ಕಸ್ತೂರಿ ರಂಗನ್ ವರದಿ ವಿರುದ್ಧ ಸಿಡಿದೆದ್ದ ಜನತೆ

KannadaprabhaNewsNetwork |  
Published : Aug 31, 2026, 02:30 AM IST
ಪಶ್ಚಿಮಘಟ್ಟ | Kannada Prabha

ಸಾರಾಂಶ

ಪಶ್ಚಿಮಘಟ್ಟದ ಸಂರಕ್ಷಣೆ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಪ್ರಸ್ತಾವನೆ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ಜಿಲ್ಲೆಯ ಜನತೆ ಈ ವರದಿ ಜಾರಿ ವಿರುದ್ಧ ಸಿಡಿದೆದ್ದಿದ್ದಾರೆ.

ಕರಾವಳಿ ಹಾಗೂ ಮಲೆನಾಡಿನಲ್ಲಿ ತಳಮಳ । ಜೀವನೋಪಾಯದ ಮೇಲೆ ನಿರ್ಬಂಧದ ಎದುರಾಗುವ ಎಂಬ ಭೀತಿ

ವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಪಶ್ಚಿಮಘಟ್ಟದ ಸಂರಕ್ಷಣೆ ಹೆಸರಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವ ಪ್ರಸ್ತಾವನೆ ಉತ್ತರ ಕನ್ನಡ ಜಿಲ್ಲೆಯ ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ. ಜಿಲ್ಲೆಯ ಜನತೆ ಈ ವರದಿ ಜಾರಿ ವಿರುದ್ಧ ಸಿಡಿದೆದ್ದಿದ್ದಾರೆ.

ವರದಿ ಜಾರಿಯಾದರೆ ತಮ್ಮ ಕೃಷಿ, ಮನೆ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜೀವನೋಪಾಯದ ಮೇಲೆ ನಿರ್ಬಂಧಗಳು ಎದುರಾಗಬಹುದು ಎಂಬ ಭೀತಿ ಗ್ರಾಮೀಣ ಪ್ರದೇಶದ ಜನರನ್ನು ಕಾಡುತ್ತಿದೆ.

ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೆಲವು ಚಟುವಟಿಕೆಗೆ ನಿರ್ಬಂಧ ಹೇರುವಂತೆ ಕಸ್ತೂರಿ ರಂಗನ್ ಸಮಿತಿ ಶಿಫಾರಸು ಮಾಡಿದೆ. ಆದರೆ ಉತ್ತರ ಕನ್ನಡದ ಜನರ ಆಕ್ಷೇಪಕ್ಕೆ ಪ್ರಮುಖ ಕಾರಣವೆಂದರೆ, ಈಗಾಗಲೇ ಹುಲಿ ಯೋಜನೆ, ಅರಣ್ಯ, ಕರಾವಳಿ ಹಾಗೂ ಪರಿಸರ ಸಂರಕ್ಷಣೆಯ ಹಲವು ಕಾನೂನುಗಳ ನಡುವೆ ಹೊಸ ನಿಯಮಗಳು ಮತ್ತಷ್ಟು ನಿರ್ಬಂಧ ತಂದೊಡ್ಡಬಹುದು ಎಂಬ ಆತಂಕ.

