ಪಡಿತರ ಆಹಾರ ಪಡೆಯಲು ನೆಟ್ವರ್ಕ್ ಸಮಸ್ಯೆಯಿಂದ ಜನ ಹೈರಾಣ

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಸ್ತೂರು ಗ್ರಾಮದ ನಿವಾಸಿಗಳು ಪಡಿತರ ಪಡೆಯಲು ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಸ್ತೂರು ಗ್ರಾಮದ ನಿವಾಸಿಗಳು ಪಡಿತರ ಪಡೆಯಲು ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತೂರು ಗ್ರಾಮದ 250ಕ್ಕೂ ಹೆಚ್ಚು ಗ್ರಾಮಸ್ಥರು ಪಡಿತರ ರೇಷನ್ ಪಡೆಯಲು ಗ್ರಾಮದಿಂದ 2 ಕಿಮೀ ದೂರದ ಅರಣ್ಯದಂಚಿನ ಗುಡ್ಡದ ಬಳಿ ಮೊಬೆಲ್ ನೆಟ್ವರ್ಕ್ ಸಿಗುವ ಸ್ಥಳದಲ್ಲಿ ಬಯೋಮೆಟ್ರಿಕ್ ನೀಡಿದ ನಂತರ ಪಡಿತರ ಆಹಾರ ಪದಾರ್ಥಗಳನ್ನು ಪಡೆಯಲು ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ನೆಟ್ ವರ್ಕ್ ಸಮಸ್ಯೆ :

ಪೊನ್ನಾಚಿ ಹಾಗೂ ಅಸ್ತೂರು ಸೇರಿದಂತೆ ಹಲವು ಗ್ರಾಮಗಳ ನಿವಾಸಿಗಳು ಪಡಿತರ ಆಹಾರ ಪದಾರ್ಥಗಳನ್ನು ಪಡೆಯಲು ಗ್ರಾಮದಲ್ಲಿ ನೆಟ್ವರ್ಕ್ ಇಲ್ಲದ ಕಾರಣ ಗುಡ್ಡ ಹತ್ತಬೇಕಾಗಿದೆ. ಹೀಗಾಗಿ ಹಲವಾರು ವರ್ಷಗಳಿಂದಲೂ ಜನಪ್ರತಿನಿಧಿಗಳು ಜಿಲ್ಲಾಡಳಿತ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳಿಗೂ ಗ್ರಾಮದಲ್ಲೇ ನೆಟ್ವರ್ಕ್ ಸಮಸ್ಯೆ ಪರಿಹರಿಸಿ ಪಡಿತರ ಆಹಾರ ಪಡೆಯಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದ್ದರು.

ಚುನಾವಣಾ ಸಂದರ್ಭದಲ್ಲಿ ಮಾತ್ರ ಬರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗುಡ್ಡಗಾಡು ಪ್ರದೇಶದ ಜನತೆಯ ಸಮಸ್ಯೆಯನ್ನು ಕೇಳುವವರು ಹೇಳುವವರು ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿಕಲಚೇತನ ವೃದ್ದರ ಪರದಾಟ :

ಗ್ರಾಮದಲ್ಲಿ ಪಡಿತರ ಆಹಾರ ಪದಾರ್ಥ ಪಡೆಯಲು ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಗ್ರಾಮದಿಂದ ಎರಡು ಕಿಲೋಮೀಟರ್ ದೂರದ ರಸ್ತೆ ಬದಿಯ ಗುಡ್ಡದ ಬಳಿ ನೆಟ್ವರ್ಕ್ ಸಿಗುವ ಸ್ಥಳದಲ್ಲಿ ಬಯೋಮೆಟ್ರಿಕ್ ನೀಡಲು ಗ್ರಾಮಸ್ಥರು ನಡೆದುಕೊಂಡೆ ಹೋಗಿ ಬರಬೇಕಾಗಿರುವುದರಿಂದ ಇಲ್ಲಿನ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಮತ್ತು ಗರ್ಭಿಣಿಯರು ಗ್ರಾಮಸ್ಥರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

ಇದರ ನಡುವೆ ಕಾಡುಪ್ರಾಣಿಗಳ ಹಾವಳಿಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ತುರ್ತು ಸಂದರ್ಭದಲ್ಲಿ ಕರೆ ಮಾಡಲು ಗುಡ್ಡ ಹತ್ತಬೇಕು :

ಇಲ್ಲಿನ ಜನತೆ ಅನಾರೋಗ್ಯಕ್ಕೆ ತುತ್ತಾದಾಗ ತುರ್ತು ಸಂದರ್ಭಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇರುವುದರಿಂದ ಗ್ರಾಮಸ್ಥರು ಪರದಾಡುವಂಥ ಸ್ಥಿತಿ ನಡುವೆ ವಿದ್ಯಾರ್ಥಿಗಳು ಸಹ ಪಾಠ ಪ್ರವಚನಗಳಿಗೆ ಆನ್ಲೈನ್ ತಂತ್ರಾಂಶಗಳನ್ನು ಸದ್ಭಳಕೆ ಮಾಡಿಕೊಳ್ಳಲು ಸಮಸ್ಯೆ ಉಂಟಾಗಿದೆ. ಇದಕ್ಕೆ ಸಂಬಂಧಪಟ್ಟ ಜಿಲ್ಲಾಡಳಿತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಡಿತರ ಚೀಟಿಗಳನ್ನು ಹಿಡಿದು ಗ್ರಾಮದಲ್ಲಿ ಪ್ರತಿಭಟನೆ ಮಾಡಿದ್ದಾರೆ.

------------------

ಪ್ರತಿ ತಿಂಗಳು ಪಡಿತರ ಆಹಾರ ರೇಷನ್ ಪಡೆಯಲು ಗ್ರಾಮಸ್ಥರು ಗ್ರಾಮದಿಂದ 2 ಕಿ.ಮೀ ದೂರದಲ್ಲಿ ನೆಟ್ವರ್ಕ್ ಸಿಗುವ ಸ್ಥಳದಲ್ಲಿ ಬಯೋಮೆಟ್ರಿಕ್ ಬೆಟ್ಟು ಇಡಲು ಹೋಗಿ ಬರಬೇಕಾಗಿದೆ. ವಿಕಲಚೇತನರು, ಗರ್ಭಿಣಿಯರು ಆಹಾರ ಪಡಿತರ ಪಡೆಯಲು ಊಟ ತಿಂಡಿ ಬಿಟ್ಟು ಗ್ರಾಮದ ಹೊರವಲಯದ ಗುಡ್ಡದ ಬಳಿ ತೆರಳಬೇಕಾಗಿದ್ದು, ಅಧಿಕಾರಿಗಳು ಇತ್ತ ಗಮನ ಹರಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು ಇಲ್ಲದಿದ್ದರೆ ತಾಲೂಕು ದಂಡಾಧಿಕಾರಿ ಕಚೇರಿಗಳ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆವೀರೇಶ್ ಹಾಗೂ ರವಿಕುಮಾರ್, ಅಸ್ತೂರು ಗ್ರಾಮ ನಿವಾಸಿಗಳು.

Share this article