ಹರಪನಹಳ್ಳಿ: ಅಧಿಕಾರದಲ್ಲಿದ್ದಾಗ ಜನರು ನಮ್ಮ ಮೌಲ್ಯ ಅಳೆಯಬೇಕು, ಈ ನಿಟ್ಟಿನಲ್ಲಿ ನಾವು ನಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಡಿವೈಎಸ್ಪಿ ಡಾ.ಸಂತೋಷ್ ಚವ್ಹಾಣ್ ಹೇಳಿದರು.
ಶಂಭುಲಿಂಗ ಹಿರೇಮಠ ಅವರನ್ನು ನಾವು ಒಲ್ಲದ ಮನಸ್ಸಿನಿಂದ ಬಿಳ್ಕೊಡುತ್ತಿದ್ದೇವೆ, ಕಳೆದ ಮೂರು ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ಸೇವೆ ಸಲ್ಲಿಸಿ ಜನರ ವಿಶ್ವಾಸ ಗಳಿಸಿದ್ದರು ಮತ್ತು ಇಲಾಖೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು, ನಮ್ಮ ಸಮವಸ್ತ್ರ ಯಾವಾಗಲೂ ನಂಬಿಕೆ ವಿಶ್ವಾಸ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದರು.
ಸಿಪಿಐ ಮಹಾಂತೇಶ ಜಿ.ಸಜ್ಜನ್ ಮಾತನಾಡಿ, ಶಂಭುಲಿಂಗ ಹಿರೇಮಠ ನಮ್ಮ ಇಲಾಖೆಗೆ ಶಕ್ತಿಯಾಗಿದ್ದರು, ಎಲ್ಲ ಜವಾಬ್ದಾರಿ ಚಾಚು ತಪ್ಪದೆ ನಿರ್ವಹಿಸುತ್ತಿದ್ದರು, ಎಲ್ಲರ ಜತೆ ಸಾಮರಸ್ಯದಿಂದ ಬದುಕಿದ್ದರು ಎಂದರು.ವರ್ಗಾವಣೆಗೊಂಡ ಪಿಎಸ್ಐ ಶಂಭುಲಿಂಗ ಹಿರೇಮಠ ಮಾತನಾಡಿ, ಹರಪನಹಳ್ಳಿಯಲ್ಲಿ ಸೇವೆ ಸಲ್ಲಿಸಿದ್ದು ನನಗೆ ತೃಪ್ತಿ ತಂದಿದೆ, ಆರಂಭದಲ್ಲಿ ದೊಡ್ಡ ಠಾಣೆ ಹೇಗೆ ನಿರ್ವಹಿಸುವುದು ಎಂಬ ಭಯವಿತ್ತು, ಆದರೆ ಜನರ ಸಹಕಾರ ಮತ್ತು ಮೇಲಾಧಿಕಾರಿಗಳ ಸಹಾಯದಿಂದ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು, ಇಲ್ಲಿ ಸಲ್ಲಿಸಿರುವ ಸೇವೆ ನನ್ನ ಜೀವನದಲ್ಲಿ ಮರೆಯಲಾಗದು ಎಂದರು.
ನ್ಯಾಯವಾದಿ ಬಂಡ್ರಿ ಗೋಣಿಬಸಪ್ಪ ಮಾತನಾಡಿ, ಶಂಭುಲಿಂಗ ಹಿರೇಮಠ ಕರ್ತವ್ಯದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಯಾವತ್ತೂ ವಿಚಲಿತರಾಗದೇ ಸಮಚಿತ್ತದಿಂದ ಸಮಸ್ಯೆ ಗ್ರಹಿಸುವ ಶಕ್ತಿ ಹೊಂದಿದ್ದರು ಎಂದರು.
ಈ ಸಂದರ್ಭದಲ್ಲಿ ಚಿಗಟೇರಿ ಪಿಎಸ್ಐ ಕೆ. ನಾಗರತ್ನ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕನಕಬಸ್ಸಾಪುರ ಮಂಜುನಾಥ, ಮಾಜಿ ಅಧ್ಯಕ್ಷ ಲಾಟಿ ದಾದಪೀರ್, ನಗರಸಭೆ ಮಾಜಿ ಸದಸ್ಯ ಉದ್ದಾರ ಗಣೇಶ, ಗುಡಿ ನಾಗರಾಜ, ವಾಗೀಶ, ಮುಜಬರ್ ರಹಿಮಾನ್, ಜಾಯದ್, ಅಂಜಿನಪ್ಪ, ಎಲ್. ಮಂಜ್ಯಾನಾಯ್ಕ್, ನದೀಮ್, ಕೂಲ್ ಇರ್ಫಾನ್ ಜಿಶಾನ್, ರಿಯಾಜ್, ಅಬ್ಬು ಸಲೇಹಾ ಸೇರಿದಂತೆ ಪೊಲೀಸ್ ಸಿಬ್ಬಂದಿ ವಿವಿಧ ಸಂಘ ಸಂಸ್ಥೆ ಮುಖಂಡರು ಸಾರ್ವಜನಿಕರು ಇದ್ದರು.