ಶಿವಕುಮಾರ ಕುಷ್ಟಗಿ
ಜಿಮ್ಸ್ ಆಸ್ಪತ್ರೆಯಿಂದ ನಗರದ ವಿವಿಧ ಭಾಗಗಳಿಗೆ ಹೋಗುವ ಜನರನ್ನು ಆ್ಯಂಬುಲೆನ್ಸ್ ಚಾಲಕರು ನಿತ್ಯವೂ ಡ್ರಾಪ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರೋಗಿಗಳನ್ನು ಸಾಗಿಸಲು ಮೀಸಲಿಟ್ಟಿರುವ ವಾಹನದಲ್ಲಿ ಸಾಮಾನ್ಯ ಜನರನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆಕ್ರೋಶ: ಗದಗ ಮೆಡಿಕಲ್ ಕಾಲೇಜು ಆವರಣದಲ್ಲಿ ವೈದ್ಯಕೀಯ, ನರ್ಸಿಂಗ್ ಸೇರಿದಂತೆ ಹಲವಾರು ಕೋರ್ಸ್ ಕಾಲೇಜುಗಳಿವೆ. ಆಸ್ಪತ್ರೆಯಲ್ಲಿ ನಿತ್ಯವೂ ನೂರಾರು ಜನ ಕೆಲಸ ಮಾಡುತ್ತಾರೆ. ಇವರಲ್ಲಿ ಬಹುತೇಕರು ಆಸ್ಪತ್ರೆಯ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳುವ ವೇಳೆಯಲ್ಲಿಯೇ ಆ್ಯಂಬುಲೆನ್ಸನಲ್ಲಿ ಹೋಗುತ್ತಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿವೆ.ವಿಡಿಯೋಗಳು ವೈರಲ್: ಆ್ಯಂಬುಲೆನ್ಸ್‌ಗಳಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುತ್ತಿರುವುದು ಮತ್ತು ಇಳಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಅಲ್ಪ ಹಣದ ಆಸೆಗಾಗಿ ಅಥವಾ ಪರಿಚಯಸ್ಥರ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ಅಲ್ಪ ಹಣ ಪಡೆದು ಸಾಗಾಟ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಗಂಭೀರ ಆರೋಪ.
ಆಳವಾಗಿ ತನಿಖೆ: ಈ ಕುರಿತು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಎರಡು ಆ್ಯಂಬುಲೆನ್ಸ್‌ಗಳು ನಮಗೆ ಸಂಬಂಧಿಸಿದ್ದಲ್ಲ ಎನ್ನುವುದು ಪತ್ತೆಯಾಗಿದೆ. ಆದರೂ ಈ ಕುರಿತು ಇನ್ನಷ್ಟು ಆಳವಾಗಿ ತನಿಖೆ ನಡೆಸಲು ಮತ್ತು ಸಿಸಿ ಕ್ಯಾಮೆರಾ ಪುಟೇಜ್ ಚೆಕ್ ಮಾಡಿ, ಇದು ಯಾವಾಗ ಆಗಿರುವ ಘಟನೆ, ಯಾರು ಚಾಲಕರಾಗಿ ಕೆಲಸ ಮಾಡಿದ್ದಾರೆ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.