ಬೆಣ್ಣೆಹಳ್ಳ, ನದಿ ಪ್ರವಾಹ ಇಳಿಮುಖ ಜನರು ನಿರಾಳ

KannadaprabhaNewsNetwork |  
Published : Jun 14, 2025, 02:17 AM IST
ಸತತ ಮಳೆಯಿಂದ ಹೊಳೆಆಲೂರ ಹೋಬಳಿಯ ಗ್ರಾಮಗಳ ರೈತರ ಜಮೀನಲ್ಲಿರುವ ಬೆಳೆ ನಾಶವಾಗುತ್ತಿರುವುದು. | Kannada Prabha

ಸಾರಾಂಶ

ಹೋಬಳಿಯ ಗ್ರಾಮಗಳಲ್ಲಿ ಮಳೆ ಜೋರಾಗಿಯೇ ಅಬ್ಬರಿಸುತ್ತಿದೆ. ಇಲ್ಲಿ ಹರಿಯುವ ಬೆಣ್ಣೆಹಳ್ಳ ಸ್ವಲ್ಪ ಇಳಿಮುಖ ಕಂಡಿದೆ. ಮಲಪ್ರಭಾ ನದಿಗೆ ಸೇರುವ ಬೆಣ್ಣೆಹಳ್ಳ ಹಾಗೂ ಹೀರೆಹಳ್ಳಗಳಿಂದ ನದಿ ಪಾತ್ರದ ಜನರಲ್ಲಿ ಸ್ವಲ್ಪ ಆತಂಕ ಮೂಡಿಸಿದೆ.

ಹೊಳೆಆಲೂರ: ಹೋಬಳಿಯ ಗ್ರಾಮಗಳಲ್ಲಿ ಮಳೆ ಜೋರಾಗಿಯೇ ಅಬ್ಬರಿಸುತ್ತಿದೆ. ಇಲ್ಲಿ ಹರಿಯುವ ಬೆಣ್ಣೆಹಳ್ಳ ಸ್ವಲ್ಪ ಇಳಿಮುಖ ಕಂಡಿದೆ. ಮಲಪ್ರಭಾ ನದಿಗೆ ಸೇರುವ ಬೆಣ್ಣೆಹಳ್ಳ ಹಾಗೂ ಹೀರೆಹಳ್ಳಗಳಿಂದ ನದಿ ಪಾತ್ರದ ಜನರಲ್ಲಿ ಸ್ವಲ್ಪ ಆತಂಕ ಮೂಡಿಸಿದೆ.ಇತ್ತ ಸತತ ಮಳೆಯಾಗುತ್ತಿರುವುದರಿಂದ ಬಿತ್ತಿದ ಗೋವಿನಜೋಳ, ಹೆಸರು ನೀರಲ್ಲಿ ಕೊಳೆಯಲಾರಂಭಿಸಿವೆ. ಈಗಾಗಲೇ ಎರಡೆಲೆ, ಗೇಣೆತ್ತರ ಬೆಳೆದ ಹೆಸರು, ಚಿಗುರೊಡೆದ ಗೋವಿನಜೋಳ ನೀರಲ್ಲಿ ನಾಶವಾಗುತ್ತಿವೆ. ಬೆಳೆ ನಾಶವಾಗುತ್ತಿರುವುದನ್ನು ಕಂಡು ರೈತ ಮರಗುತ್ತಿದ್ದಾನೆ.

ಬೆಳೆ ಸಂಪೂರ್ಣ ನಾಶ: ಹೊಳೆಆಲೂರ ಸೇರಿದಂತೆ ಹೋಬಳಿ ಮೆಣಸಗಿ, ಗುಳಗಂದಿ, ಅಸೂಟಿ, ಮೆಗೂರ, ಮಾಳವಾಡ, ಕರಮುಡಿ, ಹೊಳೆಮಣ್ಣೂರ, ಗಾಡಗೋಳಿ, ಕುರವಿನಕೊಪ್ಪ, ಅಮರಗೋಳ, ಹೊಳೆಹಡಗಲಿ, ಬಸರಕೋಡ, ಬಿ.ಎಸ್.ಬೇಲೇರಿ, ಬೋಪಳಪೂರ, ಕರಕಿಕಟ್ಟಿ ಗ್ರಾಮಗಳ ಬೆಳೆ ಬೆಣ್ಣೆಹಳ್ಳ ಪ್ರವಾಹದಿಂದ ಸಂಪೂರ್ಣ ನಾಶವಾಗಿವೆ.

