ಕೆ. ರಮೇಶ್
ಈ ಬಾರಿ ಬಿಸಿಲಿನ ತೀವ್ರತೆ ಈ ಹಿಂದೆಂದೂ ಕಂಡು ಕೇಳರಿಯದಷ್ಟು ಹೆಚ್ಚಿದೆ. ಬಿಸಿಲ ಬೇಗೆ ತಾಳಲಾರದೆ ಜನ ಹೈರಾಣಾಗಿ ದೇಹವನ್ನು ತಂಪಾಗಿಸಿಕೊಳ್ಳಲು ಎಳನೀರು, ಮಜ್ಜಿಗೆ ಹಾಗೂ ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ.ಕೆಂಡದಂತ ಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಜನಸಾಮಾನ್ಯರು ದಾಹ ತೀರಿಸಿಕೊಳ್ಳಲು ಆರೋಗ್ಯ ಯುಕ್ತ ಎಳನೀರು ಕುಡಿಯುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಾಗಿರುವ ತಾಪಮಾನ ಜನಸಾಮಾನ್ಯರನ್ನು ಇನ್ನಿಲ್ಲದಂತೆ ಹೈರಾಣು ಮಾಡುತ್ತಿದೆ. ತಾಲೂಕಿನಾದ್ಯಂತ 38 - 39 ಡಿಗ್ರಿ ಆಸುಪಾಸು ಉಷ್ಣಾಂಶ ದಾಖಲಾಗುತ್ತಿದೆ. ಜನರು ಮನೆಯಿಂದ ಹೊರಗೆ ಬಾರದಂತೆ ಮಾಡಿದೆ. ಮುಂಗಾರು ಹಂಗಾಮಿನ ಮಳೆಯ ಕೊರತೆ ಬಿಸಿಲ ಝಳಕ್ಕೆ ತುಪ್ಪ ಸುರಿಯುವ ಕಾರ್ಯ ಮಾಡಿದೆ.ಬಿಸಿಲ ಬೇಗೆಗೆ ಎಷ್ಟು ನೀರು ಕುಡಿದರೂ ದಾಹ ನೀಗುತ್ತಿಲ್ಲ. ಆರೋಗ್ಯದ ದೃಷ್ಟಿಯಿಂದ ಎಳನೀರು ಉತ್ತಮ ಖನಿಜಾಂಶ ಹೊಂದಿದ ಆರೋಗ್ಯಯುಕ್ತ ಪೇಯವಾಗಿದೆ. ಬೇಸಿಗೆಯ ಪೂರ್ವದಲ್ಲಿ ಎಳನೀರಿನ ಬೆಲೆ 30- 40 ರು. ರಷ್ಟಿತ್ತು. ಯಾವಾಗ ಬೇಸಿಗೆ ಆರಂಭವಾಯಿತೋ ಎಳನೀರಿನ ಬೆಲೆ 50 ರು.ಗೆ ಏರಿಕೆಯಾಗಿದೆ. ಎಳನೀರು ಸಹ ಗುಣಮಟ್ಟದ ಕಾಯಿಗಳು ಲಭ್ಯವಾಗುತ್ತಿಲ್ಲ. ಮಳೆ ಕೊರತೆಯಿಂದ ಅದಕ್ಕೂ ಭಾರೀ ಬೇಡಿಕೆ ಕಂಡು ಬಂದಿದೆ. ಈ ಹಿಂದೆ ಸೈಕಲ್‌ನಲ್ಲಿ ಮನೆಗಳ ಬಳಿಯೇ ಬಂದು ಮಾರಾಟ ಮಾಡುತ್ತಿದ್ದರು. ಈಗ ಬೇಡಿಕೆಗೆ ಅನುಗುಣವಾಗಿ ಫಸಲು ಇಲ್ಲದ ಕಾರಣ ಜನರೇ ಎಳನೀರನ್ನು ಹುಡುಕಿಕೊಂಡು ಹೋಗಬೇಕಾಕಿದೆ. ಒಂದು ಕಡೆ ಸೆಕೆ ಮತ್ತೊಂದು ಕಡೆ ವಿದ್ಯುತ್ ಸಹ ಆಗಾಗ ಕೈಕೊಡುವುದರಿಂದ ಬಿಸಿಯನ್ನು ಸಹಿಸಲಾಗದೆ ಜನರು ತತ್ತರಿಸಿ ಹೋಗಿದ್ದಾರೆ. ಈ ಬೇಸಿಗೆ ಯಾವಾಗ ಮುಗಿಯುತ್ತದೆ ಎಂದು ಕಾಯುವಂತಾಗಿದೆ.ಹಣ್ಣು, ಮಜ್ಜಿಗೆಗೂ ಬೇಡಿಕೆ: ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಸೇರಿದಂತೆ ನಾನಾ ಬಗೆಯ ಹಣ್ಣುಗಳಿಗೂ ವಿಪರೀತ ಬೇಡಿಕೆ ಉಂಟಾಗಿದೆ. ಅದೇ ರೀತಿ ದೇಹ ತಂಪಾಗಿಸಲು ಜನ ಮಜ್ಜಿಗೆಯ ಮೊರೆ ಹೋಗುತ್ತಿದ್ದಾರೆ.ಕೋಟ್‌ಗಳು:ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಅನಾರೋಗ್ಯಯುಕ್ತ ಕೋಲ್ಡ್ ಡ್ರಿಂಕ್ಸ್ ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುವ ಬದಲು ಆರೋಗ್ಯಕರ ಎಳನೀರು, ನಿಂಬೆಹಣ್ಣಿನ ಜ್ಯೂಸ್, ಕಬ್ಬಿನ ಹಾಲು ಹಾಗೂ ಹಣ್ಣಿನ ರಸ ಕುಡಿಯುವುದು ಸೂಕ್ತ.-ಡಾ. ನಟರಾಜ್. ವೈದ್ಯರು
------ಈ ವರ್ಷ ಬಿಸಿಲು ಹೆಚ್ಚಾಗಿರುವುದರಿಂದ ಎಳನೀರಿನ ಬೇಡಿಕೆ ಹೆಚ್ಚಾಗಿದೆ. ಜನರು ಎಳನೀರು ಮೊರೆ ಹೋಗುತ್ತಿರುವುದು ಉತ್ತಮ. ಆದರೆ ಉತ್ತಮ ಎಳನೀರು ಕಾಯಿಗಳು ಸಿಗುತ್ತಿಲ್ಲ. ಸಿಕ್ಕರೂ ಬೆಲೆ ಹೆಚ್ಚಾಗಿರುವುದರಿಂದ ಲಾಭಾಂಶ ಕಡಿಮೆಯಾಗಿದೆ.
ಎಳನೀರು ವ್ಯಾಪಾರಿ