ವಿಕಲಚೇತನರು ಸೌಲಭ್ಯ ವಂಚಿತರಾಗಬಾರದು

KannadaprabhaNewsNetwork | Published : Dec 5, 2024 12:31 AM

ಸಾರಾಂಶ

ವಿಶೇಷಚೇತನರು ಎಲ್ಲ ರಂಗಗಳಲ್ಲೂ ಧೈರ್ಯವಾಗಿ ಪಾಲ್ಗೊಳ್ಳುವುದು, ಮುನ್ನುಗ್ಗುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರದಿಂದಲೂ ಸಾಕಷ್ಟು ಸೌಕರ್ಯಗಳು ಲಭ್ಯವಿದ್ದು, ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು, ಸಮಾಜದಲ್ಲಿ ವಾಸಿಸುವ ನಾಗರೀಕರು ವಿಶೇಷಚೇತರನ್ನು ನಿರ್ಲಕ್ಷ್ಯ ಮಾಡದೆ ಸಮಾನತೆಯಿಂದ ಕಾರಣಬೇಕು

ಕನ್ನಡಪ್ರಭ ವಾರ್ತೆ ಕೆಜಿಎಫ್ದೈಹಿಕವಾಗಿ ಮತ್ತು ಮಾನಸಿಕವಾಗಿ ನ್ಯೂನತೆ ಇರುವಂತಹವರನ್ನು ವಿಶೇಷಚೇತನರು ಎಂದು ಕರೆಯಲಾಗುತ್ತಿದ್ದು, ಇವರಿಗೆ ಸಮಾಜದಲ್ಲಿ ನಾಯಕತ್ವದ ಮತ್ತು ಬದುಕುವ ಹಕ್ಕನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಪ್ರತಿ ವರ್ಷ ಡಿ.೩ ರಂದು ಅಂತರಾಷ್ಟ್ರೀಯ ವಿಶೇಷಚೇತನರ ದಿನಾಚರಣೆ ಆಚರಿಸಲಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ್ ಕುಮಾರ್.ಎಂ ತಿಳಿಸಿದರು. ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತದ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶ್ವ ವಿಶೇಷಚೇತನರ ದಿನಾಚರಣೆಯಲ್ಲಿ ಮಾತನಾಡಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ನ್ಯೂನತೆಯಿದ್ದರೂ ಪ್ರತಿಯೊಬ್ಬ ವಿಶೇಷಚೇತನರು ಯಾವುದೇ ಕಾರಣಕ್ಕೂ ತಮ್ಮ ನ್ಯೂನತೆಯಿಂದ ಸವಲತ್ತುಗಳಿಂದ ವಂಚಿತರಾಗಬಾರದು ಎಂದರು.ಸೌಲಭ್ಯ ಬಳಸಿಕೊಳ್ಳಬೇಕು

ವಿಶೇಷಚೇತನರು ಎಲ್ಲ ರಂಗಗಳಲ್ಲೂ ಧೈರ್ಯವಾಗಿ ಪಾಲ್ಗೊಳ್ಳುವುದು, ಮುನ್ನುಗ್ಗುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರದಿಂದಲೂ ಸಾಕಷ್ಟು ಸೌಕರ್ಯಗಳು ಲಭ್ಯವಿದ್ದು, ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು, ಸಮಾಜದಲ್ಲಿ ವಾಸಿಸುವ ನಾಗರೀಕರು ವಿಶೇಷಚೇತರನ್ನು ನಿರ್ಲಕ್ಷ್ಯ ಮಾಡುವುದು, ಅವಹೇಳನ ಮಾಡುವುದನ್ನು ಮಾಡದೇ, ಅವರನ್ನೂ ಸಹ ಇತರರಂತೆ ಸಮಾನವಾಗಿ ಕಾಣುವುದನ್ನು ಮಾಡಬೇಕು ಎಂದರು.ತಾಲೂಕು ಕಾನೂನು ಸೇವಾ ಪ್ರಾಧಿಕಾರದಿಂದ ವಿಶೇಷಚೇತನರಿಗೆ ಉಚಿತವಾಗಿ ಕಾನೂನು ಸೇವೆ ಒದಗಿಸಿಕೊಡಲಾಗುವುದು. ಕೆಜಿಎಫ್‌ನ ೬ ನ್ಯಾಯಾಲಯಗಳಲ್ಲಿ ವಿಶೇಷಚೇತನರಿಗೆ ಸಂಬಂಧಿಸಿದ ಪ್ರಕರಣಗಳೇನಾದರೂ ಇದ್ದಲ್ಲಿ ಶೀಘ್ರವಾಗಿ ಅವುಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಪಡಿಸಲಾಗುವುದು ಎಂದರು.ವಿಕಲಚೇತನರಿಗೆ ಅ‍ವಕಾಶ ನೀಡಿ

ಹಿರಿಯ ನ್ಯಾಯಾಧೀಶ ಮುಜಫರ್ ಎಂ.ಮಾಂಝರಿ ಮಾತನಾಡಿ, ಪ್ರಪಂಚದ ಎಲ್ಲ ದೇಶಗಳಲ್ಲೂ ವಿಕಲಚೇತನ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳ ಪ್ರತಿಭೆ ಹಾಗೂ ಸಾಧನೆಗಳನ್ನು ಹೊರತರಲು ಹಾಗೂ ಜನರಿಗೆ ಅರಿವು ಮೂಡಿಸಲು ವಿಶ್ವ ವಿಶೇಷಚೇತನ ದಿನಾಚರಣೆ ಆಚರಿಸಲಾಗುತ್ತಿದೆ. ವಿಕಲಚೇತನರು ಮತ್ತು ಸಾಮಾನ್ಯರಿಗೆ ಬಹಳಷ್ಟು ವ್ಯತ್ಯಾಸಗಳಿರುವುದಿಲ್ಲ. ಅವರಿಗೆ ಅವಕಾಶಗಳು ಕಡಿಮೆಯಿದ್ದು, ಅವರಿಗೆ ಅವಕಾಶಗಳನ್ನು ಹೆಚ್ಚಾಗಿ ಕಲ್ಪಿಸಿದಲ್ಲಿ ಅವರೂ ಸಹ ಇತರರಂತೆ ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ವಿಶೇಷವಾದ ಸಾಧನೆಗಳನ್ನು ಮಾಡಲು ಸಾಧ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ವಿಕಲಚೇತನರು ತಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ಯೋಚಿಸದೇ ಆತ್ಮವಿಶ್ವಾಸದಿಂದ ಮುನ್ನುಗ್ಗಿದಲ್ಲಿ ಏನನ್ನು ಬೇಕಾದರೂ ಸಾಧಿಸಲು ಸಾಧ್ಯವಿದ್ದು, ವಿಶೇಷಚೇತನರು ತಮ್ಮಲ್ಲಿರುವ ಶಕ್ತಿಯನ್ನರಿತು ಮುಂದೆ ಸಾಗಿ ಸಾಧಿಸಬೇಕೆಂದರು.ಈ ವೇಳೆ ತಹಸೀಲ್ದಾರ್ ನಾಗವೇಣಿ, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್, ವಿಶೇಷಚೇತನ ಇಲಾಖೆ ಸಂಪನ್ಮೂಲ ವ್ಯಕ್ತಿ ಸುನಿಲ್ ಇದ್ದರು.

Share this article