ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !

KannadaprabhaNewsNetwork |  
Published : Feb 25, 2026, 02:15 AM IST
ಬಳ್ಳಾರಿಯ ಐತಿಹಾಸಿಕ ಕೋಟೆಯ ಮೋಹಕ ನೋಟ. ಈ ಕೋಟೆಗೆ ರೋಪ್‌ವೇ ನಿರ್ಮಿಸಿದರೆ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಯಾಗಲಿದೆ.  | Kannada Prabha

ಸಾರಾಂಶ

ಶೀಘ್ರದಲ್ಲಿಯೇ ಮಂಡನೆಗೊಳ್ಳುವ ರಾಜ್ಯ ಬಜೆಟ್‌ ಮೇಲೆ ಕುತೂಹಲ ಮೂಡಿಸಿದೆ. ಈ ಬಾರಿಯಾದರೂ ಬಿಸಿಲೂರು ಬಳ್ಳಾರಿಯತ್ತ ಸಿಎಂ ಸಿದ್ಧರಾಮಯ್ಯ ದೃಷ್ಟಿ ಹರಿಸಲಿ ಎಂಬ ಆಗ್ರಹ ಕೇಳಿ ಬಂದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಪ್ರವಾಸೋದ್ಯಮ ಕೇವಲ ಮನರಂಜನೆಗೆ ಸೀಮಿತವಾದ ಕ್ರಿಯೆಯಲ್ಲ. ಅದು ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಪರಿಸರ ಸಂಬಂಧಿತ ಅನೇಕ ಆಯಾಮಗಳನ್ನು ಹೊಂದಿರುವ ಶಕ್ತಿಯುತ ಕ್ಷೇತ್ರ. ಸ್ಥಳೀಯ ಜನರ ಜೀವನಮಟ್ಟವನ್ನು ಸುಧಾರಿಸಲು ಸಹ ಹೆಚ್ಚು ಅನುಕೂಲಕರವಾದದ್ದು. ಆದರೆ, ಅಖಂಡ ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಸ್ಥಿತಿಗತಿಯನ್ನು ಅವಲೋಕಿಸಿದರೆ ಈ ವರೆಗೆ ಈ ಜಿಲ್ಲೆಯ ಜನಪ್ರತಿನಿಧಿಗಳಾದವರು ಕಾಳಜಿ ವಹಿಸಿ ಕಾರ್ಯನಿರ್ವಹಿಸಲಿಲ್ಲ ಎಂಬುದು ಸ್ಪಷ್ಟ.

ಅಖಂಡ ಬಳ್ಳಾರಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಈ ಜಿಲ್ಲೆಯ ನೈಸರ್ಗಿಕ ಪರಿಸರವು ಕೂಡ ಪ್ರವಾಸೋದ್ಯಮ ಪ್ರಗತಿಗೆ ಪೂರಕವಾಗಿದೆ. ಆದರೆ, ಸರ್ಕಾರ ಈ ದಿಸೆಯಲ್ಲಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡದೆ ಪ್ರವಾಸೋದ್ಯಮವನ್ನು ಸಂಪೂರ್ಣ ಕಡೆಗಣಿಸಿರುವುದು ಸ್ಪಷ್ಟ.

ಏನೇನು ಮಾಡಬಹುದು?

ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿರುವ ಐತಿಹಾಸಿಕ ಕೋಟೆಗೆ (ಏಕಶಿಲಾಬೆಟ್ಟ) ರೋಪ್‌ ವೇ ಮಾಡುವ ಕುರಿತಾದ ಚರ್ಚೆಗಳು ಅನೇಕ ಬಾರಿ ಮುನ್ನೆಲೆಗೆ ಬಂದರೂ ಈವರೆಗೆ ಕಾರ್ಯರೂಪ ಪಡೆದುಕೊಂಡಿಲ್ಲ. ಈ ಕುರಿತು ಸರ್ವೆ ಕಾರ್ಯ ನಡೆಯಿತಾದರೂ ಬಳಿಕದ ಪ್ರಗತಿ ಕುಂಠಿತಗೊಂಡಿತು. ನಗರದ ಮಧ್ಯಭಾಗದಲ್ಲಿರುವ ಗುಡ್ಡದಲ್ಲಿ ನಿರ್ಮಾಣಗೊಂಡಿರುವ ಕೋಟೆಗೆ ರೋಪ್‌ವೇ ನಿರ್ಮಿಸುವುದರಿಂದ ಪ್ರವಾಸಿಗರ ಸಂಖ್ಯೆ ಏರಿಕೆಯಾಗಲಿದೆ. ವೃದ್ಧರು, ಮಕ್ಕಳು ಸಹ ಕೋಟೆಗೆ ಆಗಾಗ್ಗೆ ಭೇಟಿ ನೀಡಲು ಸಹಕಾರಿಯಾಗಲಿದೆ.

ಬಳ್ಳಾರಿ ತಾಲೂಕಿನ ಮಿಂಚೇರಿಗುಡ್ಡ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ಸ್ಥಳ. ಬ್ರಿಟೀಷ್ ಕಾಲದ ಜಡ್ಜ್ ಬಂಗಲೆ ಇಲ್ಲಿನ ವಿಶೇಷ ಆಕರ್ಷಣೆ. ಆದರೆ, ಇಲ್ಲಿ ಪ್ರವಾಸಿಗರಿಗೆ ಬೇಕಾದ ಅನುಕೂಲತೆಗಳಿಲ್ಲ. ಮೂಲ ಸೌಕರ್ಯಗಳತ್ತ ಗಮನ ನೀಡಬೇಕಿದೆ.

ಬಳ್ಳಾರಿ ಹೊರ ವಲಯದ ಸಂಗನಕಲ್ಲು ಬೆಟ್ಟವು ನವಶಿಲಾಯುಗದ ನೆಲೆ. ದಕ್ಷಿಣ ಭಾರತದ ಆದಿಮ ಮಾನವ ವಸತಿಗಳಲ್ಲಿ ಒಂದಾದ, ