ಪೂರ್ವಸಿದ್ಧತಾ ಸಭೆಯಲ್ಲಿ ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರಕನ್ನಡಪ್ರಭ ವಾರ್ತೆ ಯಲ್ಲಾಪುರ
ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಅ.೧೯ರಂದು ಬೆಳಗ್ಗೆ ೧೦.೩೦ಕ್ಕೆ ತಾಲೂಕಿನ ಮಂಚೀಕೇರಿ ಸಮೀಪದ ತುಂಬೆಬೀಡು ಶಾಲೆಯ ಆವಾರದಲ್ಲಿ ಜನಾಂದೋಲನ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.ಸೋಮವಾರ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಿದ್ದತಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಅವರ ನೇತೃತ್ವದಲ್ಲಿ ಶಾಂತಿಯುತವಾಗಿ ಜನಜಾಗೃತಿ ಹೋರಾಟ ನಡೆಯಲಿದೆ ಎಂದರು.ಪ್ರಸ್ತಾಪಿತ ಯೋಜನೆಗೆ ಸರ್ವೆ ಆಗಿಲ್ಲ, ಯಾವುದೇ ವಿಸ್ತ್ರತ ವರದಿ ಬಂದಿಲ್ಲ. ಯೋಜನೆಯ ತಡೆಗೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಆರಂಭದ ಹಂತದಲ್ಲಿಯೇ ಒತ್ತಡ ತರಬೇಕು. ಸಾರ್ವಜನಿಕರಲ್ಲಿ ಯೋಜನೆಯ ದುಷ್ಪರಿಣಾಮದ ಅರಿವು ಮೂಡಿಸಬೇಕು ಎಂಬುದು ಹೋರಾಟದ ಉದ್ದೇಶವಾಗಿದೆ ಎಂದು ವಿವರಿಸಿದರು.
ಯೋಜನೆಯ ಅನ್ವಯ ಆರಂಭದಲ್ಲಿ ಚಿಕ್ಕ ಡ್ಯಾಮ್ ನಿರ್ಮಿಸುತ್ತೇವೆ ಎಂದು ಹೇಳುತ್ತಾರೆ. ಅದನ್ನು ಯಾವಾಗ ಬೇಕಾದರೂ ಎತ್ತರಿಸಬಹುದು. ೧೫-೨೦ ಟಿಎಂಸಿ ನೀರು ಸಿಗುತ್ತದೆ. ಮಳೆಗಾಲದಲ್ಲಿ ಮಾತ್ರ ನೀರು ಒಯ್ಯುತ್ತೇವೆ ಎನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ನದಿ ಸಂಪೂರ್ಣ ಬತ್ತಿರುತ್ತದೆ. ಈ ಹಿಂದೆ ಯಲ್ಲಾಪುರಕ್ಕೆ ಬೇಡ್ತಿ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ₹೨೫ ಕೋಟಿಗೂ ಹೆಚ್ಚಿನ ಹಣ ಖರ್ಚು ಮಾಡಲಾಗಿತ್ತಾದರೂ ನೀರಿಲ್ಲದೇ ಹಣ ವ್ಯರ್ಥವಾಗಿದೆ. ಇಂತಹ ಹಲವು ವಿಫಲ ನಿದರ್ಶನಗಳು ಇರುವಾಗ, ಬೇಸಿಗೆಯಲ್ಲಿ ಒಣಗುವ ನದಿಯಲ್ಲಿ ಇಂತಹ ಯೋಜನೆ ಯಾವ ಪುರುಷಾರ್ಥಕ್ಕೆ? ಎಂದು ಪ್ರಶ್ನಿಸಿದರು.ಹೊಸ ಯೋಜನೆಯಿಂದ ಮೂರು ಕಡೆ ಪಂಪಿಂಗ್ ಸ್ಥಾವರ ನಿರ್ಮಿಸಲಾಗುತ್ತದೆ. ವಿದ್ಯುತ್ ಲೈನ್‌ಗಾಗಿ ಮರಗಳ ಮಾರಣಹೋಮ ಆಗಲಿದೆ. ಇದನ್ನೆಲ್ಲ ತಡೆಯಲು ನಾವೆಲ್ಲ ಒಂದಾಗಬೇಕು. ಶ್ರೀಗಳ ನೇತೃತ್ವದಲ್ಲಿ ಪ್ರತಿಭಟಿಸಬೇಕು ಎಂದು ಯೋಜನೆಯ ದುಷ್ಪರಿಣಾಮಗಳ ಕುರಿತು ವಿವರಿಸಿದರು.
ಸಮಿತಿಯ ಉಪಾಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಎಂ.ಕೆ. ಭಟ್ಟ ಯಡಳ್ಳಿ, ಎಲ್.ಪಿ. ಭಟ್ಟ ಗುಂಡ್ಕಲ್, ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ, ಕೆ.ಟಿ. ಹೆಗಡೆ ಚಿಕ್ಕೊರಗಿ, ಚೆನ್ನಪ್ಪ ಗೌಡ, ವಿಕಾಸ ನಾಯ್ಕ ಮಂಚಿಕೇರಿ, ವಿಶ್ವನಾಥ ಹಳೆಮನೆ, ನಾಗರಾಜ ಕವಡಿಕೇರಿ, ಎಂ.ರಾಜಶೇಖರ ನಂದೊಳ್ಳಿ, ಕೆ.ಎಸ್. ಭಟ್ಟ, ನರಸಿಂಹ ಸಾತೊಡ್ಡಿ, ಶ್ರೀಪಾದ ಹೆಗಡೆ ಶಿರನಾಲಾ, ಬಾಲಚಂದ್ರ ಹೆಗಡೆ ತೂಕದಬೈಲ್, ರಾಮಕೃಷ್ಣ ಭಟ್ಟ ಕವಡಿಕೇರಿ, ರಾಘವೇಂದ್ರ ಭಟ್ಟ ಹಾಸಣಗಿ, ಗಣಪತಿ ಮಂಚಿಕೇರಿ, ಗಣೇಶ ಬೂರ್ನಮನೆ, ರಘುಪತಿ ಹೆಗಡೆ ಭಾಗವಹಿಸಿದ್ದರು.