ಉಳವಿ ಚನ್ನಬಸವೇಶ್ವರ ಜಾತ್ರೆಗೆ ಸಾವಿರಾರು ಭಕ್ತರ ದಂಡು!

KannadaprabhaNewsNetwork |  
Published : Jan 29, 2026, 02:00 AM IST
ಸುಮಾರು ಎರಡು ದಶಕಗಳಿಂದ ಉಳವಿಗೆ ಪಾದಯಾತ್ರೆ ಮೂಲಕ ಹೊರಟಿರು ಭಕ್ತರ ದಂಡು. | Kannada Prabha

ಸಾರಾಂಶ

ಉಳವಿಗೆ ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಬೆಳಗಾವಿ, ವಿಜಯಪುರ, ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕದವರೇ ಹೆಚ್ಚಿನ ಸಂಖ್ಯೆ ಭಕ್ತರು. ಹಿಂಗಾರು ಹಂಗಾಮು ಮುಗಿಸಿ ಮಕ್ಕಳು, ಮಹಿಳೆಯರು ಸೇರಿ ಇಡೀ ಕುಟುಂಬ ಸಮೇತ ಕನಿಷ್ಠ ಏಳು ದಿನಗಳ ಕಾಲ (ಕೆಲವರು ತಿಂಗಳು ವರೆಗೂ) ಜಾತ್ರೆ ಮಾಡುವುದೇ ಇದರ ವಿಶೇಷ.

ಬಸವರಾಜ ಹಿರೇಮಠ

ಧಾರವಾಡ:

ಅಡಿಕೇಶ್ವರ, ಮಡಿಕೇಶ್ವರ, ಉಳವಿ ಚೆನ್ನಬಸವೇಶ್ವರ, ಹರ ಹರ ಹರ ಮಹಾದೇವ...!

ಇದು ಉಳವಿ ಚೆನ್ನಬಸವಣ್ಣನ ಜಾತ್ರೆಗೆ ಹೋಗುವ ಭಕ್ತರ ಪ್ರಸಿದ್ಧ ಘೋಷಣೆ. ಉಳವಿಗೆ ಪ್ರಯಾಣ ಶುರುವಾದಾಗಿನಿಂದ ಮುಟ್ಟುವ ವರೆಗೂ ಈ ಘೋಷಣೆ ಭಕ್ತರಿಂದ ಕೇಳಿ ಬರುವುದು ಸಾಮಾನ್ಯ. ಫೆ. 3ರಂದು ಉಳವಿ ಚನ್ನಬಸವಣ್ಣ ಜಾತ್ರಾ ಮಹೋತ್ಸವ ನಡೆಯಲಿದ್ದು, ಇದಕ್ಕಾಗಿ ಲಕ್ಷಾಂತರ ಭಕ್ತರ ದಂಡು ಇದೀಗ ಉಳವಿಯತ್ತ ಸಾಗುತ್ತಿದೆ.

ಉಳವಿಗೆ ಹುಬ್ಬಳ್ಳಿ-ಧಾರವಾಡ, ಬೈಲಹೊಂಗಲ, ಕಿತ್ತೂರು, ಸವದತ್ತಿ, ಬೆಳಗಾವಿ, ವಿಜಯಪುರ, ಹಾವೇರಿ, ಗದಗ ಸೇರಿದಂತೆ ಉತ್ತರ ಕರ್ನಾಟಕದವರೇ ಹೆಚ್ಚಿನ ಸಂಖ್ಯೆ ಭಕ್ತರು. ಹಿಂಗಾರು ಹಂಗಾಮು ಮುಗಿಸಿ ಮಕ್ಕಳು, ಮಹಿಳೆಯರು ಸೇರಿ ಇಡೀ ಕುಟುಂಬ ಸಮೇತ ಕನಿಷ್ಠ ಏಳು ದಿನಗಳ ಕಾಲ (ಕೆಲವರು ತಿಂಗಳು ವರೆಗೂ) ಜಾತ್ರೆ ಮಾಡುವುದೇ ಇದರ ವಿಶೇಷ. ಈಗಾಗಲೇ ಸಾವಿರಾರು ಭಕ್ತರು ಉಳವಿ ಕ್ಷೇತ್ರ ತಲುಪಿದ್ದು, ನಾಡಿನ ವಿವಿಧ ಮೂಲೆಗಳಿಂದ ಚಕ್ಕಡಿ ಹಾಗೂ ಪಾದಯಾತ್ರೆ ಮೂಲಕ ಭಕ್ತರು ಉಳವಿಯತ್ತ ದೊಡ್ಡ ಸಂಖ್ಯೆಯಲ್ಲಿ ಸಾಗುತ್ತಿದ್ದಾರೆ. ನಿತ್ಯ ಧಾರವಾಡ ಮೂಲಕವೇ ನೂರಾರು ಚಕ್ಕಡಿ ಹಾಗೂ ಪಾದಯಾತ್ರೆಗಳ ತಂಡಗಳು ತೆರಳುತ್ತಿವೆ.

