ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

KannadaprabhaNewsNetwork | Published : Dec 21, 2023 1:15 AM

ಸಾರಾಂಶ

ಅಪರಾಧ ತಡೆಗೆ ಜನರ ಸಹಕಾರ ಅಗತ್ಯ

ಕನ್ನಡಪ್ರಭ ವಾರ್ತೆ ಇಂಡಿ

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆದಾಗ ಸುಮ್ಮನೆ ಕೂಡದೇ ಕೂಡಲೇ ವಿದ್ಯಾರ್ಥಿಗಳು ಪಾಲಕರು ಇಲ್ಲವೇ ಶಿಕ್ಷಕರ ಗಮನಕ್ಕೆ ತರಬೇಕು. ಕಾನೂನಿನ ಮೂಲಕ ದೌರ್ಜನ್ಯಕ್ಕೆ ಕಾರಣರಾದ ದುಷ್ಟ ವ್ಯಕ್ತಿಗಳಿಗೆ ಸರಿಯಾಗಿ ಬುದ್ಧಿಕಲಿಸಲು ಸಾಧ್ಯವಾಗುತ್ತದೆ ಎಂದು ಇಂಡಿ ಶಹರ ಪೊಲೀಸ್‌ ಠಾಣೆ ಮಹಿಳಾ ಪಿಎಸೈ ರೇಣುಕಾ ಹಳ್ಳಿ ಹೇಳಿದರು.

ಪಟ್ಟಣ ಗಾಂಧಿ ವೃತ್ತದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಡಿ ಶಹರ ಪೊಲೀಸ್‌ ಠಾಣೆ ವತಿಯಿಂದ ಮಂಗಳವಾರ ಹಮ್ಮಿಕೊಂಡ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ತಡೆ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಅಪರಾಧಗಳು ನಡೆದ ಮೇಲೆ ತನಿಖೆ ನಡೆಸುವುದಕ್ಕಿಂತ, ಅಪರಾಧ ಆಗದಂತೆ ನೋಡಿಕೊಳ್ಳುವುದು ಉತ್ತಮ. ಈ ತಿಂಗಳಿನಲ್ಲಿ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಏರ್ಪಡಿಸುವುದು, ಕರಪತ್ರಗಳು ಮತ್ತು ಸಾರ್ವಜನಿಕ ಸಭೆಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾನೂನನ್ನು ಗೌರವಿಸಿದರೆ,ಕಾನೂನು ನಿಮ್ಮನ್ನು ರಕ್ಷಿಸುತ್ತದೆ. ಪ್ರಸ್ತುತ ಸಮಾಜದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಮುಂಜಾಗ್ರತೆ ವಹಿಸಿದರೆ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಸಾಧ್ಯವಾಗುತ್ತದೆ. ಅಪರಾಧಗಳನ್ನು ತಡೆಗಟ್ಟಲು ಪೊಲೀಸ್‌ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಮಾಜದಲ್ಲಿ ಸಮಾಜ ಬಾಹಿರ ಚಟುವಟಿಕೆಗಳು, ಗುಂಡಾಗಿರಿ, ಇಸ್ಪೇಟ್‌, ಮಟ್ಕಾ, ಜೂಜಾಟದಂತ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಶಾಲೆಯ ಮುಖ್ಯಶಿಕ್ಷಕ ಯು.ಎಚ್‌.ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಪಿಎಸೈ ಶಶಿಕಲಾ, ಎಎಸೈ ಎಂ.ಎಸ್‌.ಅರವತ್ತಿ ಮಾತನಾಡಿದರು.

ಶಿಕ್ಷಕರಾದ ಎನ್‌.ಎ.ಬಿರಾದಾರ, ಎಂ.ಎ.ಲಕ್ಡರ,ಕೆ.ಎಚ್‌.ಹೊಸಮನಿ, ಎಸ್.ಎಸ್‌.ಕಾಂಬಳೆ ಹಾಗೂ ಪೊಲೀಸ್‌ ಸಿಬ್ಬಂದಿ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಇದ್ದರು.

ಯಾವುದೇ ಅಪರಾಧವನ್ನು ಕಂಡಿದ್ದ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ.

-ರೇಣುಕಾ ಹಳ್ಳಿ, ಇಂಡಿ ಶಹರ ಪೊಲೀಸ್‌ ಠಾಣೆ ಮಹಿಳಾ ಪಿಎಸೈ

Share this article