ಮೈಸೂರು: ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರವು 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಕಸಬಾ ಹೋಬಳಿಯ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಹತ್ತಿ ಮತ್ತು ಮುಸುಕಿನಜೋಳದ ಬೆಳೆಯಲ್ಲಿ ಕೀಟ/ ರೋಗಗಳ ಹತೋಟಿ ಕ್ರಮಗಳು ಕುರಿತು ತರಬೇತಿ ಆಯೋಜಿಸಿದ್ದರು.
ತರಬೇತಿ ಕೇಂದ್ರದಲ್ಲಿ ಆಯೋಜಿಸುತ್ತಿರುವ ವಿವಿಧ ಆನ್ ಲೈನ್ ಮತ್ತು ಸಾಂಸ್ಥಿಕ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಅದರ ಸದುಪಯೋಗ ಪಡೆಯುವಂತೆ ರೈತರಿಗೆ ತರಬೇತಿ ಸಂಯೋಜಕ ಎಚ್.ಆರ್. ರಾಜಶೇಖರ ಮನವಿ ಮಾಡಿದರು.
ನಿವೃತ್ತ ಮಣ್ಣು ವಿಜ್ಞಾನಿ ಜೆ.ಜಿ. ರಾಜಣ್ಣ ಅವರು ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಮಾದರಿ ಸಂಗ್ರಹಿಸುವ ವಿಧಾನ ಹಾಗೂ ಶಿಫಾರಸ್ಸಿನಂತೆ ರಸಗೊಬ್ಬರ ಬಳಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು.ತರಬೇತಿ ಅಂಗವಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಮುಸಕಿನ ಜೋಳ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ಮಾಹಿತಿ ನೀಡಿದರು.
ಮುಸುಕಿನ ಜೋಳ ಬಿತ್ತನೆಗೆ ಮೊದಲು ಪ್ರತಿ 1 ಕೆಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇ. 30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಬೂಜು/ಕೇದಿಗೆ ರೋಗ ನಿರೋಧಕ ತಳಿಗಳಾದ ಹೇಮ, ನಿತ್ಯಶ್ರೀ ಯನ್ನು ಬೆಳೆಯುವುದು ಸೂಕ್ತ ಎಂದರು.
ಸರಗೂರು ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಚೈತ್ರಾ ಅವರು ತೋಟಗಾರಿಕೆ ಇಲಾಖೆಯಲ್ಲಿ ಅನುಷ್ಟಾನಗೊಳಿಸುವ ವಿವಿಧ ಯೋಜನೆಗಳಡಿ ದೊರೆಯುವ ಸಹಾಯಧನ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಮಾಹಿತಿ ನೀಡಿದರು.