ಕನಕಗಿರಿ:
ಪ್ರತಿ ವರ್ಷದಂತೆ ಈ ವರ್ಷವೂ ಎತ್ತುಗಳಿಗೆ ಜೂಲು, ಕೊಂಬಣಸು, ಗಗ್ಗರಿ, ಗೊಂಡೆ, ಗೆಜ್ಜೆ ಸೇರಿದಂತೆ ನಾನಾ ಬಗೆಯ ಹೂವುಗಳಿಂದ ಸಿಂಗರಿಸಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಆನೆಗೊಂದಿ ಅಗಸಿಯಿಂದ ಕೊಪ್ಪಳದ ಅಗಸಿ ವರೆಗೆ ಎತ್ತುಗಳ ಮೆರವಣಿಗೆ ನಡೆಯಿತು.
ಎರಡು ಅಗಸಿಯ ಮುಂಭಾಗದಲ್ಲಿ ಸಂಡಿಗೆ, ಹೂ ಹಾಗೂ ಬೇವಿನತಪ್ಪಲು ಅಡ್ಡಲಾಗಿ ಕಟ್ಟಿದ್ದ ತೋರಣವನ್ನು ಹಾಲುಮತ ಸಮಾಜದ ರೈತರ ಸೇರಿದ್ದ ಎತ್ತುಗಳು ಹರಿದವು. ಹಾಲುಮತ ಸಮಾಜದವರ ಎತ್ತುಗಳು ಕರಿ ಹರಿದರೆ ಊರಿಗೆ ಒಳ್ಳೆಯದು ಎಂಬ ನಂಬಿಕೆಯಿಂದ ಮೊದನಿಂದಲೂ ಇದೇ ಸಂಪ್ರದಾಯ ಪಟ್ಟಣದಲ್ಲಿ ಮುಂದುವರಿದಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಹುಣ್ಣಿಮೆ ದಿನವೇ ಕರಿ ಹರಿಯುವ ಸಂಪ್ರದಾಯ ನಡೆದರೆ ಮೂಲ ನಕ್ಷತ್ರ ದಿನ ಪಟ್ಟಣದಲ್ಲಿ ನಡೆದಿರುವುದು ವಿಶೇಷ ಎನ್ನುತ್ತಾರೆ ರೈತರು.ಹಬ್ಬದ ಕುರಿತು ರೈತ ಮುಖಂಡ ಮಂಜುನಾಥರೆಡ್ಡಿ ಶಿವನಗುಂಡಿ ಮಾತನಾಡಿ, ಮಳೆಗಾಲ ಆರಂಭಗೊಂಡಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಗಾರು ಮಳೆಯೂ ಉತ್ತಮವಾಗಿ ಆಗಿದ್ದು ಭೂಮಿ ತಂಪಾಗಿದೆ. ಕೃಷಿ ಚಟುವಟಿಕೆ ಬರದಿಂದ ಸಾಗಿದ್ದು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದ್ದೇವೆ ಎಂದರು.
ಪ್ರಮುಖರಾದ ಬಸವರಾಜ ಕುರುಬರ, ಮಂಜುನಾಥ ಕೊರೆಡ್ಡಿ, ಗಂಗಾಧರ ಚೌಡ್ಕಿ, ರಂಜಾನಸಾಬ ಪಿಂಜಾರ, ಚಾಂದಪಾಷ ಗಂಗಾವತಿ, ಸಂಗಮೇಶರೆಡ್ಡಿ ಓಣಿಮನಿ, ರಾಮಾಂಜನೇಯ್ಯರೆಡ್ಡಿ ಚಿತ್ರಿಕಿ, ಕನಕರೆಡ್ಡಿ ಚಿತ್ರಿಕಿ, ಲಾಲಸಾಬ ಹರಿಜನ, ಕರಡೆಪ್ಪ ತೆಗ್ಗಿನಮನಿ, ಬಸವರಾಜ ದೇಸಾಯಿ, ವೆಂಕೋಬ ಮರಾಠಿ ಸೇರಿದಂತೆ ಇತರರಿದ್ದರು.