ಎಡ, ಬಲ, ನಡುಪಂಥೀಯ ವಿಚಾರ ಗೊಂದಲಗಳಲ್ಲಿ ಜನ: ಡಾ.ಲೋಕೇಶ

KannadaprabhaNewsNetwork |  
Published : Nov 18, 2024, 12:03 AM IST
17ಕೆಡಿವಿಜಿ8-ದಾವಣಗೆರೆಯಲ್ಲಿ ಭಾನುವಾರ ಬೇರು-ಚಿಗುರು ಕನ್ನಡ ಸಾಹಿತ್ಯ-ಸಂಶೋಧನೆ ವಿಚಾರ ವೇದಿಕೆ ದಾವಣಗೆರೆ-ಚಿತ್ರದುರ್ಗ ಉದ್ಘಾಟನಾ ಸಮಾರಂಭ. | Kannada Prabha

ಸಾರಾಂಶ

ಎಡಪಂಥೀಯ, ಬಲಪಂಥೀಯ, ನಡುಪಂಥೀಯ ವಿಚಾರಧಾರೆಗಳ ಮಧ್ಯೆ ಜನಸಾಮಾನ್ಯರು ಯಾವ ವಿಚಾರ ಧಾರೆಗಳನ್ನು ಒಪ್ಪಬೇಕೆಂಬ ಜಿಜ್ಞಾಸೆಯಲ್ಲಿದ್ದಾರೆ. ರಾಜಕೀಯ ಸ್ಪರ್ಶವಿಲ್ಲದೇ ಯಾವುದೇ ಚಿಂತನಗಳೂ ಇಲ್ಲವೆನ್ನುವಂಥ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬೇರು-ಚಿಗುರು ಕನ್ನಡ ಸಾಹಿತ್ಯ-ಸಂಶೋಧನೆ ವಿಚಾರ ವೇದಿಕೆ ಉದ್ಘಾಟನೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಎಡಪಂಥೀಯ, ಬಲಪಂಥೀಯ, ನಡುಪಂಥೀಯ ವಿಚಾರಧಾರೆಗಳ ಮಧ್ಯೆ ಜನಸಾಮಾನ್ಯರು ಯಾವ ವಿಚಾರ ಧಾರೆಗಳನ್ನು ಒಪ್ಪಬೇಕೆಂಬ ಜಿಜ್ಞಾಸೆಯಲ್ಲಿದ್ದಾರೆ. ರಾಜಕೀಯ ಸ್ಪರ್ಶವಿಲ್ಲದೇ ಯಾವುದೇ ಚಿಂತನಗಳೂ ಇಲ್ಲವೆನ್ನುವಂಥ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಸಾಹಿತಿ ಡಾ.ಲೋಕೇಶ ಅಗಸನಕಟ್ಟೆ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ಬೇರು-ಚಿಗುರು ಕನ್ನಡ ಸಾಹಿತ್ಯ-ಸಂಶೋಧನೆ ವಿಚಾರ ವೇದಿಕೆ ದಾವಣಗೆರೆ-ಚಿತ್ರದುರ್ಗ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮಲ್ಲಿ ಇಂದು ಸಾಕಷ್ಟು ವಿಚಾರಧಾರೆಗಳಿವೆ. ಆದರೂ, ಗೆರೆ ಕೊರೆದಂತೆ ಇದೇ ಎಡಪಂಥೀಯ ವಿಚಾರಧಾರೆ, ಇದೇ ಬಲ ಪಂಥೀಯ ವಿಚಾರಧಾರೆಗಳು ಇಲ್ಲ ಎಂದರು.

ರಾಜಕೀಯ ಸ್ಪರ್ಶವಿಲ್ಲದ ಚಿಂತನೆಗಳು ಇಲ್ಲವೆಂಬ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲ ಪಂಥಗಳಲ್ಲೂ ಆಯಾ ಪಂಥದವರ ಮನೋಧರ್ಮಕ್ಕೆ ಅನುಗುಣವಾಗಿ ಆಲೋಚನಾ ಕ್ರಮಗಳನ್ನು ಸಮುದಾಯಕ್ಕೆ ಬಿತ್ತುವ ಕೆಲಸ ನಡೆಯುತ್ತಿದೆ. ಸಮೂಹ ಮಾಧ್ಯಮಗಳು ನಮಗೆ ಗೊತ್ತಿಲ್ಲದಂತೆ ಒಂದು ಬಗೆಯ ಸ್ಥಾಪಿತವಾಗಿರುವ ಆಲೋಚನಾ ಕ್ರಮಗಳನ್ನು ನಮ್ಮಲ್ಲಿ ಬಿತ್ತುತ್ತಿವೆ. ಇದಕ್ಕೆ ಪರ್ಯಾಯವಾಗಿ ಇನ್ನೊಂದು ಬಗೆಯ ಚಿಂತನೆಗಳೂ ನಡೆಯುತ್ತಿವೆ. ಈ ಚಿಂತನೆ ಹಿಂದೆ ಇರಬಹುದಾದ ಪ್ರಗತಿಪರತೆಯ ಬಗ್ಗೆ ನಾವು ಯೋಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ವರ್ಗದ ಜನರಲ್ಲೂ ಓದುವ ಪ್ರವೃತ್ತಿ ಕಡಿಮೆಯಾಗಿದೆ. ಕೇವಲ ವಿದ್ಯಾರ್ಥಿಗಳಲ್ಲಿ ಮಾತ್ರವೇ ಓದುವ ಹವ್ಯಾಸ ಕಡಿಮೆಯಾಗಿಲ್ಲ. ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನ ಓದುವ ಹವ್ಯಾಸದಿಂದ ದೂರ ಉಳಿದಿದ್ದಾರೆ. ಟೀವಿ, ಮೊಬೈಲ್ ಮುಂದೆ ಕುಳಿತರೆ ಅವುಗಳೇ ಎಲ್ಲಾ ವಿಷಯ ಹೇಳುತ್ತವೆ ಎಂದು ಅವರು ತಿಳಿಸಿದರು.

