ಬೇಲೂರು ತಾಲೂಕು ಕಚೇರಿಯಲ್ಲಿ ಜನರ ಕೆಲಸಗಳು ವಿಳಂಬ

KannadaprabhaNewsNetwork |  
Published : Jun 23, 2026, 01:30 AM IST
22ಎಚ್ಎಸ್ಎನ್3 : ತಹಶೀಲ್ದಾರ್‌ಗೆ ಕರವೇ  ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ   ಚಂದ್ರಶೇಖರ್ ನೇತೃತ್ವದಲ್ಲಿ   ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕು ಕಚೇರಿಯಲ್ಲಿ ಬಗರ್‌ಹುಕುಂ ಜಮೀನು ಮಂಜೂರಾತಿ ಸಂಬಂಧಿತ ಕಾರ್ಯಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್‌ಐ, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಕೆಲ ಸಿಬ್ಬಂದಿ ರಜೆಯಲ್ಲಿರುವುದರಿಂದ ಕಚೇರಿ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಉಂಟಾಗಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ಬಡವರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕರವೇ ಪದಾಧಿಕಾರಿಗಳು ತಹಸೀಲ್ದಾರ್ ಅವರ ಗಮನಕ್ಕೆ ತಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಸಿಬ್ಬಂದಿ ಕೊರತೆಯಿಂದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸಗಳು ವಿಳಂಬವಾಗುತ್ತಿದ್ದು ವಿದ್ಯಾರ್ಥಿಗಳು, ರೈತರು ಹಾಗೂ ವೃದ್ಧರು ದಿನನಿತ್ಯ ಕಚೇರಿಗೆ ಅಲೆಯುವಂತಾಗಿದೆ. ಈ ಕೂಡಲೇ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರವೇ ನಾರಾಯಣ ಗೌಡ ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಪದಾಧಿಕಾರಿಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ತಾಲೂಕು ಕಚೇರಿಯಲ್ಲಿ ಬಗರ್‌ಹುಕುಂ ಜಮೀನು ಮಂಜೂರಾತಿ ಸಂಬಂಧಿತ ಕಾರ್ಯಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರ್‌ಐ, ಗ್ರಾಮ ಆಡಳಿತ ಅಧಿಕಾರಿಗಳು ಸೇರಿದಂತೆ ಕೆಲ ಸಿಬ್ಬಂದಿ ರಜೆಯಲ್ಲಿರುವುದರಿಂದ ಕಚೇರಿ ಕೆಲಸಗಳ ಮೇಲೆ ಪರಿಣಾಮ ಬೀರಿದೆ. ಇದರಿಂದ ಸಾರ್ವಜನಿಕ ಸೇವೆಗಳಲ್ಲಿ ವಿಳಂಬ ಉಂಟಾಗಿದ್ದು, ವಿದ್ಯಾರ್ಥಿಗಳು, ರೈತರು ಹಾಗೂ ಬಡವರು ಸಮಸ್ಯೆ ಎದುರಿಸುವಂತಾಗಿದೆ ಎಂದು ಕರವೇ ಪದಾಧಿಕಾರಿಗಳು ತಹಸೀಲ್ದಾರ್ ಅವರ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಕರವೇ ಚಂದ್ರಶೇಖರ್‌ ಮಾತನಾಡಿ, ಶಾಲಾ-ಕಾಲೇಜುಗಳು ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಆದಾಯ ದೃಢೀಕರಣ ಪತ್ರದ ಅವಶ್ಯಕತೆ ಇದೆ. ಯಾವುದೇ ಕಾರಣಕ್ಕೂ ಪ್ರಮಾಣಪತ್ರಗಳ ವಿತರಣೆಯಲ್ಲಿ ವಿಳಂಬವಾಗದಂತೆ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಸದಸ್ಯರು ಒತ್ತಾಯಿಸಿದರು.ಈ ವೇಳೆ ಪ್ರತಿಕ್ರಿಯಿಸಿದ ತಹಸೀಲ್ದಾರ್‌ ಶ್ರೀಧರ್‌ ಕಂಕಣವಾಡಿ, ಸಿಬ್ಬಂದಿ ಕೊರತೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಪರಿಹರಿಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಶಿರಸ್ತೇದಾರ್‌ ನೇತೃತ್ವದಲ್ಲಿ ಮೂವರು ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕಾರ್ಯನಿರ್ವಹಿಸಿ ಜಾತಿ, ಆದಾಯ ಪ್ರಮಾಣಪತ್ರ ಸೇರಿದಂತೆ ಸಾರ್ವಜನಿಕರ ಅಗತ್ಯ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದರು.ಭೂ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯದಿಂದ ಸುಮಾರು 35 ಜನರಿಗೆ ವಾರೆಂಟ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಕೆಲವು ಅಧಿಕಾರಿಗಳು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ರಜೆಯಲ್ಲಿ ತೆರಳಿದ್ದಾರೆ. ಈ ವಿಚಾರವನ್ನು ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೇ 25ರೊಳಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದ್ದು, ಸಾಧ್ಯವಾಗದಿದ್ದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಪರ್ಯಾಯ ಸಿಬ್ಬಂದಿ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್‌ ತಿಳಿಸಿದರು.ಕರವೇ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್‌ ಮಾತನಾಡಿ, ತಹಸೀಲ್ದಾರ್ ನೀಡಿರುವ ಭರವಸೆಯನ್ನು ಸ್ವಾಗತಿಸುತ್ತೇವೆ. ಆದರೆ ನಿಗದಿತ ಅವಧಿಯೊಳಗೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯದಿದ್ದರೆ ಅಥವಾ ಕಾಯಂ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕರವೇ ಕಸಬಾ ಹೋಬಳಿ ಅಧ್ಯಕ್ಷ ಪ್ರಸನ್ನ, ನಗರ ಘಟಕದ ಅಧ್ಯಕ್ಷ ಮುನವರ್ ಪಾಷಾ, ಹೋಬಳಿ ಘಟಕದ ಅಧ್ಯಕ್ಷ ಚಿಂತನ್ ಗೌಡ, ಈಶ್ವರ್‌, ಬೇಲೂರು ಉಪಾಧ್ಯಕ್ಷರಾದ ಹನೀಫ್, ಗಂಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪಾರದರ್ಶಕವಾಗಿರಲಿ
ಮೌಲ್ಯಾಧಾರಿತ ಶಿಕ್ಷಣ ಶಾಲಾ ಕಾಲೇಜುಗಳ ಧ್ಯೇಯವಾಗಬೇಕು