ಈ ಭಾಗದ ರೈತರು ಗೋವಿನಜೋಳ, ಹೆಸರು ಬಿತ್ತನೆ ಮಾಡಿದ್ದು, ಸಾಲ ಮಾಡಿ ಗೊಬ್ಬರ, ಬೀಜ, ಬಿತ್ತನೆ ಮಾಡಿದ್ದಾರೆ. ಹೆಚ್ಚಿನ ಇಳುವರಿ ಬರುವ ಸಲುವಾಗಿ ಕೆಲವು ರೈತರು ದಾವಣಗೆರೆ, ಹಾವೇರಿ, ಬೆಂಗಳೂರು, ವಿಜಯಪುರ, ಬಾಗಲಕೋಟೆ ಹೀಗೆ ಬೇರೆ ಜಿಲ್ಲೆಗಳಿಂದ ಬೀಜ ತರಿಸಿ ಬಿತ್ತನೆ ಮಾಡಿದ್ದಾರೆ. ಆದರೆ ಈಗ ನಾಶವಾದ ಬೆಳೆ ಮತ್ತೆ ಬೆಳೆಯಲು ತಕ್ಷಣ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಬೆನಹಾಳ, ಹುನಗುಂಡಿ, ಸೋಮನಕಟ್ಟಿ, ಮೇಲ್ಮಠ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಗೆ ವೃದ್ಧರು, ಮಕ್ಕಳು ಪರದಾಡುವಂತಾಗಿದೆ.

ಗುರುವಾರ ಬೆಣ್ಣೆಹಳ್ಳ ಪ್ರವಾಹದಿಂದ ರಾತ್ರಿ ವೇಳೆ ಅಸೂಟಿ ಕೆಲ ಮನೆಗಳ ಮುಂದೆ ನೀರು ನಿಂತು ಅವಾಂತರ ಸೃಷ್ಟಿಸಿತು. ಇನ್ನು ಮಲಪ್ರಭಾ ನದಿ ತಡದ ಹೊಳೆಹಡಗಲಿ ಗ್ರಾಮಕ್ಕೆ ನೀರು ಸುತ್ತುವರೆದು, ಕೂರವಿನಕೊಪ್ಪ ರಸ್ತೆ ಕೂಡಾ ಬಂದಾಗಿತ್ತು. ಮೆಣಸಗಿ ಗ್ರಾಮದ ಕರಿಯಮ್ಮದೇವಿ ದೇವಸ್ಥಾನದವರೆಗೂ ಬೆಣ್ಣೆಹಳ್ಳ ಬಂದಿತ್ತು. ಹಳ್ಳದ ಒತ್ತಡ ಮಲಪ್ರಭಾ ನದಿ ತಡದ ಹೊಳೆಆಲೂರ ನೂತನ ವೀರಭದ್ರೇಶ್ವರ ದೇವಸ್ಥಾನ ಹಾಗೂ ಉಮಾಮಹೇಶ್ವರ ದೇವಾಲಯ ಜಲಾವೃತಗೊಂಡಿವೆ.

ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳದ ಪಾತ್ರದ ಹಳ್ಳಿಗಳಿಗೆ ಕಂದಾಯ ಅಧಿಕಾರಿಗಳು, ತಾಲೂಕು ಆಡಳಿತ ಅಧಿಕಾರಿಗಳು, ರೋಣ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಮುನ್ನಚ್ಚರಿಕೆ ಕ್ರಮ ಕೈ ಗೊಂಡಿದ್ದಾರೆ. ತರಕಾರಿ ನೀರು ಪಾಲು:ಶುಕ್ರವಾರ ಹೊಳೆಆಲೂರಲ್ಲಿ ವಾರದ ಸಂತೆ ಇದ್ದು, ಜನರಿಲ್ಲದೇ ಭಣಗುಡುತ್ತಿತ್ತು, ಸಂತೆ ವ್ಯಾಪಾರಸ್ಥರು ಸತತ ಮಳೆಯ ಕಾರಣ ತರಕಾರಿಗಳ ರಕ್ಷಣೆಗೆ ಪರದಾಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