ಸಂಶೋಧನೆಗೆ ಮಾರ್ಗದರ್ಶನ ಮಾಡುವವರಿಗೂ ವಿಷಯದ ಬಗ್ಗೆ ಆಳವಾದ ಜ್ಞಾನ ಇಲ್ಲದ ಅನೇಕರು ಇದ್ದಾರೆ. ಓದುವ ಹವ್ಯಾಸ, ಕುಳಿತುಕೊಂಡು ಮಾತನಾಡುವ ಸೌಹಾರ್ದತೆ ಗೌಣವಾಗುತ್ತಿದೆ. ಇಂಥ ಸಂದರ್ಭದಲ್ಲಿ ಪರಸ್ಪರ ಚರ್ಚೆ ಮಾಡಿ, ಈ ಆಲೋಚನೆಗಳನ್ನು ಶಾಲಾ ಮಕ್ಕಳಿಗೆ ವಿಸ್ತರಿಸಬೇಕು ಎನ್ನುವುದೇ ಈ ವೇದಿಕೆ ಆಶಯವಾಗಿದೆ. ಇಂತಹ ಆಶಯಗಳು ಮೆಚ್ಚಿಕೊಳ್ಳಬೇಕಾದ ಸಂಗತಿ ಎಂದು ಅವರು ಶ್ಲಾಘಿಸಿದರು.

ದಾವಣಗೆರೆ ನಗರವಾಣಿ ಸಹ ಸಂಪಾದಕ, ಹಿರಿಯ ಸಾಹಿತಿ ಬಿ.ಎನ್.ಮಲ್ಲೇಶ ಮಾತನಾಡಿ, ಅಧ್ಯಾಪಕ ಮತ್ತು ಪತ್ರಿಕಾ ವೃತ್ತಿಗೆ ಹೋಗುವವರಿಗೆ ಶುದ್ಧ ಕನ್ನಡದ ಜ್ಞಾನ ಇರಬೇಕು. ಕಲಿಸುವ ಬೇರು ಗಟ್ಟಿಯಾಗಿ ಇಲ್ಲದಿದ್ದರೆ ಚಿಗುರು ಸರಿಯಾಗಿ ಬರುವುದಿಲ್ಲ. ಇಂದು ಬೇರಿನ ಸಮಸ್ಯೆ ಇದೆ. ಬೇರು ಸದೃಢವಾಗಿರದ ಹೊರತು ಒಳ್ಳೆಯ ಚಿಗುರನ್ನು ನಿರೀಕ್ಷೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ವೇದಿಕೆಯ ಡಾ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ಪ್ರಾಂಶುಪಾಲ ಡಾ. ಎಂ.ಆರ್. ಲೋಕೇಶ್, ಎಎಂಎಸ್ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಕೆ.ಅಂಜಿನಪ್ಪ ಇತರರು ಇದ್ದರು.

ಕಾರ್ಯಕ್ರಮದಲ್ಲಿ ಡಿ.ಅಂಜಿನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಪಿ.ರಾಘವೇಂದ್ರ, ಡಾ. ಆರ್.ಬಿ. ಕವಿತಾ, ಬಿ.ಎಚ್. ಸಚಿನ್ ಕಾರ್ಯಕ್ರಮ ನಡೆಸಿಕೊಟ್ಟರು.

- - - -17ಕೆಡಿವಿಜಿ8:

ದಾವಣಗೆರೆಯಲ್ಲಿ ಭಾನುವಾರ ಬೇರು-ಚಿಗುರು ಕನ್ನಡ ಸಾಹಿತ್ಯ-ಸಂಶೋಧನೆ ವಿಚಾರ ವೇದಿಕೆ ದಾವಣಗೆರೆ-ಚಿತ್ರದುರ್ಗ ಉದ್ಘಾಟನಾ ಸಮಾರಂಭ ನಡೆಯಿತು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