ದಾರಿಗುಂಟ ದಾಸೋಹ ಸೇವೆ:

ದಾರಿಗುಂಟ ಭಕ್ತರಿಂದಲೇ ಭಕ್ತರಿಗೋಸ್ಕರ ದಾಸೋಹ ಸೇವೆ ಭಕ್ತಿಯಿಂದ ನಡೆಯುತ್ತಿದೆ. ಬಹುತೇಕ ಭಕ್ತರು ಧಾರವಾಡ ಮೂಲಕವೇ ಹಳಿಯಾಳ-ದಾಂಡೇಲಿ-ಜೋಯಿಡಾ ಮೂಲಕ 110 ಕಿಮೀ ದೂರದ ಉಳವಿ ತಲುಪಬೇಕು. (ಉಳಿದಂತೆ ಅಳ್ನಾವರ-ಹಳಿಯಾಳ, ಯಲ್ಲಾಪೂರ, ದಾಂಡೇಲಿ ಮೂಲಕವೂ) ಮರಳಿ ಇದೇ ಮಾರ್ಗವಾಗಿಯೂ ಬರುತ್ತಾರೆ. ಧಾರವಾಡದಿಂದ 10 ಕಿಮೀ ಸಾಗಿದರೆ ಆರಣ್ಯ ಶುರುವಾಗುತ್ತದೆ. ಚಕ್ಕಡಿ-ಟ್ರ್ಯಾಕ್ಟರ್, ಪಾದಯಾತ್ರಿಗಳು ತಕ್ಕಮಟ್ಟಿಗೆ ಆಹಾರದ ವ್ಯವಸ್ಥೆ ಮಾಡಿಕೊಂಡಿದ್ದರೂ ಸ್ವಯಂ ಪ್ರೇರಿತರಾಗಿ ಭಕ್ತರು ದಾಸೋಹ ಸೇವೆ ಹೆಜ್ಜೆ-ಹೆಜ್ಜೆಗೂ ಮಾಡಿಕೊಂಡಿದ್ದಾರೆ. ಧಾರವಾಡ -ಹಳಿಯಾಳ-ದಾಂಡೇಲಿ ಮಧ್ಯೆ 50 ಕಿಮೀ ಅಂತರವಿದ್ದು 8ರಿಂದ 10 ಕಡೆಗಳಲ್ಲಿ ಸೇವೆ ಇದೆ.

ಉಪಾಹಾರಕ್ಕೆ ಉಪ್ಪಿಟ್ಟು, ಚುರುಮರಿ, ಅವಲಕ್ಕಿ, ಚಹಾ ಹಾಗೂ ಊಟಕ್ಕೆ ಅನ್ನ, ಸಾರು, ಶಿರಾ, ಗೋದಿ ಹುಗ್ಗಿ, ಪಲಾವ್ ದಾಸೋಹವಿದೆ. ಕೆಲವರು ಮಧ್ಯಾಹ್ನದ ಬಿಸಿಲಿಗೆ ಮಜ್ಜಿಗೆ, ನೀರು, ಕಲ್ಲಂಗಡಿ ಹಣ್ಣು, ಕೆಲವು ಭಕ್ತರು ಎತ್ತುಗಳಿಗೆ ಮೇವು ಸಹ ನೀಡುತ್ತಿರುವುದು ದಾಸೋಹ ಪರಂಪರೆಗೆ ಮತ್ತಷ್ಟು ಜೀವ ತುಂಬಿದಂತಾಗಿದೆ.

ಸಮೀಪದ ನಿಗದಿಯಲ್ಲಿ ಹಲವು ದಶಕಗಳಿಂದಲೂ ಈ ದಾಸೋಹ ಸೇವೆ ನಡೆಯುತ್ತಿದ್ದು, ಹಳ್ಳಿಗೇರಿ ಬಳಿ, ಹಳಿಯಾಳ, ದಾಂಡೇಲಿ ಕ್ರಾಸ್‌ ಹೀಗೆ ಅನೇಕ ಕಡೆಗಳಲ್ಲಿ ದಾಸೋಹವಿದೆ. ಹಳಿಯಾಳದ ಸುಮಂಗಲಾ ಚಂದ್ರಕಾಂತ ಅಂಗಡಿ ಮಾಲೀಕತ್ವದ ಚಂದಾವನ ಹೆಸರಿನ ಬಯಲಿನಲ್ಲಿ ಪ್ರತಿ ವರ್ಷ ತಾತ್ಕಾಲಿಕ ಟೆಂಟ್ ಹಾಕಿ ಗಳೆಯರಾದ ಶಿವಾನಂದ ದೇವಗಿರಿ, ಸಂಜೀವ ಲಕಮನಹಳ್ಳಿ, ಶಿವಪುತ್ರಪ್ಪ ಭಾವಿಕಟ್ಟಿ, ಸರಸ್ವತಿ ಪೂಜಾರ ಅವರ ತಂಡ ದಾಸೋಹ ಸೇವೆ ಮಾಡುತ್ತಿರುವುದು ಶ್ಲಾಘನೀಯ.

