ಗದಗ: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಒಂದು ಸಭೆಯನ್ನೂ ಮಾಡಿಲ್ಲ. ರಾಜ್ಯ ಸರ್ಕಾರದ ಈ ಧೋರಣೆ ವಿರುದ್ಧ ರೈತರಿಗೆ ಪರಿಹಾರ ನೀಡಿ ಎಂದು ಹೋರಾಟ ಮಾಡಲು ನಾವೆಲ್ಲ ಸನ್ನದ್ಧರಾಗಬೇಕು. ಈ ಹೋರಾಟ ಜನಾಂದೋಲನವಾಗಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೇರೆ ಯಾವ ಪಕ್ಷದಲ್ಲಿ ಪ್ರಶಿಕ್ಷಣ ವರ್ಗ ನಡೆಯುವುದಿಲ್ಲ. ರಾಜಕೀಯ ಪಕ್ಷಗಳು ವಿವಿಧ ಉದ್ದೇಶಗಳಿಗೆ ಈ ದೇಶದಲ್ಲಿವೆ. ಒಂದೊಂದು ರಾಜಕೀಯ ಪಕ್ಷಗಳಿಗೆ ಒಂದೊಂದು ಉದ್ದೇಶ ಇದೆ. ಕೆಲವು ಪ್ರಾದೇಶಿಕ ಪಕ್ಷಗಳಿವೆ. ಅವು ಆ ಪ್ರದೇಶದ ಆಗುಹೋಗುಗಳನ್ನು ಮುಂದಿಟ್ಟುಕೊಂಡು ಪಕ್ಷ ಕಟ್ಟುತ್ತವೆ. ರಾಷ್ಟ್ರೀಯ ಪಕ್ಷಗಳು ರಾಷ್ಟ್ರೀಯ ವಿಚಾರಗಳು, ದೇಶವನ್ನು ಮುನ್ನಡೆಸುವ ವಿಚಾರ ಇಟ್ಟುಕೊಂಡಿರುತ್ತವೆ. ಬಿಜೆಪಿಯ ಹುಟ್ಟು ಮತ್ತು ಅದರ ಅನುಭವ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಈ ವಿಚಾರ ಮುಂದಿನ ಪೀಳಿಗೆಗೆ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ದೀನ ದಯಾಳ ಉಪಾಧ್ಯಾಯರು ಪ್ರಶಿಕ್ಷಣ ವರ್ಗ ಆರಂಭಿಸಿದ್ದು, ಅದನ್ನು ಪಕ್ಷ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ. ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನಸಂಖ್ಯೆಗೆ ನರೇಂದ್ರ ಮೋದಿ ಸರ್ಕಾರದ ಯೋಜನೆಗಳು ಮುಟ್ಟಿದೆ. ಯಾವುದಾದರೂ ಒಂದು ಕೇಂದ್ರ ಸರ್ಕಾರ ಇಟ್ಟು ದೊಡ್ಡ ಪ್ರಮಾಣದ ಜನಕಲ್ಯಾಣ ಯೋಜನೆಗಳನ್ನು ಹನ್ನೆರಡು ವರ್ಷದಲ್ಲಿ ಮಾಡಿರುವುದು ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇಲ್ಲ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಕಳಕಪ್ಪ ಬಂಡಿ, ಮುಖಂಡರಾದ ಜಯತೀರ್ಥ ಕಟ್ಟಿ, ಭೋಜರಾಜ ಕರೂದಿ, ಶ್ರೀಪತಿ ಉಡುಪಿ, ವಿಕಾಸ ಪುತ್ತೂರ, ಈರಣ್ಣ ಜಡಿ ಸೇರಿದಂತೆ ಪಕ್ಷದ ಎಲ್ಲ ಮಂಡಳಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.