ಶರಣು ಸೊಲಗಿ ಮುಂಡರಗಿ
ಅತಿಯಾದ ಚಳಿಯಿಂದ ಬೆಳಗಿನ ಸಮಯದಲ್ಲಿ ಸಾರ್ವಜನಿಕರು ರಸ್ತೆ ಅಕ್ಕಪಕ್ಕ, ಬಜಾರ, ಬಸ್ ನಿಲ್ದಾಣದ ಹತ್ತಿರ ಬೆಂಕಿ ಹಾಕಿಕೊಂಡು ಗುಂಪುಗುಂಪಾಗಿ ಬಿಸಿ ಕಾಯಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಎಷ್ಟೇ ಚಳಿ, ಗಾಳಿ ಇದ್ದರೂ ಸಹ ದಿನಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರು, ಹಾಲು ಸರಬರಾಜು ಮಾಡುವವರು, ತರಕಾರಿ ಮಾರಾಟಗಾರರು ಹಾಗೂ ರೈತರು ಚಳಿ ಲೆಕ್ಕಿಸದೇ ಸ್ವೇಟರ್ ಧರಿಸಿ ಬರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಪ್ರದೇಶದಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳೂ ಸಹ ಬೆಳಗಿನ ಚಳಿಯಲ್ಲಿ ಮುದುಡಿಕೊಂಡೇ ಬರುತ್ತಾರೆ.ಪ್ರತಿದಿನ ಬೆಳಗ್ಗೆ ವಾಯುವಿಹಾರಕ್ಕೆಂದು ಹೋಗುವವರಿಂದ ತುಂಬಿ ತುಳುಕುತ್ತಿದ್ದ ಹೆಸರೂರ, ರಾಮೇನಹಳ್ಳಿ, ಮುಂಡರಗಿ-ಶಿರಹಟ್ಟಿ, ಕೊಪ್ಪಳ, ಘಟ್ಟಿರಡ್ಡಿಹಾಳ, ಗದಗ ಮುಂಡರಗಿ, ಕನಕರಾಯಣ ಗುಡ್ಡದ ರಸ್ತೆ ಸೇರಿದಂತೆ ಎಲ್ಲ ರಸ್ತೆಗಳು ಬಿಕೋ ಎನ್ನುತ್ತಿವೆ. ಅಧಿಕವಾಗಿ ಚಳಿ ಇರುವುದರಿಂದ ಬಿಸಿಲು ಬಂದ ನಂತರ ವಾಯುವಿಹಾರಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ.
ಚಳಿಯಿಂದ ಜ್ವರ, ನೆಗಡಿ, ಶೀತ, ಕೆಮ್ಮು ಹೆಚ್ಚಾಗುತ್ತದೆ. ಅಸ್ತಮಾ ಕಾಯಿಲೆ ಇರುವವರು ಅತಿಯಾದ ಚಳಿಯಿಂದ ಹೆಚ್ಚಿನ ಜಾಗೃತಿವಹಿಸುವುದು ಅವಶ್ಯ. ಈ ಸಂದರ್ಭದಲ್ಲಿ ಅಸ್ತಮಾ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಆದಷ್ಟು ಬಿಸಿ ನೀರನ್ನು ಸೇವಿಸುವುದು ಸೂಕ್ತ. ಬೆಳಗ್ಗೆ ಹಾಗೂ ಸಂಜೆ ಮನೆಯಿಂದ ಹೊರಗೆ ಹೋಗುವಾಗ ಸ್ವೇಟರ್ ಹಾಗೂ ಉಣ್ಣೆ ಟೊಪ್ಪಿಗೆ ಹಾಕಿಕೊಂಡು ದೇಹವನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಮುಂಡರಗಿ ಖ್ಯಾತ ವೈದ್ಯ ಡಾ. ವಿ.ಕೆ.ಸಂಕನಗೌಡರ ತಿಳಿಸಿದ್ದಾರೆ.