ವೈದ್ಯಕೀಯ ಸೇವೆಗೆ ಹೋಗಬೇಕಾದ ಆ್ಯಂಬುಲೆನ್ಸ್‌ಗೂ ದಾರಿ ಸಿಗುವುದು ಕಷ್ಟ
ಪ್ರಸಾದ್ ಹೆಗಡೆ ನಗರೆಕನ್ನಡಪ್ರಭ ವಾರ್ತೆ ಹೊನ್ನಾವರ
ಕರಾವಳಿ ತೀರದ ಪ್ರಮುಖ ಪಟ್ಟಣವಾದ ಹೊನ್ನಾವರವು ಪ್ರಸ್ತುತ ತೀವ್ರ ಸಂಚಾರ ದಟ್ಟಣೆಯ ಅವ್ಯವಸ್ಥೆಯಿಂದ ತತ್ತರಿಸಿದೆ. ರಾಷ್ಟ್ರೀಯ ಹೆದ್ದಾರಿ 66 ಮತ್ತು ಶರಾವತಿ ನದಿಯ ಗುಂಟ ನಡೆಯುತ್ತಿರುವ ಪ್ರವಾಸಿ ಚಟುವಟಿಕೆಗಳು, ಅಪೂರ್ಣಗೊಂಡ ರಸ್ತೆ ಕಾಮಗಾರಿಗಳೊಂದಿಗೆ ಸೇರಿ ಈ ಸಮಸ್ಯೆಯನ್ನು ಉಲ್ಬಣಗೊಳಿಸಿವೆ.ಪಟ್ಟಣದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳ್ಳದಿರುವುದು ಟ್ರಾಫಿಕ್ ಜಾಮ್‌ಗೆ ಮೂಲ ಕಾರಣವಾಗಿದೆ. ಅಲ್ಲದೆ ಶರಾವತಿ ಬೋಟಿಂಗ್‌ಗೆ ಹೋಗುವ ರಸ್ತೆಯೂ ಸಹ ಸಮರ್ಪಕವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಬೋಟಿಂಗ್‌ಗೆ ಹೋಗುವ ರಸ್ತೆ ಇದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ವಾಹನಗಳು ಏಕಕಾಲದಲ್ಲಿ ಸಂಚರಿಸುತ್ತಿರುತ್ತದೆ. ಹೀಗಾಗಿ ಬೋಟಿಂಗ್ ಹೋಗುವ ವಾಹನಗಳು ಹಾಗೂ ಹೆದ್ದಾರಿಯ ವಾಹನಗಳ ಕಾರಣದಿಂದ ವಾಹನ ದಟ್ಟಣೆ ಉಂಟಾಗುತ್ತದೆ.
ಪಟ್ಟಣದ ವ್ಯಾಪ್ತಿಯಲ್ಲಿ ಹೆದ್ದಾರಿಗೆ ಅಂಟಿಕೊಂಡಂತೆ ಸರ್ವಿಸ್ ರಸ್ತೆ ನಿರ್ಮಾಣವಾಗಿಲ್ಲ. ಇದರಿಂದಾಗಿ ಸ್ಥಳೀಯ ವಾಹನಗಳು, ಬಸ್ ನಿಲ್ದಾಣಕ್ಕೆ ಬರುವ ಬಸ್ ಮತ್ತು ಮುಖ್ಯ ಹೆದ್ದಾರಿಯಲ್ಲಿ ಸಾಗುವ ಭಾರೀ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ.ಹಲವು ಕಡೆ ರಸ್ತೆ ಕಾಮಗಾರಿಗಳ ಸಲುವಾಗಿ ಮಾರ್ಗವು ಕಿರಿದಾಗಿದ್ದು, ವಾಹನಗಳು ನಿಧಾನವಾಗಿ ಸಾಗಬೇಕಿದೆ. ಒಂದು ವಾಹನ ಕೆಟ್ಟು ನಿಂತರೂ ಸಾಕು, ಇಡೀ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಳ್ಳುವ ಪರಿಸ್ಥಿತಿ ಇದೆ.
ಮಳೆಗಾಲದ ಹಿನ್ನೆಲೆ ನಿಂತಿದ್ದ ಬೋಟಿಂಗ್ ಆರಂಭ:ಜೂನ್‌ನಿಂದ ಆರಂಭಿಸಿ ಇಲ್ಲಿಯವರೆಗೆ ಶರಾವತಿ ನದಿಯಲ್ಲಿ ನಡೆಯುವ ಬೋಟಿಂಗ್ ಮತ್ತೆ ಪ್ರಾರಂಭವಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೋಟಿಂಗ್ ನ್ನು ಮಳೆಗಾಲದಲ್ಲಿ ನಿಲ್ಲಿಸಲಾಗಿತ್ತು. ಇದೀಗ ಮಳೆಗಾಲ ಮುಗಿದಿದ್ದು ಮತ್ತೆ ಬೋಟಿಂಗ್ ಆರಂಭಗೊಂಡಿದೆ.
ಗೋಕರ್ಣ ಮತ್ತು ಮುರುಡೇಶ್ವರದಂತಹ ಪ್ರಸಿದ್ಧ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಈಗಾಗಲೇ ಹೆಚ್ಚಾಗಿದೆ. ಇದರ ಜೊತೆಗೆ ಬೋಟಿಂಗ್‌ಗೆ ಬರುವ ಪ್ರವಾಸಿಗರ ವಾಹನಗಳು ಹೆಚ್ಚಾಗಿ ಆಗಮಿಸುತ್ತಿವೆ.ಬೋಟಿಂಗ್ ತಾಣಗಳ ಬಳಿ ಸಾಗುವ ರಸ್ತೆಯೂ ಕಿರಿದಾಗಿದ್ದು ಇಲ್ಲಿ ಸಂಚರಿಸುವ ವಾಹನಗಳಿಂದಲೂ ಟ್ರಾಫಿಕ್ ಸಮಸ್ಯೆ ಆಗುತ್ತಿದೆ.
ಇದರಿಂದಾಗಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿ ಸಂಚಾರ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥೆಗೆ ತಿರುಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.ರಜಾ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರ:
ವಾರಾಂತ್ಯ, ಹಬ್ಬದ ರಜಾದಿನಗಳಲ್ಲಿ, ಹೊಸ ವರ್ಷ ಅಥವಾ ಇತರ ರಜಾ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ರಾಜ್ಯದ ಮತ್ತು ಹೊರ ರಾಜ್ಯಗಳ ಸಾವಿರಾರು ವಾಹನಗಳು ಏಕಕಾಲದಲ್ಲಿ ಈ ಮಾರ್ಗದಲ್ಲಿ ಸಾಗುವುದರಿಂದ, ವಾಹನ ಸವಾರರು ಮತ್ತು ಸ್ಥಳೀಯರು ಗಂಟೆಗಟ್ಟಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೇವೆಗೆ ಹೋಗಬೇಕಾದ ಆ್ಯಂಬುಲೆನ್ಸ್‌ಗಳಿಗೂ ದಾರಿ ಸಿಗುವುದು ಕಷ್ಟಕರವಾಗಿದೆ.