ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸುಮಾರು 28 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ 50 ಹಾಸಿಗೆಗಳ ದುಂಡುಶೆಟ್ಟಿ ಲಕ್ಷ್ಮಮ್ಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ತಂದಿದ್ದು ಎಂದು ಕೆಲವರು ಹೇಳುತ್ತಿದ್ದಾರೆ ಇದರ ಬಗ್ಗೆ ನನಗಾಗಲಿ ಆಥವಾ ಕ್ಷೇತ್ರದ ಶಾಸಕರಾದ ಎಚ್.ಟಿ.ಮಂಜುಗಾಗಲೀ ಯಾವುದೇ ಅಸೂಹೆಯಿಲ್ಲ ಎಂದರು.
ಒಂದು ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಮುಂದೆ ಬಂದ ಮತ್ತೊಂದು ಸರ್ಕಾರ ಮುಂದುವರಿಸುತ್ತದೆ. ಅದರಂತೆ ಆಸ್ಪತ್ರೆ ಮುಂದುವರಿದ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮತ್ತು ಕ್ಷೇತ್ರದ ಶಾಸಕ ಎಚ್.ಟಿ.ಮಂಜು ನಮ್ಮ ನಮ್ಮ ಜವಾಬ್ದಾರಿ ಅರಿತು ಪೂರ್ಣಗೊಳಿಸಿ ಕ್ಷೇತ್ರದ ಜನರಿಗೆ ಸಮರ್ಪಿಸಿದ್ದೇವೆ ಎಂದರು.ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಪ್ಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ತಾಯಿ ಮಗು ಆಸ್ಪತ್ರೆ ನಿರ್ಮಿಸಿ ಅಗತ್ಯ ವೈದ್ಯರ ನೇಮಕ ಮಾಡಿದೆ. ಬೆಂಗಳೂರು ಮಹಾನಗರದಲ್ಲಿ ಒಂದು ಹೆರಿಗೆ ಮಾಡಿಸಿಕೊಳ್ಳಲು ಕನಿಷ್ಠ 5 ರಿಂದ 6 ಲಕ್ಷ ರು. ಹಣ ಬೇಕು. ಮೈಸೂರು, ಹಾಸನ ಮುಂತಾದ ನಗರ ಪ್ರದೇಶಗಳಲ್ಲಿ ಹೆರಿಗೆ ಮಾಡಿಸಿಕೊಂಡರೆ ಕನಿಷ್ಠ 1 ರಿಂದ 2 ಲಕ್ಷ ರು. ಬೇಕು. ಸರ್ಕಾರಿ ತಾಯಿ ಮಗು ಆಸ್ಪತ್ರೆಯಲ್ಲಿ ಒಂದೇ ನಯಾಪೈಸೆ ಖರ್ಚಿಲ್ಲದೆ ಹೆರಿಗೆ ಮಾಡಲಾಗುತ್ತದೆ. ಇದರ ಪ್ರಯೋಜನ ಪಡೆಯುವಂತೆ ಸಚಿವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ರಾಜ್ಯದಲ್ಲೂ ಮತದಾರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ. ತಾಲೂಕಿನಲ್ಲಿ ಈಗಾಗಲೇ ಶೇ.95 ರಷ್ಟು ಮ್ಯಾಪಿಂಗ್ ಕಾರ್ಯ ಆಗಿದೆ. ಉಳಿದ ರಷ್ಟು ಆಗಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ನಿಮಗೆ ಯಾವುದೇ ಸರ್ಕಾರದ ಸವಲತ್ತುಗಳು ದೊರಕುವುದಿಲ್ಲ. ಜನತೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಸ್ವಯಂ ಪರಿಶೀಲನೆ ಮಾಡಿಕೊಳ್ಳುವಂತೆ ಎಚ್ಚರಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹುಟ್ಟೂರಿನ ಜನರ ಕಲ್ಯಾಣಕ್ಕಾಗಿ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದರು. ಅಂದು ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡರು ಕಾಮಗಾರಿ ಆರಂಭಿಸಿದ್ದರು. ಅದನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ ಎಂದರು.
ಅಗತ್ಯ ವೈದ್ಯಕೀಯ ಸಿಬ್ಬಂದಿ, ಯಂತ್ರೋಪಕರಣಗಳನ್ನು ತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂಧಿಗಳ ಕೊರತೆಯಿದೆ. ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರವಿದೆ. ಅದನ್ನು ಬಳಕೆ ಮಾಡುವ ರೆಡಿಯಾಲಿಜಿಸ್ಟ್ ಇಲ್ಲ. ಸರ್ಕಾರ ಅಗತ್ಯ ಮೂಲ ಸೌಲಭ್ಯ, ಸಿಬ್ಬಂದಿಗಳನ್ನು ಒದಗಿಸಿಕೊಟ್ಟಾಗ ಮಾತ್ರ ಸರ್ಕಾರದ ಆಶಯ ಈಡೇರುತ್ತದೆ ಎಂದರು.