ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಸಾಲಿನಲ್ಲಿ ‘ಲಾ ನೀನಾ’ (ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಮೇಲ್ಮೈ ತಾಪಮಾನ ತಂಪಾಗಿರುವುದು) ಪರಿಣಾಮ ದುರ್ಬಲವಾಗುತ್ತಿರುವುದರಿಂದ ಮಳೆ ಮತ್ತು ತಂಪು ವಾತಾವರಣ ಕಡಿಮೆಯಾಗಿ ಬಿಸಿಲಿನ ಪ್ರಭಾವ ಹೆಚ್ಚಾಗಿರುತ್ತದೆ. ಇದರಿಂದ ಉಷ್ಣಾಂಶವೂ ಏರಿಕೆಯಾಗಲಿದೆ. ಆದರೆ, ಬೇಸಿಗೆ ಬಿಸಿಲು ಎಷ್ಟರ ಮಟ್ಟಿಗೆ ಹೆಚ್ಚಾಗಿರುತ್ತದೆ ಎನ್ನುವುದು ಫೆಬ್ರವರಿ ಕೊನೇ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಸ್ಪಷ್ಟತೆ ಸಿಗುತ್ತದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಚಲಿತ ಹವಾಮಾನವನ್ನು ಗಮನಿಸಿದರೆ ಬೇಸಿಗೆ ಬಿಸಿಲಿನ ಅನುಭವ ಆರಂಭವಾಗುವುದು ಈಗಲೇ ಗೊತ್ತಾಗುತ್ತಿದೆ. ಚಳಿ ಕಡಿಮೆಯಾಗುತ್ತಿದೆ. ಇನ್ನು ಬೇಸಿಗೆ ತಾಪಮಾನದಲ್ಲಿ ಒಂದೆರೆಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಉತ್ತರ ಕರ್ನಾಟಕ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಏಕೆಂದರೆ, ಆ ಜಿಲ್ಲೆಗಳಲ್ಲಿನ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಮೇಲ್ಪಟ್ಟು ಇರುತ್ತದೆ ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.ಕೇಂದ್ರ ಹವಾಮಾನ ಇಲಾಖೆ ಬೆಂಗಳೂರು ವಿಭಾಗದ ಜ.28ರ ವರದಿ ಪ್ರಕಾರ, ರಾಜ್ಯದೆಲ್ಲೆಡೆ ಒಣ ಹವೆ ಕಂಡು ಬಂದಿದೆ. ಕರಾವಳಿಯ ಹಲವು ಜಿಲ್ಲೆಗಳಲ್ಲಿ ತಾಪಮಾನ ಸರಾಸರಿಗಿಂತ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿತ್ತು. ಉತ್ತರ ಒಳನಾಡಿನ ಒಂದೆರೆಡು ಕಡೆ ತಾಪಮಾನ ಸರಾಸರಿಗಿಂತ 3.1 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿತ್ತು.
ಗರಿಷ್ಠ ತಾಪಮಾನ:ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 33.8 ಡಿಗ್ರಿ ಸೆಲ್ಸಿಯಸ್, ಕಲಬುರಗಿ 33, ಮಂಗಳೂರು 32.9, ಕಾರವಾರ 32.6, ಬೆಂಗಳೂರು ನಗರದಲ್ಲಿ 29.6, ಚಿತ್ರದುರ್ಗ 31.5, ಗೋಕರ್ಣ 32.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
-ಬಾಕ್ಸ್-ಕೆಲವೆಡೆ ನೀರಿನ ಸಮಸ್ಯೆ
ಎದುರಾಗುವ ಸಾಧ್ಯತೆಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ತುಂಗಭದ್ರಾ ಜಲಾಶಯ ಹೊರತುಪಡಿಸಿ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಉತ್ತಮವಾಗಿಯೇ ಇದೆ. ಹೀಗಾಗಿ, ಜಲಾಶಯದ ನೀರಿನ ಮೇಲೆ ಅವಲಂಬಿತ ಪ್ರದೇಶಗಳಲ್ಲಿ ಅಂತಹ ಸಮಸ್ಯೆ ತಲೆದೋರುವುದಿಲ್ಲ. ಆದರೆ, ನೀರಿನ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳು, ಬೋರ್‌ವೆಲ್ ನೀರು ಅವಲಂಬಿತ ಪ್ರದೇಶಗಳು ತಾಪಮಾನ ಹೆಚ್ಚಳದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪ್ರದೇಶಗಳಲ್ಲಿನ ನೀರಿನ ಲಭ್ಯತೆ ಕಡಿಮೆಯಾಗಿ ತೊಂದರೆ ಎದುರಿಸಬಹುದು ಎಂದು ತಜ್ಞರು ಹೇಳಿದ್ದಾರೆ.