ಕನ್ನಡಪ್ರಭ ವಾರ್ತೆ ಮುಧೋಳಪತ್ರಿಕೋದ್ಯಮ ಇಂದು ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ಪ್ರತಿಯೊರ್ವ ಪತ್ರಕರ್ತ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾನಿಪ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಈಶ್ವರ ಶೆಟ್ಟರ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಪತ್ರಿಕೋದ್ಯಮ ಇಂದು ಯಾವ ಹಂತಕ್ಕೆ ತಲುಪಿದೆ ಎಂಬ ಬಗ್ಗೆ ಪ್ರತಿಯೊರ್ವ ಪತ್ರಕರ್ತ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಕಾನಿಪ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಈಶ್ವರ ಶೆಟ್ಟರ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಭಾನುವಾರ ನಗರದ ಕಾನಿಪ ಸಂಘದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಉಚಿತ ನೇತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬದಲಾದ ಕಾಲದಲ್ಲಿ ಸುದ್ದಿಗಳ ಹರಿವು ಹೆಚ್ಚಾಗಿದ್ದು, ಅವುಗಳಲ್ಲಿನ ವಾಸ್ತವಾಂಶಗಳನ್ನು ಗುರುತಿಸಿ ಪ್ರಕಟಿಸುವ ಮೂಲಕ ಸಾಮಾಜಿಕ ಕಳಕಳಿ ಮತ್ತು ವಿವೇಚನೆಯಿಂದ ಹೆಜ್ಜೆಯಿಡಬೇಕು. ಈ ಮೊದಲು ಪತ್ರಕರ್ತರು ಸುದ್ದಿಗಳನ್ನು ಹುಡುಕಿಕೊಂಡು ಹೋಗಬೇಕಾದ ಪರಿಸ್ಥಿತಿಯಿತ್ತು. ಆದರೆ ಸದ್ಯದ ಕಾಲ ಬದಲಾಗಿದೆ, ಸುದ್ದಿಗಳು ಹರಿವು ಹೆಚ್ಚಾಗಿದೆ. ಅವುಗಳ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕಟಿಸುವ ಕಾಲ ಬಂದಿದೆ. ಪತ್ರಿಕೋದ್ಯಮ ಜನರ ಧ್ವನಿಯಾಗಿದೆ. ಸಾರ್ವಜನಿಕರ ಸಮಸ್ಯೆಗೆ ಜೀವಂತಿಕೆ ಕೊಟ್ಟು ಸಮಸ್ಯೆ ಪರಿಹರಿಸುವ ಕಾಯಕ ವರದಿಗಾರನದ್ದಾಗಿದೆ. ಆದರೆ, ವಿದ್ಯುನ್ಮಾನ ಮಾಧ್ಯಮದ ಪ್ರಭಾವದಿಂದ ವರದಿಗಾರರು ಒತ್ತಡ ಅನುಭವಿಸುತ್ತಿದ್ದಾರೆ. ನನ್ನಿಂದಲೇ ಸಮಾಜದಲ್ಲಿ ಎಲ್ಲಾ ಬದಲಾವಣೆಗಳನ್ನು ತಂದುಬಿಡುತ್ತೇನೆ ಎಂಬ ಅಹಂ ಪತ್ರಕರ್ತರಲ್ಲಿ ಇದೆ. ಮೊದಲು ಅದರಿಂದ ಹೊರಬರಬೇಕಿದೆ, ಸದ್ಯದ ವ್ಯವಸ್ಥೆಯಲ್ಲಿ ಜನರಿಗೆ ಉಪಯುಕ್ತವಾಗುವ ಅವರ ಧ್ವನಿಯಾಗುವ ಜನಪರ ವರದಿಗಾರಿಕೆಗೆ ಆದ್ಯತೆ ನೀಡುವುದು ಇಂದು ಅಗತ್ಯವಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಮಾತನಾಡಿ, ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸುವುದು ಮತ್ತು ಸುದ್ದಿಗಳ ಮೂಲಕ ಸರ್ಕಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಲು ಪ್ರೇರೇಪಿಸುವ ಗುರುತರ ಜವಾಬ್ದಾರಿ ಪತ್ರಿಕೆ ಮತ್ತು ಪತ್ರಕರ್ತರ ಮೇಲಿದೆ ಎಂದರು.
ಸಬ್ ರಜಿಸ್ಟರ್ ವಿಠ್ಠಲ ಮಾದರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮುದ್ರಣ ಮಾಧ್ಯಮಗಳು ಕ್ಷೀಣಿಸುತ್ತಿದೆ, ಡಿಜಿಟಲ್, ವೆಬ್ ಮೀಡಿಯಾ, ಇಂಟರ್‌ನೆಟ್ ಮೀಡಿಯಾ ಪ್ರಭಾವ ಶಾಲಿಯಾಗಿ ಬೆಳೆಯುತ್ತಿದೆ. ಇದರಿಂದ ವರದಿಗಾರರ ಸಂಖ್ಯೆ ಕಡಿಮೆಯಾಗಿ ನಾಗರಿಕ ಪತ್ರಿಕೋದ್ಯಮ ಬೆಳೆಯಲು ಕಾರಣವಾಗುತ್ತಿದೆ, ಪ್ರಜಾಪ್ರಭುತ್ವದ 4ನೇ ಸ್ತಂಭವಾದ ಪತ್ರಿಕಾ ರಂಗವು ಯಾವುದೇ ನಿರ್ಬಂಧಗಳಿಲ್ಲದೆ ಸ್ವತಂತ್ರವಾಗಿ ಕೆಲಸ ಮಾಡುವ ಪ್ರಮುಖ ಮಾಧ್ಯಮವಾಗಿದೆ ಎಂದು ಬಣ್ಣಿಸಿದರು.
