ಬರಗಾಲಕ್ಕಾಗಿ ಅನುದಾನ, ಕೇಂದ್ರದ ವಿಳಂಬ ದ್ರೋಹಕ್ಕೆ ಜನ ಕ್ಷಮಿಸೊಲ್ಲ

KannadaprabhaNewsNetwork | Published : Nov 28, 2023 12:30 AM

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ಭೇಟಿ ಮಾಡಿ ಹೋಗಿದ್ದರೂ ರಾಜ್ಯದ ರೈತರಿಗೆ ಬರಗಾಲಕ್ಕಾಗಿ ಅನುದಾನ ಬಿಡುಗಡೆ ಮಾಡುವಲ್ಲಿ ಕೇಂದ್ರ ತೀವ್ರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಈ ವಿಳಂಬ ದ್ರೋಹವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಗದಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೇಳಿಕೆ

ಕೇಂದ್ರ ಹಠಮಾರಿ ಧೋರಣೆ ಅನುಸರಿಸುತ್ತಿದೆಗದಗ: ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ಪರಿಶೀಲಿಸಿ ತೆರಳಿದ್ದರೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ವಿಳಂಬ ದ್ರೋಹವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಸೋಮವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದ ಸಚಿವರಿಗೆ ಭೇಟಿಗೆ ಕೇಂದ್ರ ಸರ್ಕಾರದ ಸಚಿವರು ಅವಕಾಶವನ್ನೇ ನೀಡುತ್ತಿಲ್ಲ. ಹಲವು ಮನವಿಗಳ ಬಳಿಕ ಈಗಷ್ಟೇ ಕಂದಾಯ ಮತ್ತು ಕೃಷಿ ಸಚಿವರು ಭೇಟಿ ಮಾಡಿ ಬಂದಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಬಿಟ್ಟು ರಾಜ್ಯದ ಜನರ ಪಾಲಿನ ಹಕ್ಕನ್ನು ನೀಡಬೇಕು ಎಂದು ಒತ್ತಾಯಿಸಿದರು. ಗದಗ ನಗರದಲ್ಲಿ ವೇಸ್ಟ್ ಟು ಎನರ್ಜಿ ಪ್ರೋಡಕ್ಟ್ ಎನ್ನುವ ವಿಶೇಷ ಮಾದರಿಯ ಕಲ್ಪನೆಯೊಂದಿಗೆ ನಗರದ ತ್ಯಾಜ್ಯವಿಲೇವಾರಿ ಘಟಕ ಪಕ್ಕದಲ್ಲಿಯೇ ನೂತನ ಘಟಕ ಪ್ರಾರಂಭಿಸಲು ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯದಲ್ಲಿಯೇ ಅದಕ್ಕೆ ಚಾಲನೆ ದೊರೆಯಲಿದೆ ಎಂದರು.

ಸ್ಮಾರಕಗಳ ದತ್ತು ವಿಷಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಮಾರಕ ದರ್ಶನ, ಸ್ಮಾರಕ ದತ್ತು ಸ್ವೀಕಾರ ಹಿನ್ನೆಲೆ ಈಗಾಗಲೇ ಬೀದರ್, ಕಲಬುರಗಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಅತ್ಯಂತ ಅದ್ಭುತ ಸ್ಮಾರಕಗಳನ್ನು ಜನರು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾರೆ. ರಾಜ್ಯದಲ್ಲಿ ಸಾವಿರಾರು ಸ್ಮಾರಕಗಳಿದ್ದರೂ ಇದುವರೆಗೆ ರಾಜ್ಯ ಸರ್ಕಾರದಿಂದ ಕೇವಲ 850 ಸ್ಮಾರಕಗಳಿಗೆ ಮಾತ್ರ ಅಧಿಸೂಚನೆ ಹೊರಡಿಸಲಾಗಿದೆ. ಮತ್ತೆ 200 ಸ್ಮಾರಕಗಳನ್ನು ಡಿಸೆಂಬರ್ ಅಂತ್ಯದೊಳಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು.ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿ ಕೈಗಾರಿಕೆಗಳು ತಮ್ಮ ಸಿಎಸ್ ಆರ್ ಅನುದಾನದ ನೀಡಲು ಮುಂದೆ ಬರುತ್ತಿವೆ. ಲಕ್ಕುಂಡಿ ಸ್ಮಾರಕಗಳನ್ನು ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಯುನೆಸ್ಕೋ ಕೇಳುವ ದಾಖಲೆಗಳನ್ನು ಒದಗಿಸಲು ಖಾಸಗಿ ಏಜೆನ್ಸಿ ನಿಗದಿಪಡಿಸಬೇಕಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಅಶೋಕ ಮಂದಾಲಿ, ಜಿಪಂ ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಉಮರ್ ಫಾರೂಕು ಹುಬ್ಬಳ್ಳಿ ಮುಂತಾದವರು ಹಾಜರಿದ್ದರು. ಗದಗ ಅಭಿವೃದ್ಧಿಗೆ ಆದ್ಯತೆಸಚಿವ ಸಂಪುಟದಲ್ಲಿ ಗದಗ ನಗರದ ಯುಜಿಡಿಗೆ ₹ 34 ಕೋಟಿ, ಯುಜಿಡಿ ವಿಸ್ತರಣೆಗೆ ₹ 30 ಕೋಟಿ, ಜಲಮೂಲಗಳ ಪುನಶ್ಚೇತನಕ್ಕೆ ಮತ್ತು ಹಸರೀಕರಣ ಮಾಡಲು ₹ 30 ಕೋಟಿ ಮಂಜೂರಾತಿ ನೀಡಿದೆ. ಅದೇ ರೀತಿ ನಗರದ ಹೃದಯ ಭಾಗದಲ್ಲಿರುವ ಅಮೂಲ್ಯ (ವಕಾರ ಸಾಲು) 34 ಎಕರೆ ಆಸ್ತಿಯಲ್ಲಿ ವಾಣಿಜ್ಯ, ಸಂಸ್ಕೃತಿ ಹಾಗೂ ಪ್ರದರ್ಶನ ಕೇಂದ್ರ ಸೃಷ್ಟಿಸಿ ಸದ್ಬಳಕೆ ಮಾಡಿಕೊಳ್ಳಲು ಕ್ಯಾಬಿನೆಟ್ ಅನುಮತಿ ನೀಡಿದೆ. (ಪಿಪಿಪಿ ಮಾಡೆಲ್) ಸಾರ್ವಜನಿಕ ಸಹಭಾಗಿತ್ವ ಹಾಗೂ ಸರ್ಕಾರದ ಯೋಜನೆ ಅಳವಡಿಸಿಕೊಂಡು ಈ ಯೋಜನೆ ಜಾರಿ ಆಗಲಿದೆ. ಇದರಿಂದ ಗದಗ ನಗರದ ಚಿತ್ರಣವೇ ಬದಲಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು, ವೈಜ್ಞಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಕ್ಯಾಬಿನೆಟ್ ನಲ್ಲಿ ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

Share this article