ರೈಲು ಓಡಾಟ ಕಂಡು ಜನರ ಹರ್ಷೋದ್ಗಾರ

KannadaprabhaNewsNetwork | Published : May 16, 2025 2:05 AM
Follow Us

ಸಾರಾಂಶ

ಕುಷ್ಟಗಿಯಿಂದ ಹುಬ್ಬಳ್ಳಿಗೆ ಗುರುವಾರದಿಂದ ನೂತನವಾಗಿ ಆರಂಭಿಸಿರುವ ರೈಲು ಯಲಬುರ್ಗಾ ತಾಲೂಕಿನ ಲಿಂಗನಬಂಡಿ, ಯಲಬುರ್ಗಾ, ಸಂಗನಹಾಳ, ಕುಕನೂರು, ತಳಕಲ್ಲಿನ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಪ್ರಥಮವಾಗಿ ತಮ್ಮೂರಿಗೆ ರೈಲು ಆಗಮಿಸಿದ ಖುಷಿಯಲ್ಲಿ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಂಭ್ರಮಿಸಿ ಸ್ವಾಗತಿಸಿದರು.

ಕುಕನೂರು:

ಕುಷ್ಟಗಿಯಿಂದ ಹುಬ್ಬಳ್ಳಿಗೆ ಗುರುವಾರದಿಂದ ನೂತನವಾಗಿ ಆರಂಭಿಸಿರುವ ರೈಲು ಯಲಬುರ್ಗಾ ತಾಲೂಕಿನ ಲಿಂಗನಬಂಡಿ, ಯಲಬುರ್ಗಾ, ಸಂಗನಹಾಳ, ಕುಕನೂರು, ತಳಕಲ್ಲಿನ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಪ್ರಥಮವಾಗಿ ತಮ್ಮೂರಿಗೆ ರೈಲು ಆಗಮಿಸಿದ ಖುಷಿಯಲ್ಲಿ ಘೋಷಣೆ ಕೂಗಿ ಪಟಾಕಿ ಸಿಡಿಸಿ, ಸಂಭ್ರಮಿಸಿ ಸ್ವಾಗತಿಸಿದರು.

ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಜನರು ಪುಷ್ಪ ಸುರಿಮಳೆ ಸುರಿಸಿದರು. ಪ್ರತಿ ನಿಲ್ದಾಣದಲ್ಲಿ ರೈಲಿಗೆ ಪೂಜೆ, ಕಾಯಿ, ಕರ್ಪೂರದಾರತಿ ಸಮರ್ಪಿಸಿದರು. ನಂತರ ಸಿಹಿ ಹಂಚಿ ಹರ್ಷ ವಿನಿಮಯ ಮಾಡಿಕೊಂಡರು. ಬಹಳ ದಿನಗಳ ಕನಸಾಗಿದ್ದ ರೈಲು ಓಡಾಟದ ಮೊದಲ ದಿನ ಜನರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಸೆಲ್ಫಿಗೆ ಮುಗಿ ಬಿದ್ದ ಜನ:

ರೈಲು ಬರುತ್ತಿದ್ದಂತೆ ಜನರು ರೈಲಿನೊಂದಿಗೆ ಪೋಟೊ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿದ್ದರು. ಚಿಕ್ಕ ಮಕ್ಕಳು ಸಹ ಕುಣಿದು ಕುಪ್ಪಳಿಸಿದರು. ಮೊದಲ ಸಲದ ರೈಲು ಆಗಮನ ಕಣ್ತುಂಬಿಕೊಳ್ಳಲು ಜನರು ತಂಡೋಪಂಡವಾಗಿ ಆಗಮಿಸಿದ್ದರು.

ರೈಲು ಹತ್ತಿ ಪ್ರಯಾಣ:

ಮೊದಲ ದಿನವೇ ಕುಷ್ಟಗಿ-ಹುಬ್ಬಳ್ಳಿ ರೈಲಿನಲ್ಲಿ ಹಲವರು ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಮೊದಲ ಸಲ ರೈಲು ಹೋದಾಗ ನಾವು ಪ್ರಯಾಣ ಬೆಳೆಸಿದ್ದೇವು ಎಂಬ ನೆನಪು ಉಳಿಯುತ್ತದೆ ಎಂದು ಬೀಗಿದರು. ಇನ್ನೂ ಕೆಲವರು ಕುಷ್ಟಗಿಯಿಂದ ಯಲಬುರ್ಗಾ, ಕುಕನೂರು, ತಳಕಲ್ಲಿ ವರೆಗೆ ಪ್ರಯಾಣ ಮಾಡಿದರು.

ಮೊದಲ ದಿನ 8 ಬೋಗಿ:

ಮೊದಲ ಸಲ ಸಂಚರಿಸಿದ ರೈಲು ಸಂಖ್ಯೆ 17328 ಕುಷ್ಟಗಿ-ಎಸ್ಎಸ್ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಎಂಟು ಬೋಗಿಗಳೊಂದಿಗೆ ಸಂಚರಿಸಿತು. 8 ಬೋಗಿಗಳಲ್ಲಿ ಜನರು ಹತ್ತಿ ಪ್ರಯಾಣಿಸಿದರು. ಗದಗ-ವಾಡಿ ರೈಲ್ವೆ ಯೋಜನೆ ಕನಸ್ಸು ನನಸಾಗಿದ್ದು ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಪ್ರಥಮವಾಗಿ ಆಗಮಿಸಿದ ರೈಲನ್ನು ಸಂತೋಷದಿಂದ ಸ್ವಾಗತಿಸಿದ್ದೇವೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಕಳಕಳಿ ಧ್ಯೋತಕವಾಗಿ ರೈಲು ಓಡಾಟ ಈ ಭಾಗದಲ್ಲಿ ಕೈಗೂಡಿದೆ.

ಸಿದ್ದಯ್ಯ ಕಳ್ಳಿಮಠ, ರಾಮಣ್ಣ ಭಜಂತ್ರಿ, ಶಿವನಗೌಡ ದಾನರಡ್ಡಿ, ರೆಹೆಮಾನಸಾಬ್ ಮಕ್ಕಪ್ಪನವರ್, ಕಾಂಗ್ರೆಸ್ ಮುಖಂಡರು