ಮಾಗಡಿ: ಸಂಸದನಾಗಿ 10 ವರ್ಷ 8 ತಿಂಗಳ ಕಾಲ ಕ್ಷೇತ್ರದ ಅಭಿವೃದ್ಧಿ ಮಾಡಿ ಜನಗಳ ಬಳಿ ಕೂಲಿ ಮಾಡಿದ್ದೇನೆ ಮತ ನೀಡಿ ಎಂದು ಕೇಳಿದೆ, ನೀನು ಸರಿಯಾಗಿ ಕೂಲಿ ಮಾಡಿಲ್ಲ ಎಂದು ನನಗೆ ವಿಶ್ರಾಂತಿ ನೀಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸೋಮೇಶ್ವರ ಬಡಾವಣೆಯಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದಿಂದ ಮತದಾರರಿಗೆ ಕೃತಜ್ಞತಾ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಸೋಲನ್ನು ಯಾರ ಮೇಲೂ ವಹಿಸುವುದಿಲ್ಲ. ನಾನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ ಸಂಸತ್ ಸ್ಥಾನ ನಮ್ಮ ಅಪ್ಪನ ಮನೆಯ ಆಸ್ತಿಯಲ್ಲ, ಜನರು ಮತ್ತೊಬ್ಬರಿಗೆ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದಾರೆ. ನಾನು 5 ವರ್ಷಗಳ ಕಾಲ ವಿಶ್ರಾಂತಿಯಲ್ಲಿದ್ದು ಚುನಾವಣೆಗೆ ಮುನ್ನ ನೀಡಿದ ಅಭಿವೃದ್ಧಿ ಕೆಲಸವನ್ನು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮುಂದುವರಿಸುತ್ತೇನೆ.
ಕನ್ನಡಿಗರ ಪರವಾಗಿ ಗಟ್ಟಿ ಧ್ವನಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದೆ. ನನ್ನ ಕ್ಷೇತ್ರದ 28 ಲಕ್ಷ ಮತದಾರರನ್ನು ತಲುಪದಿದ್ದರೂ ಕೂಡ ನಾನು ಮೆಚ್ಚುವಂತಹ ಜನಗಳ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ತೃಪ್ತಿ ಇದೆ. ಮೂರು ಬಾರಿ ನನಗೆ ಕ್ಷೇತ್ರದ ಮತದಾರರು ಗೆಲ್ಲಿಸಿ ಕೊಟ್ಟಿರುವುದಕ್ಕೆ ಆಭಾರಿಯಾಗಿರುತ್ತೇನೆ ಎಂದು ಹೇಳಿದರು.ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡುವುದು ಬೇಡ, ನಾನು ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಜೊತೆ ನಿಲ್ಲುತ್ತೇನೆ. ಮುಂಬರುವ ಪಂಚಾಯಿತಿ ಚುನಾವಣೆಗಳಿಗೆ ಸಿದ್ದರಾಗಿ ಈ ಭಾಗದ ಏಳುಕ್ಕೆ ಏಳು ಜಿಪಂ ಸ್ಥಾನಗಳನ್ನು ಗೆಲ್ಲುವ ಕೆಲಸವನ್ನು ಶಾಸಕ ಬಾಲಕೃಷ್ಣ ನೇತೃತ್ವದಲ್ಲಿ ಮಾಡೋಣ ಎಲ್ಲರೂ ತಯಾರಾಗಿ ಈಗಿನಿಂದಲೇ ಆಕಾಂಕ್ಷಿಗಳು ಕ್ಷೇತ್ರದತ್ತ ಗಮನಹರಿಸಿ ಎಂದು ಡಿ.ಕೆ.ಸುರೇಶ್ ತಿಳಿಸಿದರು.