ಎರಡು ದಶಕಗಳಿಂದ ಪಾದಯಾತ್ರೆ

ಧಾರವಾಡ-ಕುಂದಗೋಳ-ಹುಬ್ಬಳ್ಳಿ ಹಾಗೂ ಇತರೆಡೆಯ ಸ್ನೇಹಿತರು ಸೇರಿಕೊಂಡು ಎರಡು ದಶಕಗಳಿಂದ ಉಳವಿಗೆ ಪಾದಯಾತ್ರೆಗೆ ಹೋಗುತ್ತಿದ್ದಾರೆ. ಶಿವಾನಂದ ಮೆಣಸಿನಕಾಯಿ ಅವರಿಂದ ಶುರುವಾದ ಗೆಳೆಯರ ಬಳಗದ ಪಾದಯಾತ್ರೆಗೆ ಈಗ 30 ಭಕ್ತರು ಸೇರ್ಪಡೆಯಾಗಿದ್ದಾರೆ. ವರ್ಷದಲ್ಲಿ ಒಂದು ಬಾರಿ ಜೀವನದ ಜಂಜಾಟ ಬಿಟ್ಟು ಉಳವಿ ಬಸವಣ್ಣನ ಜಾತ್ರೆಯನ್ನು ಕಾನನದಲ್ಲಿ ಪಾದಯಾತ್ರೆ ಮಾಡುವ ಮೂಲಕ ದೇಹ, ಮನಸ್ಸು ಹಗುರ ಮಾಡಿಕೊಂಡು ಬರುತ್ತೇವೆ. ಕುಂದಗೋಳ ತಾಲೂಕಿನ ಶಿರೂರಿನಿಂದ ಈ ಯಾತ್ರೆ ಜ. 28ರಂದು ಶುರುವಾಗಿದ್ದು, ಜ. 31ಕ್ಕೆ ಉಳವಿ ತಲುಪಲಿದ್ದೇವೆ ಎಂದು ಪಾದಯಾತ್ರೆಯ ಸದಸ್ಯ ಆದರ್ಶ ಮೂಗಿ ಹೇಳುತ್ತಾರೆ. ಉಳವಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ಪವಿತ್ರ ಕ್ಷೇತ್ರ. 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ ನಂತರ, ವಚನಕಾರ ಚನ್ನಬಸವಣ್ಣನವರು ವಚನ ಸಾಹಿತ್ಯ ಉಳಿಸಲು ಕಲ್ಯಾಣದಿಂದ ದಟ್ಟ ಅರಣ್ಯದ ಈ ಪ್ರದೇಶಕ್ಕೆ ಬಂದು ನೆಲೆಸಿದರು. ಇದು ವೀರಶೈವ-ಲಿಂಗಾಯತರಿಗೆ ಮಹತ್ವದ ತೀರ್ಥಕ್ಷೇತ್ರ. ಚನ್ನಬಸವಣ್ಣನವರ ಸಮಾಧಿ (ದೇವಸ್ಥಾನ) ಮತ್ತು ಹಲವು ನೈಸರ್ಗಿಕ ಗುಹೆಗಳನ್ನು ಹೊಂದಿದೆ. ಚನ್ನಬಸವಣ್ಣವರು ದಾರಿ ಮಧ್ಯೆ ಧಾರವಾಡದಲ್ಲಿ ತಂಗಿದ್ದು, ಅಲ್ಲಿಯೇ ಉಳವಿ ಚನ್ನಬವೇಸ್ವರ ದೇವಸ್ಥಾನ ಇರುವುದನ್ನು ಕಾಣಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಡಾ ಕೇಸಲ್ಲಿ ಸಿಎಂಗೆ ಬಿಗ್‌ ರಿಲೀಫ್‌
ಬಿಲ್ಡರ್‌ ಮನೇಲಿ 18 ಕೋಟಿ ಮೌಲ್ಯದಚಿನ್ನ ಕದ್ದವರ ಪತ್ತೆಗೆ 3 ವಿಶೇಷ ತಂಡ