ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಆರಂಭವಾದ ಸ್ಯಾಂಡಲ್ ವುಡ್ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ನಟ ಪ್ರೇಮ್, ಶರಣ್, ನಿರೂಪಕಿ ಅನುಶ್ರೀ, ಮಿಮಿಕ್ರಿ ಯೋಗಿ ಗೌಡ, ಕಲಾವತಿ ದಯಾನಂದ್, ಪುಷ್ಪ ಆರಾಧ್ಯ, ರವಿರಾಜ್, ಸರಿಗಮಪ ಶಶಿಕಲಾ, ಸುನೀಲ್, ಸಂತೋಷ್ ದೇವ್ ಕಾರ್ಯಕ್ರಮಕ್ಕೆ ಕಳೆ ತಂದು ಕೊಟ್ಟರು.
ಹಾಸ್ಯೋತ್ಸವದಲ್ಲಿ ತೇಲಿ ಬಂದ ನಗು, ಚಲನ ಚಿತ್ರಗಳ ಗೀತೆಗಳ ಭರ್ಜರಿ ಸೌಂಡಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಯುವಕರು ಕುಣಿದು ಕುಪ್ಪಳಿಸಿದರು.ಸಂಜೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮವು ಮಧ್ಯರಾತ್ರಿ 12 ಗಂಟೆಯ ತನಕ ಎಡ ಬಿಡದೆ ನಡೆದರೂ ನೆರೆದಿದ್ದ ಸಹಸ್ರಾರು ಜನರು ಕದಲದೇ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು. ಮಳೆರಾಯ ಬಿಡುವು ನೀಡಿದ್ದು ಮತ್ತಷ್ಟು ಖುಷಿ ತಂದಿತು.
ಮೈಸೂರು- ಊಟಿ ಹೆದ್ದಾರಿಯ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆಯ ಕಾರ್ಯಕ್ರಮದ ವೇದಿಕೆಯ ಅದ್ಧೂರಿ ಸೆಟ್ ಗೆ ನೆರೆದಿದ್ದ ಜನರು ಮನಸೋತರು.
ಜನರ ನೋಡಿ ಶಾಸಕ ಗಣೇಶ್ ಫಿದಾ!:
ಕಾರ್ಯಕ್ರಮದ ಮಧ್ಯೆ ಮಾತನಾಡಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಸಂಗೀತ ಸಂಜೆ ಕಾರ್ಯಕ್ರಮಕ್ಕೆ ಸಮಾಧಾನ, ಸಾವದಾನದ ಜೊತೆಗೆ ಇಷ್ಟೊಂದು ಜನ ಸೇರಿದ್ದು ನೋಡಿ ತುಂಬ ಖುಷಿಯಾಗಿದೆ ಎಂದರು. ಕ್ಷೇತ್ರದ ಜನರಿಗೆ ಗೌರಿ,ಗಣೇಶ ಹಬ್ಬದ ಅಂಗವಾಗಿ ವರ್ಷದಲ್ಲಿ ಒಂದು ದಿನ ಮನೋರಂಜನೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ನಿಮ್ಮ ಪ್ರೀತಿ, ವಿಶ್ವಾಸ ನನ್ನ ಮೇಲಿರಲಿ ಎಂದರು.