ಕನ್ನಡಪ್ರಭ ವಾರ್ತೆ ಧಾರವಾಡ
ದಸರಾ ಹಬ್ಬ ಮುಗಿಯುವ ತಡವೇ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಿಸಲು ಧಾರವಾಡ ಜನತೆ ಸಿದ್ಧರಾಗಿದ್ದಾರೆ. ಭಾನುವಾರ ನರಕ ಚತುರ್ದಶಿ, ಸೋಮವಾರ ಅಮಾವಾಸ್ಯೆ ಹಾಗೂ ಮಂಗವಾರ ಪಾಡ್ಯೆ ನಡೆಯಲಿದೆ. ತರಹೇವಾರಿ ಬಣ್ಣಗಳ ಆಕಾಶ ಬುಟ್ಟಿಗಳು, ವಿದ್ಯುತ್ ದೀಪಗಳು, ಹತ್ತಾರು ಚಿತ್ತಾರದ ಹಣತೆಗಳು, ಸಹಿ ತಿನಿಸುಗಳ ಗಮ್ಮೆನ್ನುವ ವಾಸನೆ, ಸಾಲು ಸಾಲು ಹೂಗಳ ಭರಾಟೆ ಹಾಗೂ ಹಬ್ಬ ಸಂತಿ ಮಾಡಲು ಕುಟುಂಬ ಸಮೇತ ಆಗಮಿಸಿರುವ ಜನ...ಈ ಬಾರಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಈಗಾಲೇ ಮಾರುಕಟ್ಟೆಯಲ್ಲಿ ಎಲ್ಲ ಅಗತ್ಯ ವಸ್ತುಗಳ ಮಾರಾಟದ ಭರಾಟೆ ಪ್ರಾರಂಭವಾಗಿದ್ದು, ಜನರೂ ತಮ್ಮಿಷ್ಟದ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ. ಕೆಲ ಬ್ಯಾಂಕ್‌ನವರು ಎಟಿಎಂಗಳಿಗೆ ದಿನಕ್ಕೆರಡು ಬಾರಿ ದುಡ್ಡು ತುಂಬಿದರೂ ಖಾಲಿಯಾಗುತ್ತಿದೆ. ಉಳಿದ ಎಟಿಎಂಗಳ ಎದುರು ಜನರ ಸಾಲು ಬೆಳೆಯುತ್ತಿದೆ. ವಿದ್ಯಾಧಿದೇವತೆಯ ನೆಲೆವೀಡಾಗಿದ ಧಾರವಾಡ ನಗರದಲ್ಲಿ ಬೆಳಕಿನ ಹಬ್ಬದ ಆಚರಣೆ, ಸಂಭ್ರಮ ಜೋರಾಗಿದೆ.
ಮೊನ್ನೆ, ಮೊನ್ನೆ ಶಾರದಾಂಬೆಯ ಹಬ್ಬ ಆಚರಿಸಿ, ದುರ್ಗಾಮಾತೆಯ ಪೂಜೆ ಸಲ್ಲಿಸಿದ ಜನರು ದೀಪಾವಳಿ ಹಬ್ಬವನ್ನು ಆಚರಿಸಲು ಸಿದ್ಧರಾಗಿದ್ದಾರೆ. ಮಿಂಚಿನ ಬೆಳಕು ಹೊರ ಹೊಮ್ಮಿಸುವ ನಕ್ಷತ್ರ ಕಡ್ಡಿ, ಚಿಕ್ಕವರಿಗಾಗಿ ಢಂ ಎಂದು ಶಬ್ಧ ಮಾಡಿ ವಿಶಿಷ್ಟ ವಾಸನೆಯ ಹೊಗೆ ಹರಡುವ ಪಟಾಕಿ, ದೊಡ್ಡವರಿಗೆ ಹಲವು ಲಕ್ಷ ರೂ. ಬೆಲೆಯ ಶಿವಕಾಶಿ ಸಿಡಿಮದ್ದು ವಿದ್ಯಾಕಾಶಿಯಲ್ಲಿ ಭಸ್ಮವಾಗಿ ಹರ್ಷ-ಧೂಮ ಉಕ್ಕಿಸುತ್ತದೆ.ದೀಪಾವಳಿ ಬಟ್ಟೆ ಬರೆ ಖರೀದಿಗೆ ಹೇಳಿ ಮಾಡಿದ ದಿನಮಾನವಲ್ಲ. ಕಾರು, ಬೈಕ್, ಟ್ರಾೃಕ್ಟರ್ ಇತ್ಯಾದಿ ವಾಹನಗಳ ಖರೀದಿ, ಯಂತ್ರೋಪಕರಣಗಳ ಪೂಜೆಯೂ ಜೋರಾಗಿ ನಡೆಯಲಿದೆ. ನಗರದಲ್ಲಿ ಲಕ್ಷ್ಮೀ ಪೂಜೆ ವೈಭವ, ಹಳ್ಳಿಗಳಲ್ಲಿ ಲಕ್ಷ್ಮೀ ಪೂಜೆಯೊಂದಿಗೆ ಗೋ ಪೂಜೆ ಕಡ್ಡಾಯ. ಬರಗಾಲವಿರಲಿ, ಅತಿವೃಷ್ಟಿಯಿರಲಿ, ಧಾರವಾಡ ನಗರ ಸುತ್ತಮುತ್ತಲಿನ ಹಳ್ಳಿಯ ರೈತರು, ಗೌಳಿಗರು ಗೋ ಪೂಜೆಗಾಗಿ ಅನೇಕ ದಿನದಿಂದ ತಯಾರಿ ನಡೆಸಿರುತ್ತಾರೆ. ಈ ಬಾರಿಯೂ ಸಿದ್ಧತೆ ನಡೆಸಿದ್ದಾರೆ.
