ದೀಪಾವಳಿ ಆಚರಣೆಗೆ ಧಾರವಾಡ ಜನ ಸಿದ್ಧ!

KannadaprabhaNewsNetwork | Published : Oct 31, 2024 12:51 AM

ಸಾರಾಂಶ

ದಸರಾ ಹಬ್ಬ ಆಚರಿಸಿ, ದುರ್ಗಾಮಾತೆಯ ಪೂಜೆ ಸಲ್ಲಿಸಿದ ಜನರು ದೀಪಾವಳಿ ಹಬ್ಬವನ್ನು ಆಚರಿಸಲು ತುದಿಗಾಲಿನಲ್ಲಿದ್ದಾರೆ. ಪಟಾಕಿ ಹಾರಿಸಲು ಈ ಬಾರಿ ನಿಷೇಧವಿದ್ದು ಹಸಿರು ಪಟಾಕಿ ಹಾರಿಸಲು ಖರೀದಿ ನಡೆದಿದೆ.

ಧಾರವಾಡ:

ಕತ್ತಲನ್ನು ಹೊಡೆದೊಡಿಸಿ ಬಾಳಿನಲ್ಲಿ ಬೆಳಕು ಮೂಡಿಸುವ ದೀಪಾವಳಿ ಹಬ್ಬ ಸಂಭ್ರಮಿಸಲು ಧಾರವಾಡ ಜನತೆ ಸಿದ್ಧರಾಗಿದ್ದಾರೆ. ಗುರುವಾರ ನರಕ ಚತುರ್ದಶಿ, ಶುಕ್ರವಾರ ಅಮಾವಾಸ್ಯೆ ಹಾಗೂ ಶನಿವಾರ ದೀಪಾವಳಿ ಪಾಡ್ಯೆ ನಡೆಯಲಿದೆ. ಒಂದು ವಾರದಿಂದ ಧಾರವಾಡದ ಮಾರುಕಟ್ಟೆ ಹಬ್ಬದ ಖುಷಿಯಲ್ಲಿದೆ. ತರಹೇವಾರಿ ಬಣ್ಣಗಳ ಆಕಾಶ ಬುಟ್ಟಿಗಳು, ವಿದ್ಯುತ್ ದೀಪಗಳು ಕಣ್ಣಿಗೆ ರಾಚುತ್ತಿವೆ. ಚಿತ್ತಾರದ ಹಣತೆಗಳು, ಸಹಿ ತಿನಿಸುಗಳ ಗಮ್ಮೆನ್ನುವ ವಾಸನೆ, ಸಾಲು ಸಾಲು ಹೂಗಳ ಭರಾಟೆ ಹಾಗೂ ಹಬ್ಬದ ಸಂತಿ ಮಾಡಲು ಕುಟುಂಬ ಸಮೇತ ಜನರು ಮಾರುಕಟ್ಟೆ ಆವರಿಸಿದ್ದಾರೆ.

ಸುಭಾಷ ರಸ್ತೆಯ ಎರಡೂ ಬದಿ ದೀಪಾವಳಿ ಮಾರುಕಟ್ಟೆಯಾಗಿ ರೂಪುಗೊಂಡಿದೆ. ವಾಹನ ಸಂಚಾರಕ್ಕೂ ಜಾಗವಿಲ್ಲದಂತೆ ರಸ್ತೆ ಅತಿಕ್ರಮಿಸಿಕೊಂಡಿರುವ ವ್ಯಾಪಾರಸ್ಥರಿಗೆ ಹಬ್ಬದಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ತುಸು ತುಟ್ಟಿಯಾದರೂ ಅನಿವಾರ್ಯವಾಗಿ ಹೂ-ಹಣ್ಣು ಹಾಗೂ ಬಟ್ಟೆ ಖರೀದಿ ಜೋರಾಗಿದೆ.

