ಮಲೇರಿಯಾ ಕುರಿತು ಜನರು ಜಾಗೃತರಾಗಿರಬೇಕು-ಡಾ. ಗಿರಡ್ಡಿ

KannadaprabhaNewsNetwork |  
Published : Jun 28, 2025, 12:18 AM IST
(23ಎನ್.ಆರ್.ಡಿ1 ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಡಾ. ಆರ್.ಸಿ.ಕೊರವನವರ ಉದ್ಘಾಟಿಸುತ್ತಿದ್ದಾರೆ.) | Kannada Prabha

ಸಾರಾಂಶ

ಮಳೆಗಾಲ ಸಮಯದಲ್ಲಿ ಹೆಚ್ಚು ಸೊಳ್ಳೆಗಳು ಹುಟ್ಟಿಕೊಂಡು ಮನುಷ್ಯನಿಗೆ ಕಚ್ಚುವುದರಿಂದ ಮಲೇರಿಯಾ ರೋಗ ಬರಬಹುದು. ಹಾಗಾಗಿ ಮಲೇರಿಯಾ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಗದುಗಿನ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ಹೇಳಿದರು.

ನರಗುಂದ: ಮಳೆಗಾಲ ಸಮಯದಲ್ಲಿ ಹೆಚ್ಚು ಸೊಳ್ಳೆಗಳು ಹುಟ್ಟಿಕೊಂಡು ಮನುಷ್ಯನಿಗೆ ಕಚ್ಚುವುದರಿಂದ ಮಲೇರಿಯಾ ರೋಗ ಬರಬಹುದು. ಹಾಗಾಗಿ ಮಲೇರಿಯಾ ಬಗ್ಗೆ ಜನರು ಜಾಗೃತರಾಗಿರಬೇಕೆಂದು ಗದುಗಿನ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಎಚ್.ಎಲ್. ಗಿರಡ್ಡಿ ಹೇಳಿದರು.

