ಬಸ್ಸಿನ ಆ್ಯಕ್ಸಲ್ ಕಟ್‌, ಉರುಳುವುದನ್ನು ತಡೆದ ಜನರು

KannadaprabhaNewsNetwork |  
Published : Jan 03, 2024, 01:45 AM IST
ಕಾರವಾರದಲ್ಲಿ ಸಾರಿಗೆ ಸಂಸ್ಥೆ ಬಸ್‌ನ ಆ್ಯಕ್ಸಲ್ ತುಂಡಾಗಿ ನಿಂತಿರುವುದು. | Kannada Prabha

ಸಾರಾಂಶ

ಹಬ್ಬುವಾಡದ ಬಳಿ ಚಲಿಸುತ್ತಿದ್ದ ವೇಳೆಯೇ ಬಸ್‌ನ ಆ್ಯಕ್ಸಲ್ ತುಂಡಾಗಿದ್ದು, ಹಿಂಭಾಗದ ಟೈರ್ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಇದರಿಂದ ದೊಡ್ಡದಾದ ಶಬ್ದ ಬಂದಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ.

ಕಾರವಾರ:

ನಗರದ ಹಬ್ಬುವಾಡ ರಸ್ತೆಯಲ್ಲಿ ಮಂಗಳವಾರ ನಡುರಸ್ತೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ನ ಆ್ಯಕ್ಸಲ್ ತುಂಡಾಗಿ ಉರುಳಿ ಬೀಳುತ್ತಿದ್ದಾಗ ಸಾರ್ವಜನಿಕರೇ ತಡೆದು ನಿಲ್ಲಿಸಿದ್ದಾರೆ. ಪ್ರಯಾಣಿಕರು ಚಿಕ್ಕ-ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

ಇಲ್ಲಿನ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಬೆಳಗ್ಗೆ ೮.೩೦ರ ವೇಳೆ ಕೆರವಡಿ-ಮಲ್ಲಾಪುರಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು, ಬಸ್‌ನಲ್ಲಿ ೪೫ಕ್ಕೂ ಅಧಿಕ ಪ್ರಯಾಣಿಕರಿದ್ದರು. ಹಬ್ಬುವಾಡದ ಬಳಿ ಚಲಿಸುತ್ತಿದ್ದ ವೇಳೆಯೇ ಬಸ್‌ನ ಆ್ಯಕ್ಸಲ್ ತುಂಡಾಗಿದ್ದು, ಹಿಂಭಾಗದ ಟೈರ್ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಇದರಿಂದ ದೊಡ್ಡದಾದ ಶಬ್ದ ಬಂದಿದೆ. ಕೂಡಲೇ ಚಾಲಕ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಕ್ಕಪಕ್ಕ ಮನೆಗಳಿದ್ದು, ಆ ಶಬ್ದಕ್ಕೆ ಹೊರಕ್ಕೆ ಓಡಿಬಂದಿದ್ದಾರೆ. ಬಸ್ ಒಳಗಿದ್ದ ಪ್ರಯಾಣಿಕರ ಚೀರಾಟ ಕೇಳಿ ಸಮೀಪಕ್ಕೆ ಧಾವಿಸಿ ಬಸ್ ನೆಲಕ್ಕೆ ಉರುಳುವುದನ್ನು ತಪ್ಪಿಸಿದ್ದಾರೆ. ಚಾಲಕನ ಭಾಗಕ್ಕೆ ವಾಲಿದ್ದ ಬಸ್‌ನನ್ನು ಕೈಯಿಂದ ಹಿಡಿದು ನಿಲ್ಲಿಸಿದ್ದಾರೆ. ಹೀಗಾಗಿ ಬಸ್ ಉರುಳಿ ಬೀಳದೇ ಪ್ರಯಾಣಿಕರು ಚಿಕ್ಕಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.ಬಸ್ ಅಡ್ಡಲಾಗಿ ರಸ್ತೆಗೆ ನಿಂತಿದ್ದರಿಂದ ಹಬ್ಬುವಾಡ ಕೈಗಾ ರಸ್ತೆಯಲ್ಲಿ ಎರಡು ತಾಸಿಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಇಲ್ಲಿನ ಸಂಚಾರಿ ಠಾಣೆಯ ಪಿಎಸ್‌ಐ ದೇವೇಂದ್ರ ನಾಯ್ಕ, ಪರಶುರಾಮ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿಕ್ಕ ವಾಹನಗಳನ್ನು ಬದಲಿ ರಸ್ತೆಯಲ್ಲಿ ಸಾಗುವಂತೆ ಕ್ರಮಕೈಗೊಂಡರು. ಬಳಿಕ ಕ್ರೇನ್ ಸಹಾಯದಿಂದ ಬಸ್‌ನ್ನು ಡಿಪೋಕ್ಕೆ ತೆಗೆದುಕೊಂಡು ಹೋಗಲಾಯಿತು.

ಜಿಲ್ಲೆಯ ಬಹುತೇಕ ಡಿಪೋಗಳಲ್ಲಿ ಹಳೆಯ ಬಸ್‌ಗಳಿದ್ದು, ಆಗಾಗ ಬಸ್ ಕೆಟ್ಟು ನಿಲ್ಲುವುದು, ಹಳೆಯ ಚಕ್ರದಿಂದ ಪದೇ ಪದೇ ಪಂಗ್ಚರ್ ಆಗುವುದು ಒಳಗೊಂಡು ಅವಘಡಗಳು ಸಂಭವಿಸುತ್ತಿದೆ. ಆದರೂ ಕೂಡಾ ಸಾರಿಗೆ ಸಂಸ್ಥೆಯವರು ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’