ವರ್ಷಕ್ಕೆ 56 ಸಾವಿರ ಕೋಟಿ ಖರ್ಚು:
ರಾಜ್ಯ ಸರ್ಕಾರ ಒಂದು ವರ್ಷಕ್ಕೆ 5 ಗ್ಯಾರಂಟಿಗಳಿಂದ 56 ಸಾವಿರ ಕೋಟಿ ನೀಡುತ್ತಿದೆ. ಪ್ರತಿ ಕುಟುಂಬಕ್ಕೆ 5ರಿಂದ 6 ಸಾವಿರ ಹಣ ಪ್ರತಿ ತಿಂಗಳು ಬರುವ ರೀತಿ ಮಾಡಿದರೂ ಮಾಧ್ಯಮದವರು ಪ್ರಚಾರ ಕೊಡುವುದೇ ಇಲ್ಲ. ಕೇಂದ್ರದಿಂದ ಕಿಸಾನ್ ಸಮ್ಮಾನ್ ಯೋಜನೆಯಡಿ ಮೊದಲನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತಾರೆ. ನಾವು ಮಾಧ್ಯಮಗಳನ್ನು ಚೆನ್ನಾಗಿ ಆಗಾಗ ನೋಡಿಕೊಂಡರೇ ಈ ರೀತಿ ದೊಡ್ಡ ಪ್ರಚಾರ ಸಿಗುತ್ತದೆ. ಬಿಜೆಪಿ ಪ್ರಚಾರದಿಂದಲೇ ಜನಗಳ ಮನಸ್ಸನ್ನು ಗೆಲ್ಲುತ್ತಿದ್ದಾರೆ ಎಂದು ಮಾಧ್ಯಮಗಳ ವಿರುದ್ಧ ಡಿ.ಕೆ.ಸುರೇಶ್ ಪರೋಕ್ಷ ವಾಗ್ದಾಳಿ ಮಾಡಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿಚಾರವಾಗಿ ತುಮಕೂರಿನಲ್ಲಿ ಜೂ. 25ರಂದು ಬಂದ್ ಮಾಡುತ್ತಿದ್ದು ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತಿದೆ. ಆದರೆ ಮಾಗಡಿಯಲ್ಲಿ ಇನ್ನು ಚಾಪೆ ಹಾಕಿಕೊಂಡು ನಮ್ಮ ಜನ ಮಲಗಿದ್ದಾರೆ. 29 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ ಸಂಸದ ಡಾ.ಮಂಜುನಾಥ್ ಅವರ ಕತ್ತಿನ ಪಟ್ಟಿ ಹಿಡಿದು ಜನಗಳು ಪ್ರಶ್ನೆ ಮಾಡಬೇಕು. ಹೇಮಾವತಿ ಗೊಂದಲ ತೀರ್ಮಾನ ಮಾಡಿ ಕ್ಷೇತ್ರಕ್ಕೆ ಬನ್ನಿ ಎಂದು ಹೋರಾಟಗಾರರು ಹೇಳಬೇಕು. ಕುಣಿಗಲ್ ಮತ್ತು ಮಾಗಡಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸತ್ತು ಹೋಗಿದ್ದಾರಾ? ಏಕೆ ಧ್ವನಿ ಎತ್ತುತ್ತಿಲ್ಲ ಬಿಜೆಪಿ, ಜೆಡಿಎಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ಡಾ.ಮಂಜುನಾಥ್ ಅವರನ್ನು ಎಕ್ಸ್‌ಪ್ರೆಸ್ ಕೆನಾಲ್ ವಿಚಾರವಾಗಿ ಮಾಧ್ಯಮದವರು ಪ್ರಶ್ನೆ ಕೇಳಿದ್ದಾಗ ಇದು ಭಾವನಾತ್ಮಕ ಸಂಬಂಧ. ಇಬ್ಬರು ಕುಳಿತು ಮಾತನಾಡಬೇಕೆಂದು ಉತ್ತರ ಕೊಡುತ್ತಾರೆ. ತುಮಕೂರಿನವರ ಜೊತೆ ನೆಂಟಸ್ತಿಕೆ ಈ ವಿಚಾರದಲ್ಲಿ ಬೆಳೆಸಿಕೊಳ್ಳಬೇಕಾ? ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಸಂಸದರು ಸೇರಿ ಶನಿವಾರ ಅಥವಾ ಭಾನುವಾರ ಎರಡು ಜಿಲ್ಲೆಯ ನಾಯಕರನ್ನು ಕರೆಸಿ ಈ ವಿಚಾರವನ್ನು ಸರಿಯಾಗಿ ತಿಳಿಸಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಮುಂದುವರಿಸಬೇಕು. ನನಗೆ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಹೇಮಾವತಿ ನೀರಿನಿಂದ ಏನು ಆಗಬೇಕಿಲ್ಲ. ನಿಮಗೆ ಹೇಮಾವತಿ ಬೇಡವೇ, ತುಮಕೂರಿನಲ್ಲಿ ವಿರೋಧ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಜನಪ್ರತಿನಿಧಿಗಳ ಬಾಯಿ ಮುಚ್ಚಿಸುವ ಕೆಲಸ ಸಂಸದರು, ಕೇಂದ್ರ ಸಚಿವರು ಮಾಡಬೇಕು ಎಂದು ಬಾಲಕೃಷ್ಣ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಎಂಎಲ್ ಸಿ ಸಿ.ಎಂಲಿಂಗಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಎನ್.ಅಶೋಕ್, ಚಿಗಲೂರು ಗಂಗಾಧರ್, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜೆ.ಪಿ.ಚಂದ್ರೇಗೌಡ, ಬಿ.ಎಸ್.ಕುಮಾರ್, ವಿಜಯಕುಮಾರ್,
ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ದೀಪ, ಶಿವಪ್ರಸಾದ್, ಕೆಂಚೇಗೌಡ, ಸಿ.ಜಯರಾಂ, ಶೈಲಜಾ, ವನಜಾ, ಸುರೇಶ್, ಮಂಜೇಶ್, ಕಲ್ಕರೆ ಶಿವಣ್ಣ ಇತರರು ಭಾಗವಹಿಸಿದ್ದರು.