ಮೊದಲು ಜನರ ಆರೋಗ್ಯ ಮುಖ್ಯ, ನಂತರ ಅಭಿವೃದ್ಧಿ ಕಾರ್ಯ: ಶಾಸಕ ಬಿ.ಕೆ.ಸಂಗಮೇಶ್ವರ್‌

KannadaprabhaNewsNetwork | Published : Jul 3, 2024 12:17 AM

ಸಾರಾಂಶ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಆಡಳಿತ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರಸಭೆ ಸಾಮಾನ್ಯಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಮೊದಲು ಜನರ ಆರೋಗ್ಯ ಮುಖ್ಯ ನಂತರ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಕರ್ನಾಟಕ ರಾಜ್ಯ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಅಧ್ಯಕ್ಷರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಡಳಿತ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಎಲ್ಲೆಡೆ ಡೆಂಘೀ ಕಾಯಿಲೆ ಹೆಚ್ಚಾಗುತ್ತಿದ್ದು, ಸಾವು ನೋವುಗಳು ಸಂಭವಿಸುತ್ತಿವೆ. ಕಾಯಿಲೆ ಹರಡದಂತೆ ನಗರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು. ಈ ಕಾರ್ಯ ಮೊದಲು ಕೈಗೊಳ್ಳಿ ಜನರು ಪ್ರಾಣ ಕಳೆದುಕೊಂಡ ನಂತರ ಅಭಿವೃದ್ಧಿ ಕಾರ್ಯ ಕೈಗೊಂಡು ಏನು ಪ್ರಯೋಜನ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಪ್ರಶ್ನಿಸಿದರು.

ಇದಕ್ಕೂ ಮೊದಲು ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು, ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆ ಹಾವಳಿ ಹೆಚ್ಚಾ ಗಿದೆ. ಇದರಿಂದಾಗಿ ನಿವಾಸಿಗಳು ತೊಂದರೆಗೆ ಒಳಗಾಗಿದ್ದಾರೆ. ಇದೀಗ ಡೆಂಗ್ಯೂ ಕಾಯಿಲೆ ಎಲ್ಲೆಡೆ ವ್ಯಾಪಾಕವಾಗಿ ಹರಡುತ್ತಿದ್ದು, ಭಯದಿಂದ ಬುಕುವಂತಾಗಿದೆ. ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆ. ವಾರ್ಡ್‌ಗಳಲ್ಲಿ ಸರಿಯಾಗಿ ಸೊಳ್ಳೆ ನಾಶಕ ಔಷಧಿ ಸಿಂಪಡಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಔಷಧಿ ಗುಣಮಟ್ಟ ಪರೀಕ್ಷಿಸುವ ಜೊತೆಗೆ ಎಲ್ಲಾ ವಾರ್ಡ್‌ಗಳಲ್ಲೂ ಸಮರ್ಪಕವಾಗಿ ಔಷಧಿ ಸಿಂಪಡಿಸಬೇಕೆಂದು ಆಗ್ರಹಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಹಾಗು ವಾಲ್ಮೀಕಿ ಸಮುದಾಯ ಭವನ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ನೀಡುವಂತೆ ಸದಸ್ಯರು ಒತ್ತಾಯಿಸಿದರು. ಅಲ್ಲದೆ ನಗರಸಭೆಯಲ್ಲಿ ಕಳಪೆ ಕಾಮಗಾರಿಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ನಗರಸಭೆ ಹಾಗೂ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ. ಗುತ್ತಿಗೆದಾರರು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆ. ಕೆಲವು ಕಾಮಗಾರಿಗಳು ಅಪೂರ್ಣಗೊಂಡಿವೆ. ನಗರಸಭೆಯಿಂದ ನೋಟಿಸ್ ನೀಡಿದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಇವರ ಕ್ರಮ ವಿರುದ್ಧ ಕೈಗೊಳ್ಳುವಂತೆ ಆಗ್ರಹಿಸಲಾಯಿತು. ಇದಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಿ, ತಪ್ಪಿತಸ್ಥ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ ಅವರಿಗೆ ನೀಡಿರುವ ಗುತ್ತಿಗೆ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ಪ್ರಸ್ತುತ ಪ್ರತಿ ವಾರ್ಡ್‌ಗೆ ನೀಡುತ್ತಿರುವ ೨ ಲಕ್ಷ ರು. ಅನುದಾನ ಕಡಿಮೆಯಾಗಿದ್ದು, ಹೆಚ್ಚಿನ ಅನುದಾನ ಅಗತ್ಯವಿದೆ. ಅಲ್ಲದೆ ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಬಿಡುಗಡೆಗೊಳಿಸಬೇಕೆಂದು ಸದಸ್ಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಬಿ.ಕೆ ಸಂಗಮೇಶ್ವರ್ ವಾರ್ಡ್‌ಗಳ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಅನುದಾನ ಬಿಡುಗಡೆಗೊಳಿಸಲಾಗುವುದು. ಎಲ್ಲಾ ವಾರ್ಡ್‌ಗಳಿಗೂ ಸಮಾನವಾಗಿ ಅನುದಾನ ಬಿಡುಗಡೆ ಮಾಡುವುದು ಅಸಾಧ್ಯ ಎಂದರು.

ಸಭೆಯಲ್ಲಿ ಅಜೆಂಡಾದಲ್ಲಿನ ಬಹುತೇಕ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಯಿತು. ಆರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಹಾಗೂ ಇತ್ತೀಚೆಗೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಎಮ್ಮೆಹಟ್ಟಿ, ಹನುಮಂತಪುರದ ನಿವಾಸಿಗಳಿಗೆ ಸಂತಾಪ ಸೂಚಿಸಲಾಯಿತು. ನಂತರ ವಿಧಾನ ಪರಿಷತ್ ಸದಸ್ಯರಾದ ನಂತರ ಮೊದಲ ಬಾರಿಗೆ ಸಭೆಗೆ ಆಗಮಿಸಿದ್ದ ಬಲ್ಕೀಶ್ ಬಾನು, ಕೆಆರ್‌ಐಡಿಎಲ್ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ತಹಸೀಲ್ದಾರ್ ಕೆ.ಆರ್ ನಾಗರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಸದಸ್ಯರು, ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Share this article