡಿದು ಎಲ್ಲ ವರ್ಗದ ನಾಯಕರು, ವಿದ್ವಾಂಸರು, ಚಿಂತಕರು, ವಿಜ್ಞಾನಿಗಳನ್ನ ರೂಪಿಸುವವರು ಶಿಕ್ಷಕರೇ ಎಂದು ಶಾಸಕ ಕೃಷ್ಣಪ್ಪ ಹೇಳಿದರು. ಬಿಇಒ ಎನ್. ಸೋಮಶೇಖರ್ ಮಾತನಾಡಿ, ರಾಧಾಕೃಷ್ಣನ್ ಚಿಂತನೆ, ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬ ಶಿಕ್ಷಕರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವಿಷಮಸ್ಥಿತಿಯ ಸಮಾಜವನ್ನು ತಿದ್ದುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ಮಾತ್ರ. ಶಿಕ್ಷಕ ವೃತ್ತಿ ಪವಿತ್ರವಾದದು ಅದರ ಗೌರವತ್ವವನ್ನು ಚಾಚೂತಪ್ಪದೆ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ವಿರಕ್ತಮಠದ ಕರಿವೃಷಭ ದೇಶೀ ಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ಮಾದಿಹಳ್ಳಿ ರಾಮಕೃಷ್ಣಮಠದ ಅಧ್ಯಕ್ಷ ಸ್ವಾಮಿ ಮಂಗಳನಾಥನಂದಾಜೀ ಮಹಾರಾಜ್, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸರ್ಕಾರಿ ಹಾಗು ಅನುದಾನಿತ ೩೦ ನಿವೃತ್ತ ನೌಕರರು ಹಾಗು ವಿವಿಧ ವಿಷಯಗಳಲ್ಲಿನ ತಾಲ್ಲೂಕಿನ ೪೦ ಅತ್ಯುತ್ತಮ ಶಿಕ್ಷಕರುಗಳನ್ನು ಅಭಿನಂದಿಸಲಾಯಿತು. ತಹಸೀಲ್ದಾರ್ ಎನ್.ಎಕುಂಞಅಹಮದ್, ಇ.ಓ.ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಂ ರಾಜು, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಇಸಿಒ ಸಿದ್ದಪ್ಪ, ಬಿಆರ್‌ಸಿ ಸುರೇಶ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ರೋಟರಿ ಅಧ್ಯಕ್ಷ ಸಾ.ಶಿ.ದೇವರಾಜು, ಇನ್ನರ್ ವೀಲ್ ಅಧ್ಯಕ್ಷೆ ನೇತ್ರಾ, ಸಾವಿತ್ರಿಭಾಯಿಫುಲೆ ಸಂಘದ ಭವ್ಯ ಸಂಪತ್, ಗುರುರಾಜು, ಸವಿತಾ, ಟ್ರಜರಿ ತ್ರಿನೇಶ್ ಪಾಲ್ಗೊಂಡಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!