ಹುಬ್ಬಳ್ಳಿಯ ಡಾ.ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರವಿ ದಾಸರ ಮಾತನಾಡಿದರು.
ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
2026ರಲ್ಲಿ ಹಂಪಿ ಕ.ವಿ.ವಿ ದಿಂದ ಪಿ.ಎಚ್.ಡಿ ಪದವಿ ಪಡೆದುಕೊಂಡಿರುವ ಡಾ.ವೆಂಕಟೇಶ ಗುಡೆಪ್ಪನವರ ಹಾಗೂ ಪತ್ರಿಕಾ ವಿತರಕರಾದ ಆನಂದ ವಾಲಿಕಾರ, ಇಸ್ಮಾಯಿಲ್ ಮುಜಾವರ ಮತ್ತು ಅತಿಥಿ ಗಣ್ಯರನ್ನು ಕಾನಿಪ ಸಂಘದಿಂದ ಸನ್ಮಾನಿಸಲಾಯಿತು.
ಕಾನಿಪ ಪ್ರಧಾನ ಕಾರ್ಯದರ್ಶಿ ಎಂ.ಎಚ್.ನದಾಫ್ ಮಾತನಾಡಿದರು, ಕಾನಿಪ ಉಪಾಧ್ಯಕ್ಷ ವಿಶ್ವನಾಥ ಮುನವಳ್ಳಿ ನಿರೂಪಿಸಿದರು, ಕಾನಿಪ ಗೌ.ಅಧ್ಯಕ್ಷ ಅಶೋಕ ಕುಲಕರ್ಣಿ ವಂದಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ದೀಪಾ ಪಾಟೀಲ, ದೊಡ್ಡಮ್ಮ ಮಾದರ, ಮಂಜುಳಾ ಮಾದರ, ಕಮಲಾ ಬಂಟನೂರ, ತಾಯಮ್ಮ ಅಮತಿಗೌಡರ ಅವರು ಬಿ.ಪಿ ಮತ್ತು ರಕ್ತ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ನಡೆಸಿದರು, ಡಾ.ಎಂ.ಎಂ.ಜೋಶಿ ಆಸ್ಪತ್ರೆಯ ಸಿಬ್ಬಂದಿ ಉಚಿತ ನೇತ್ರ ಸಪಾಸಣೆ ಮಾಡಿದರು.
ಕಾನಿಪ ಸಂಘದ ಕೋಶಾಧಿಕಾರಿ ಗಣೇಶ ಮೇತ್ರಿ, ಉಪಾಧ್ಯಕ್ಷ ಸಲೀಂ ಕೊಪ್ಪದ, ಕಾರ್ಯದರ್ಶಿ ಗಳಾದ ಬಿ.ಎಚ್.ಬೀಳಗಿ, ಸಿದ್ದು ಹೂಗಾರ, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸ ಬಬಲಾದಿ, ಸದಸ್ಯ ರಾದ ಮಹಾಂತೇಶ ಕರೆಹೊನ್ನ, ವೆಂಕಟೇಶ ಗುಡೆಪ್ಪನವರ, ಜಗದೀಶ ಜೀರಗಾಳ, ಗೋವಿಂದಪ್ಪ ತಳವಾರ, ಹಸನಡೊಂಗ್ರಿ ಲೋಕಾಪೂರ, ಬಂದೇನವಾಜ ರಾಮದುರ್ಗ, ಈರಣ್ಣ ಸಾಲಗುಂದಿ, ಫೀರಸಾಬ ನಧಾಪ್, ಪತ್ರಿಕಾ ವಿತರಕರು ನಗರದ ಗಣ್ಯರು ಹಾಗೂ ಸಾರ್ವಜನಿಕರು ಉಚಿತ ನೇತ್ರ ಶಿಬಿರದಲ್ಲಿ ಭಾಗವಹಿಸಿ ಪತ್ರಿಕಾ ದಿನಾಚರಣೆಯನ್ನು ಯಶಸ್ವಿಗೊಳಿಸಿದರು.
ದೃಶ್ಯ ಮಾಧ್ಯಮಗಳ ವೇಗದ ನಡುವೆಯೂ ಮುದ್ರಣ ಮಾಧ್ಯಮದ ಸುದ್ದಿಗಳ ಮೇಲಿನ ಜನರ ನಂಬಿಕೆ ಮತ್ತು ವಿಶ್ವಾಸ ಇಂದಿಗೂ ಕಡಿಮೆಯಾಗಿಲ್ಲ. ಸಮಾಜದಲ್ಲಿ ಕಾರ್ಯಾಂಗ ಮತ್ತು ಅಧಿಕಾರಶಾಹಿಯನ್ನು ಸದಾ ಎಚ್ಚರಿಸುವ ಹಾಗೂ ಧನಾತ್ಮಕ ಬದಲಾವಣೆ ತರುವ ಮೂಲಕ ಪತ್ರಕರ್ತರು ತಮ್ಮ ಕರ್ತವ್ಯ ನಿರ್ವಹಿಸಬೇಕು. ನಾವಿಂದು ಜನರಿಗೆ ನಿಜವಾಗಿಯೂ ಅಗತ್ಯವಿರುವ ಸುದ್ದಿಗಳನ್ನು ನೀಡುತ್ತಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸುದ್ದಿಯ ಹಿಂದಿನ ನೋವನ್ನು ಸಂಪಾದಕರು ಮತ್ತು ವರದಿಗಾರರು ಇಂದಿಗೂ ಜೀವಂತವಾಗಿರಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.