ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕೆ.ಅಮರ ನಾರಾಯಣ ಚಾಮರಾಜನಗರ ಜಿಲ್ಲಾಧಿಕಾರಿ ಗಳಾಗಿದ್ದಾಗ ಸಂಘದ ಕಟ್ಟಡ ನಿರ್ಮಾಣಕ್ಕೆಜಾಗ ಹುಡುಕಿಕೊಟ್ಟು, ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾಗಿದ್ದರಿಂದ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಧಿಕಾರಿಗಳು ಜನಪರವಾದ ಕೆಲಸಗಳನ್ನು ಮಾಡಿದರೆ ಪ್ರತಿಯೊಬ್ಬರು ಮೆಚ್ಚುಗೆಗೆ ಪಾತ್ರರಾಗುತ್ತಾರೆ, ಯಾವ ವ್ಯಕ್ತಿಯಾದರೂ ಸರಿ ಜನಪರ ಕಾಳಜಿಯುಳ್ಳಂತಹ ಕೆಲಸ-ಕಾರ್ಯಗಳನ್ನು ಮಾಡಿದರೆ, ಅಂತಹವರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದು ಉತ್ತಮವಾಗಿದ್ದರೆ, ಅವರನ್ನು ಪ್ರಶಸ್ತಿಗಳು ಕೂಡಾ ಹುಡುಕಿಕೊಂಡು ಬರುತ್ತವೆ ಎಂದರು.ನಾವು ಅಧಿಕಾರಿಗಳಾಗಿರುವುದೇ ಜನರ ಸೇವೆ ಮಾಡಲು, ಆ ನಿಟ್ಟಿನಲ್ಲಿ ನಾವು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರೆ, ಅವು ಜನರ ಮನತಟ್ಟುತ್ತದೆ, ನಾವು ಹೋದಾಗ ನೆನಪಿಸಿಕೊಂಡು ಗೌರವಕೊಡುತ್ತಾರೆ ಎಂದರು.
ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದವರು ಅಂದು ನನ್ನಲ್ಲಿ ಬಂದು ಜಾಗಕ್ಕಾಗಿ ಮನವಿ ಮಾಡಿದಾಗ ನನ್ನಕರ್ತವ್ಯವನ್ನು ಮಾಡಿದೆ ಅಷ್ಟೆ, ನಮ್ಮದು ತೆರೆದ ಹಾಳೆ ಇದ್ದರೀತಿ, ಸಾರ್ವಜನಿಕ ಜೀವನದಲ್ಲಿದ್ದಾಗ , ಜನೋಪಯೋಗಿ ಕೆಲಸವನ್ನು ಮಾಡಬೇಕು ಎಂದರು.
ಈ ವೇಳೆ ಅವರ ಕಾರ್ಯ ವೈಖರಿ ಬಗ್ಗೆ ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ, ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಕಾರ್ಯನಿರರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಐಪಿಎಸ್ ಅಧಿಕಾರಿ ಶರಣಪ್ಪ, ಕೃಷಿಕ ಹುಣಸೂರು ಬಸವರಾಜು ಹಾಜರಿದ್ದರು. ಹಿರಿಯ ಪತ್ರಕರ್ತ ಬನಶಂಕರ ಆರಾಧ್ಯ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ವಂದಿಸಿದರು.