ಅವರು ಸೋಮವಾರ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದಲ್ಲಿ ತಾಲೂಕು ಮಟ್ಟದ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ತಾಲೂಕು ಖಾಸಗಿ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರುಗಳಿಗೆ ಮಲೇರಿಯಾ ಅಡ್ವೊಕೇಸಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೀಟಜನ್ಯ ರೋಗಗಳಾದ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆಗಳಾಗಿವೆ. ಮಲೇರಿಯಾ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ತಿಳಿಸುತ್ತಾ ನಾಲ್ಕು ಪ್ರಭೇದಗಳಾದ ಪ್ಲಾಸ್ಮೋಡಿಯಮ್ ವೈವ್ಯಾಕ್ಸ್, ಪ್ಲಾಸ್ಮೋಡಿಯಮ್ ಪಾಲ್ಸಿಪಾರ್ಮ, ಪ್ಲಾಸ್ಮೋಡಿಯಮ್ ಒಹಲೆ, ಪ್ಲಾಸ್ಮೋಡಿಯಮ್ ಮಲೇರಿಯಾ ಕುರಿತು ಸವಿಸ್ತಾರವಾಗಿ ತಿಳಿಸಿದರು. ಈ ವಿಷಯವನ್ನು ಎಲ್ಲ ಖಾಸಗಿ ವೈದ್ಯರು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿ ಮಲೇರಿಯಾ ಹರಡದಂತೆ ತಾವು ಸಹ ಆರೋಗ್ಯ ಇಲಾಖೆಗೆ ಸಹಕಾರ ನೀಡಬೇಕೆಂದು ತಿಳಿಸಿದರು. ಸೊಳ್ಳೆಗಳ ನಿಯಂತ್ರಣ ಮಾಡಿದಲ್ಲಿ ಈ ಐದು ರೋಗಗಳನ್ನು ನಿಯಂತ್ರಣ ಮಾಡಬಹುದು. ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಮನೆಗಳಲ್ಲಿ ಇರುವ ಎಲ್ಲಾ ನೀರಿನ ಪರಿಕರಗಳನ್ನು ನಾಲ್ಕೈದು ದಿನಗಳಿಗೊಮ್ಮೆ ಚೆನ್ನಾಗಿ ತಿಕ್ಕಿ ತೊಳೆದು, ಒಣಗಿಸಿ ಹೊಸ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ-ಮುತ್ತ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಸುತ್ತ-ಮುತ್ತ ಘನತ್ಯಾಜ್ಯ ವಸ್ತುಗಳು, ಟೈರ್‌ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಆಗುತ್ತದೆ, ಏಕೆಂದರೆ ಸೊಳ್ಳೆಗಳು ನಿಂತ ತಂಪಾದ ನೀರಿನಲ್ಲಿ ಹೆಣ್ಣು ಸೊಳ್ಳೆ ಮೊಟ್ಟೆಗಳನ್ನಿಟ್ಟು ಐದಾರು ದಿನಗಳಲ್ಲಿ ಸೊಳ್ಳೆಗಳಾಗಿ ಮಾರ್ಪಡುತ್ತವೆ. ಆದ್ದರಿಂದ ಸೊಳ್ಳೆಗಳಿಗೆ ನಿಂತ ನೀರು ಸಿಗದಂತೆ ನೋಡಿಕೊಳ್ಳಬೇಕು. ಜೊತೆಗೆ ಸಾರ್ವಜನಿಕರು ಸೊಳ್ಳೆ ಕಚ್ಚದಂತೆ ಮೈತುಂಬಾ ಬಟ್ಟೆ ಧರಿಸುವುದು, ಮಾರ್ಕೆಟ್‌ಗಳಲ್ಲಿ ಸಿಗುವ ಸೊಳ್ಳೆ ನಿರೋಧಕಗಳಾದ ಲಿಕ್ವಿಡ್, ಸೊಳ್ಳೆಬತ್ತಿ, ಸೊಳ್ಳೆ ಬ್ಯಾಟ್, ಸೊಳ್ಳೆಪರದೆಗಳನ್ನು ಉಪಯೋಗಿಸಬೇಕು. ಇಲಾಖೆಯಿಂದ ಕೆರೆ, ಕಟ್ಟೆ ಮುಂತಾದ ನಿಂತ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಮಲೇರಿಯಾ ರೋಗ ಪತ್ತೆ ಹಚ್ಚಲು ಯಾವುದೇ ಜ್ವರವಿದ್ದಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆಯನ್ನು ಸರಕಾರಿ ಆಸ್ಪತ್ರೆ ಮತ್ತು ಕ್ಷೇತ್ರಗಳಲ್ಲಿ ಆಶಾ ಮತ್ತು ಕ್ಷೇತ್ರ ಸಿಬ್ಬಂದಿಗಳಿಂದ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷಿಸಿ ಮಲೇರಿಯಾ ಕಂಡು ಬಂದಲ್ಲಿ ಉಚಿತವಾಗಿ ಸಂಪೂರ್ಣ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ. ಕೊಣ್ಣೂರ ಮಾತನಾಡಿ, ಪ್ರತಿ ವರ್ಷ ಜೂನ್‌ ತಿಂಗಳ ಮಳೆಗಾಲದ ಆರಂಭದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಆಚರಿಸಲಾಗುತ್ತದೆ. ಇದೊಂದು ಪ್ರಾಚೀನ ರೋಗವಾಗಿದ್ದು ಮಲೇರಿಯಾ ಮುಕ್ತ ಭಾರತ ಮಾಡುವಲ್ಲಿ ಎಲ್ಲರ ಜವಾಬ್ದಾರಿ ಇದೆ. ಕಾರ್ಯಾಗಾರಕ್ಕೆ ಹಾಜರಿರುವ ತಾಲೂಕಿನ ಎಲ್ಲ ಖಾಸಗಿ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು ಸದರಿ ಕಾರ್ಯಗಾರದ ಬಗ್ಗೆ ತಿಳಿದುಕೊಂಡು ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುವದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಡಾ. ಜಿ.ಕೆ ಭದ್ರಗೌಡ್ರ ಮಾತನಾಡಿ, ತಾಲೂಕಿನ ಎಲ್ಲ ಖಾಸಗಿ ವೈದ್ಯರುಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಮಲೇರಿಯಾ ನಿರ್ಮೂಲನೆ ಮಾಡೋಣ ಎಂದರು. ಸಹಾಯಕ ಕೀಟಶಾಸ್ತ್ರಜ್ಞೆ ಅನ್ನಪೂರ್ಣ ಶೆಟ್ಟರ್‌ ಮಾತನಾಡಿದರು. ಡಾ. ಆರ್.ಸಿ. ಕೊರವನವರ ಮಾತನಾಡಿ, ಮಲೇರಿಯಾ ಪ್ರಕರಣಗಳು ಬಾರದಂತೆ ಮುಂಜಾಗ್ರತ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ತಿಳಿಸಿದರು.

ಮಲೇರಿಯಾ ಸ್ವಂಶಯಾಸ್ಪದ ಪ್ರಕರಣ ಕಂಡು ಬಂದಲ್ಲಿ ಹೆಚ್ಚಿನ ಚಿಕಿತ್ಸೆಗೆ ಸರಕಾರಿ ಆಸ್ಪತ್ರೆಗೆ ಕಳುಹಿಸಬೇಕು. ಮತ್ತು ಅದಲ್ಲದೇ ಕ್ಷಯ, ಲಸಿಕಾ, ಗರ್ಭಿಣಿ ತಪಾಸಣೆ, ಮತ್ತು 18ವರ್ಷದೊಳಗಿನ ಗರ್ಭಿಣಿಯರು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಅನಿತಾ ಬಾಗಲಕೊಟ, ರೇಖಾ ಹಿರೇಹೊಳಿ, ಬಿ.ಎಂ. ಕೌಜಗೇರಿ, ಎಂ.ಎಂ. ಮಸೂತಿಮನಿ, ಬಿ. ಕೆ. ಪಾಟೀಲ, ಶಿವಾನಂದ ಹಳಕಟ್ಟಿ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಇದ್ದರು.

ಸಿ.ಎಫ್‌. ಕುಂಬಾರ ಸ್ವಾಗತಸಿದರು. ಎಸ್.ಎಚ್. ಕಲೂತಿ ಕಾರ್ಯಕ್ರಮ ನಿರೂಪಿಸಿದರು. ಎಂ.ಪಿ. ಶಿಗ್ಗಾಂವಕರ ವಂದಿಸಿದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