ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ಯುವಕರಲ್ಲಿ ಈ ವಸ್ತುಗಳ ಸೇವನೆ ಹೆಚ್ಚಾಗುವ ಹಿನ್ನೆಲೆ ಪ್ರತಿಯೊಬ್ಬರು ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ತಿಳಿಸಿದರು.
ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಾದಕ ವಸ್ತುಗಳ ಜಾಗೃತಿ ಅಭಿಯಾನದ ವಾಕಥಾನ್ ಜಾಥಾಕ್ಕೆ ಚಾಲನೆ ನೀಡಿ, ನಗರದ ಪ್ರಮುಖ ರಸ್ತೆಗಳಲ್ಲಿ ಸುಮಾರು ಐದು ಕಿ.ಮೀ ಜಾಥಾ ನಡೆಸಿದ ನಂತರ ನಗರದ ಪೊಲೀಸ್ ಸಮುದಾಯ ಭವನದದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೈಹಿಕ, ಮಾನಸಿಕ ದುಷ್ಪರಿಣಾಮ
ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕೆಟ್ಟ ಪರಿಣಾಮ ಬೀರುತ್ತದೆ ಇದರಿಂದ ಎಚ್ಚರಿಕೆ ವಹಿಸುವುದು ಅಗತ್ಯ’ ಮಾದಕ ವಸ್ತುಗಳ ಬಳಕೆಯು ಅಪರಾಧವಾಗಿದೆ. ಮಾದಕ ವಸ್ತುಗಳ ಬಳಕೆಯಿಂದ ಸುತ್ತಮುತ್ತಲಿನ ಪರಿಸರ ಹಾಗೂ ಅಕ್ಕಪಕ್ಕದ ವ್ಯಕ್ತಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುವುದರಿಂದ ಮಾದಕ ವಸ್ತುಗಳನ್ನು ಬಳಸದಂತೆ ಪ್ರತಿಯೊಬ್ಬರು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ತಿಳಿಸಿದರು. ಅನೇಕ ವಿದ್ಯಾರ್ಥಿಗಳು ಈ ಜಾಲದಲ್ಲಿ ಸಿಲುಕಿರುವುದನ್ನು ಪತ್ತೆ ಹಚ್ಚಿದ್ದೇವೆ. ಅದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿ, ಬಂಧಿಸುತ್ತೇವೆ. ಆಗ ಯುವಕರು ತಮ್ಮ ಜೀವನಪರ್ಯಂತ ಪಶ್ಚಾತ್ತಾಪ ಪಡಬೇಕಾಗುತ್ತದೆ. ಆದುದರಿಂದ ಯುವಕರು ಎಚ್ಚತ್ತುಕೊಳ್ಳಬೇಕು. ತಮ್ಮ ಸಹಪಾಠಿಗಳು ಮಾದಕವಸ್ತು ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದರೆ ಕೂಡಲೆ ಪೋಲಿಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಯುವಕರಿಗೆ ಜಾಗೃತಿ ಮೂಡಿಸಿ
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಖಾಸಿಂ ಮಾತನಾಡಿ, ಮಾದಕ ವಸ್ತು ಸೇವನೆ ಚಟಕ್ಕೆ ಬಿದ್ದ ವಿದ್ಯಾರ್ಥಿಗಳು ಹಣಕ್ಕಾಗಿ ಅಪರಾದಗಳನ್ನು ಮಾಡಲು ಹೇಸುವುದಿಲ್ಲ. ಅದುದರಿಂದ ಮಾದಕ ವಸ್ತುಗಳ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಬೇಕು. ಇವುಗಳ ಸೇವನೆ, ಸಾಗಣೆ, ಮಾರಾಟ ಮಾಡುವುದು ಅಪರಾಧವಾಗಿದ್ದು, ಅದರ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ವಾಕಥಾನ್ ಜಾಥಾವು ನಗರದ ಬಿಬಿ ರಸ್ತೆ, ಗಂಗಮ್ಮನಗುಡಿರಸ್ತೆ, ಬಜಾರ್ ರಸ್ತೆ ಎಂ.ಜಿ. ರಸ್ತೆಗಳ ಮೂಲಕ ಸಾಗಿ ಸಮುಧಾಯ ಭವನದ ಬಳಿ ಮುಕ್ತಾಯವಾಯಿತು. ವಾಕಥಾನ್ ಜಾಥಾದಲ್ಲಿ ಶ್ರೀ ಕೆವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ,ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಬಾಗಿಯಾಗಿ, ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಪೊಲೀಸ್ ಡಿವೈಎಸ್ಪಿ ಎಸ್.ಶಿವಕುಮಾರ್, ಚಿಂತಾಮಣಿ ಡಿವೈಎಸ್ಪಿ ಮುರುಳಿಧರ್,ಡಿ.ಎ.ಆರ್. ಡಿವೈಎಸ್ಪಿ ಮಂಜುನಾಥ್, ಗುಡಿಬಂಡೆ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ್, ಶ್ರೀ ಕೆವಿ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಆರ್.ವೆಂಕಟೇಶ್, ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಎಚ್.ನಂಜುಂಡಯ್ಯ, ಸಂಚಾರಿ ಪೋಲಿಸ್ ಠಾಣೆಯ ಪಿಎಸ್ ಐ ಮಂಜುಳ, ಮತ್ತಿತರರು ಇದ್ದರು.