ಗದಗ: ಅಧಿಕಾರ, ಅಂತಸ್ತು ಶಾಶ್ವತವಾದುದಲ್ಲ. ಇವುಗಳು ದೊರೆತ ಸಂದರ್ಭದಲ್ಲಿ ಜನಮಾನಸದಲ್ಲಿ ನೆಲೆ ನಿಲ್ಲುವ ಕಾರ್ಯ ಮಾಡಬೇಕು. ಜನರಿಂದಲೇ ದೊರೆಕಿರುವದರಿಂದ ಅವರಿಗೆ ಸಮರ್ಪಿಸುವ ಕೆಲಸ ಮಾಡುವವರು ಆದರ್ಶಪ್ರಾಯರಾಗುತ್ತಾರೆ. ಈ ನಿಟ್ಟಿನಲ್ಲಿ ರಾಣಿ ಅಹಲ್ಯಾಬಾಯಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು. ಸಾಮಾಜಿಕ ಕಾರ್ಯಗಳ ಜತೆಗೆ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದರು ಎಂದು ಓಂಕಾರೇಶ್ವರ ಮಠದ ಫಕೀರೇಶ್ವರ ಶಿವಾಚಾರ್ಯಸ್ವಾಮಿಗಳು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕಿ ಶೋಭಾ ಯಕ್ಕೇಲಿ ಉಪನ್ಯಾಸ ನೀಡಿ, ಮಾಳ್ವ ಪ್ರಾಂತ್ಯದ ರಾಣಿಯಾಗಿದ್ದ ಅಹಲ್ಯಾಬಾಯಿ ಹೋಳ್ಕರ್ ಅಧಿಕಾರ ಮತ್ತು ಹಣವನ್ನು ಸಮಾಜೋಪಯೋಗಿ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ. ಉತ್ತಮ ಆಡಳಿತ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳು ಹಾಗೂ ಆಕೆ ಮಾಡಿದ ದಾನ, ದತ್ತಿಗಳು ಭಾರತೀಯ ಪರಂಪರೆ ಉಜ್ವಲಗೊಳಿಸಿದರು. ಯುದ್ಧದಾಹಿಯಾಗದೇ ಚಾಕಚಕ್ಯತೆಯಿಂದ ಸಮಸ್ಯೆಗಳನ್ನು ನಿವಾರಿಸಿ ಜನೋಪಯೋಗಿ ಕಾರ್ಯ ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ನಿಂತಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಅನೇಕ ರಾಜಮನೆತನಗಳು ಜನಕಲ್ಯಾಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ಕೆರೆಕಟ್ಟೆ, ವಾಸ್ತುಶಿಲ್ಪ ಕಾಣಬಹುದಾಗಿದೆ ಎಂದು ತಿಳಿಸಿದರು.ಡಾ.ದತ್ತಪ್ರಸನ್ನ ಪಾಟೀಲ, ಜಯದೇವ ಮೆಣಸಗಿ ಮುಂತಾದವರು ಮಾತನಾಡಿದರು.