ಅಭಿವೃದ್ಧಿ ಬೇಕು, ಪರಿಸರವೂ ಉಳಿಯಬೇಕು; ಆದರೆ ಸ್ಥಳೀಯರ ಬದುಕಿಗೆ ಧಕ್ಕೆ ಬರಬಾರದು ಎಂಬುದು ಜನರ ಪ್ರಮುಖ ಬೇಡಿಕೆಯಾಗಿದೆ. ಪಶ್ಚಿಮಘಟ್ಟದ ಅರಣ್ಯವನ್ನು ಉಳಿಸುವಲ್ಲಿ ತಲೆತಲಾಂತರಗಳಿಂದ ಪ್ರಮುಖ ಪಾತ್ರ ವಹಿಸಿರುವ ಸ್ಥಳೀಯರನ್ನೇ ಅಭಿವೃದ್ಧಿ ವಿರೋಧಿಗಳಂತೆ ನೋಡುವುದು ಸರಿಯಲ್ಲ ಎಂಬ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಕೃಷಿ, ತೋಟಗಾರಿಕೆ, ರಸ್ತೆ, ವಿದ್ಯುತ್, ವಸತಿ ಹಾಗೂ ಪ್ರವಾಸೋದ್ಯಮ ಸೇರಿ ಮೂಲಸೌಕರ್ಯ ಅಭಿವೃದ್ಧಿಗೆ ನಿರ್ಬಂಧ ಬಂದರೆ ಗ್ರಾಮೀಣ ಪ್ರದೇಶಗಳ ಆರ್ಥಿಕತೆ ಕುಸಿಯುವ ಸಾಧ್ಯತೆಯಿದೆ. ಬದುಕು ಅಸಹನೀಯವಾಗಬಹುದು ಎಂದು ಜನರು ಅಭಿಪ್ರಾಯಪಡುತ್ತಿದ್ದಾರೆ.

ಇದೇ ವೇಳೆ ಪರಿಸರ ತಜ್ಞರು ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳುತ್ತಿದ್ದಾರೆ. ಹೀಗಾಗಿ ಪರಿಸರ ಸಂರಕ್ಷಣೆ ಮತ್ತು ಜನಜೀವನದ ಹಕ್ಕುಗಳ ನಡುವೆ ಸಮತೋಲನ ಸಾಧಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಜನಜೀವನಕ್ಕೆ ಮಾರಕವಾದ ವರದಿ ಜಾರಿಗೊಳಿಸುವ ಯಾವುದೇ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುವುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಎಚ್ಚರಿಸಿದೆ. ಮೇಲಾಗಿ ಹಳ್ಳಿ ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸುತ್ತಿದೆ. ದೊಡ್ಡ ಮಟ್ಟದ ಹೋರಾಟಕ್ಕೆ ಸಜ್ಜಾಗಿದೆ. ಪ್ರತಿಭಟನಾರ್‍ಯಾಲಿ, ದೆಹಲಿಗೆ ನಿಯೋಗ ಹೋಗಲು ಸಜ್ಜಾಗಿದೆ.

1439 ಗ್ರಾಮ ಸೂಕ್ಷ್ಮ ಪ್ರದೇಶ ಘೋಷಣೆಯ ಪ್ರಸ್ತಾಪ

ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಟ್ಟೂ 1439 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಉತ್ತರ ಕನ್ನಡದಲ್ಲಿ ಅತಿಹೆಚ್ಚು ಅಂದರೆ 566 ಗ್ರಾಮಗಳು ಇವೆ.ಈ ವರದಿ ಜಾರಿಗೆ ವಿರೋಧಿಸಿ ಸೆ. 5ರಂದು ಶಿರಸಿಯಲ್ಲಿ ಬೃಹತ್‌ ರ್‍ಯಾಲಿ ನಡೆಸುತ್ತೇವೆ. ಸೆಪ್ಟೆಂಬರ್ 3ನೇ ವಾರದಲ್ಲಿ ದೆಹಲಿಗೆ ನಿಯೋಗ ಹೋಗಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಅರಣ್ಯಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಖ್ಯಾಬಲ ಕಾಂಗ್ರೆಸ್‌ಗಿದ್ದರೂ ಪಿಕಾರ್ಡ್ ಬ್ಯಾಂಕ್ ಗದ್ದುಗೆ ಬಿಜೆಪಿಗೆ!
ವೈಚಾರಿಕ ಚಿಂತನೆ ಬೆಳೆಸಲು ಅಂಬೇಡ್ಕರ್ ಓದು ಪ್ರೇರಣೆ: ಜಗದೀಶ್