ಈಚೆಗೆ ದಸರಾ ಹಬ್ಬ ಆಚರಿಸಿ, ದುರ್ಗಾಮಾತೆಯ ಪೂಜೆ ಸಲ್ಲಿಸಿದ ಜನರು ದೀಪಾವಳಿ ಹಬ್ಬವನ್ನು ಆಚರಿಸಲು ತುದಿಗಾಲಿನಲ್ಲಿದ್ದಾರೆ. ಪಟಾಕಿ ಹಾರಿಸಲು ಈ ಬಾರಿ ನಿಷೇಧವಿದ್ದು ಹಸಿರು ಪಟಾಕಿ ಹಾರಿಸಲು ಖರೀದಿ ನಡೆದಿದೆ. ಬಹುತೇಕರು ತಮ್ಮ ಮನೆ, ಕಚೇರಿಗಳ ಮೇಲೆ ವಿದ್ಯುತ್‌ ದೀಪಗಳನ್ನು ಹಾಕಿದ್ದು ಧಾರವಾಡದ ಸೌಂದರ್ಯ ಇಮ್ಮಡಿಯಾಗಿದೆ.

ಆಕಾಶ ಬುಟ್ಟಿಗೆ ಬೇಡಿಕೆ:

ದೀಪಾವಳಿ ಎಂದರೆ ಆಕಾಶ ಬುಟ್ಟಿ. ಅದರಲ್ಲೂ ನಕ್ಷತ್ರಾಕಾರದ ಆಕಾಶ ಬುಟ್ಟಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆಯ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಜತೆ ಯಲ್ಲೇತರಹೇವಾರಿ ಹೂವುಗಳು ಮಾರುಕಟ್ಟೆಗೆ ಆಗಮಿಸಿದ್ದು, ಬೆಲೆಯೂ ಕೊಂಚ ಏರಿಕೆ ಕಂಡಿದೆ. ಹಣ್ಣು-ಹಂಪಲುಗಳ ಬೆಲೆ ಸಹ ಹೂವಿನ ದರಕ್ಕೆ ಪೈಪೋಟಿ ನೀಡುವಂತಿದೆ.

ಇನ್ನು, ದೀಪಾವಳಿಗೆ ಬಟ್ಟೆ ಖರೀದಿಗೆ ಹೇಳಿ ಮಾಡಿದ ದಿನ. ಜೊತೆಗೆ ಕಾರು, ಬೈಕ್, ಟ್ರ್ಯಾಕ್ಟರ್‌ ಇತ್ಯಾದಿ ಹೊಸ ವಾಹನಗಳ ಖರೀದಿ, ಯಂತ್ರೋಪಕರಣಗಳ ಪೂಜೆ, ಕಚೇರಿಗಳ ಪೂಜೆ ನಗರ ಹಾಗೂ ಗ್ರಾಮೀಣದಲ್ಲಿ ಜೋರಾಗಿ ನಡೆಯಲಿದೆ. ನಗರದಲ್ಲಿ ಲಕ್ಷ್ಮಿ ಪೂಜೆ ವೈಭವ, ಹಳ್ಳಿಗಳಲ್ಲಿ ಲಕ್ಷ್ಮಿ ಪೂಜೆಯೊಂದಿಗೆ ಗೋ ಪೂಜೆ ಕಡ್ಡಾಯ.

ದೀಪಾವಳಿ ಹಬ್ಬದ ರಜೆಯು ಗುರುವಾರ ಆರಂಭವಾಗಿದ್ದು ಒಟ್ಟು ನಾಲ್ಕು ದಿನಗಳ ಕಾಲ ಹಬ್ಬವನ್ನು ಸಂಭ್ರಮಿಸಲು ಸಾವಿರಾರು ಜನರು ತಮ್ಮೂರಿಗೆ ಮರಳುತ್ತಿದ್ದಾರೆ. ಹಬ್ಬದ ನಿಮಿತ್ತ ಬೆಂಗಳೂರು, ಪುಣೆ ಸೇರಿದಂತೆ ಹೊರ ಜಿಲ್ಲೆ, ರಾಜ್ಯಗಳಿಂದ ಧಾರವಾಡದ ಜನರು ರೈಲು, ಬಸ್ಸು, ವಿಮಾನಗಳ ಮೂಲಕ ಗುರುವಾರ ಬೆಳಿಗ್ಗೆ ಮರಳುತ್ತಿದ್ದಾರೆ.

Share this article