ನಗರದ ಗೌಳಿಗರಂತೂ ತಮ್ಮ ಎಮ್ಮೆ-ಕರುಗಳಿಗೆ ಹಬ್ಬಕ್ಕಾಗಿ ತರಬೇತಿ ನೀಡುತ್ತಾರೆ. ಯಜಮಾನ ಬೈಕ್‌ನಲ್ಲಿ ಸಾಗುತ್ತಾ ಸೀಟಿ ಹೊಡೆದರೆ ಅಥವಾ ಟವಲ್ ಬೀಸಿದರೆ ಸಾಕು, ಮೈ ಸಿಂಗರಿಸಿಕೊಂಡ ಎಮ್ಮೆಗಳು ಜಿಗಿಯುತ್ತ ಆತನ ಹಿಂದೆಯೇ ಓಡುವ ಪರಿ ನೋಡುವುದೇ ಒಂದು ಚೆಂದ.ಗ್ರಾಮಾಂತರ ಪ್ರದೇಶದಲ್ಲಿ ಊರ ಜನರೆಲ್ಲ ಸೇರಿ ತಮ್ಮ ದನಕರುಗಳನ್ನೂ ಒಗ್ಗೂಡಿಸಿಕೊಂಡು ನಡೆಸುವ ಆಚರಣೆಗಳು ಹಬ್ಬದ ದಿನಕ್ಕೆ ಸೀಮಿತವಾಗಿದ್ದರೂ, ನಂತರದಲ್ಲಿ ಆಗಾಗ ಎತ್ತು-ಎಮ್ಮೆಗಳಿಗಾಗಿ ನಡೆಸುವ ಸ್ಪರ್ಧೆಗಳು ಪುನಃ ಪುನಃ ದೀಪಾವಳಿ ನೆನಪಿಸದೆ ಇರಲಾರವು.
ವ್ಯಾಪಾರ ಬಲು ಜೋರುನಗರದ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಖರೀದಿ ಜೋರಾಗಿದೆ. ಹಬ್ಬದಾಚರಣೆಗೆ ಅಗತ್ಯ ವಸ್ತುಗಳ ಖರೀದಿ ಭರಾಟೆ ಇದ್ದು, ಎರಡ್ಮೂರು ದಿನಗಳಿಂದ ಮಾರುಕಟ್ಟೆ ಜನರಿಂದ ತುಂಬು ತುಳುಕುತ್ತಿದೆ. ಸುಭಾಷ ರಸ್ತೆಯ ಎರಡೂ ಬದಿ ದೀಪಾವಳಿ ಮಾರುಕಟ್ಟೆಯಾಗಿ ರೂಪುಗೊಂಡಿದೆ. ವಾಹನ ಸಂಚಾರಕ್ಕೂ ಜಾಗವಿಲ್ಲದಂತೆ ರಸ್ತೆ ಅತಿಕ್ರಮಿಸಿಕೊಂಡಿರುವ ವ್ಯಾಪಾರಸ್ಥರಿಗೆ ಹಬ್ಬದಲ್ಲಿ ಭರ್ಜರಿ ವ್ಯಾಪಾರ.
ಆಕಾಶ ಬುಟ್ಟಿ, ಹೂವು, ಹಣ್ಣುಗಳಿಗೆ ಬೇಡಿಕೆದೀಪಾವಳಿ ಎಂದರೆ ಆಕಾಶ ಬುಟ್ಟಿ. ಅದರಲ್ಲೂ ನಕ್ಷತ್ರಾಕಾರದ ಆಕಾಶ ಬುಟ್ಟಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ನಮೂನೆಯ ಆಕಾಶ ಬುಟ್ಟಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇದರ ಜೊತೆಯಲ್ಲೇ ತರಹೇವಾರಿ ಹೂವುಗಳು ಮಾರುಕಟ್ಟೆಗೆ ಆಗಮಿಸಿದ್ದು, ಬೆಲೆಯೂ ಕೊಂಚ ಏರಿಕೆ ಕಂಡಿದೆ. ಹಣ್ಣು-ಹಂಪಲುಗಳ ಬೆಲೆ ಸಹ ಹೂವಿನ ದರಕ್ಕೆ ಪೈಪೋಟಿ ನೀಡುವಂತಿದೆ. ಬಾಳೆ ದಿಂಡು, ಕಬ್ಬು, ಅಲಂಕಾರಿಕ ಸಮಾಗ್ರಿಗಳ ಖರೀದಿ ಸಹ ಜೋರಾಗಿ ನಡೆಯಲಿದೆ.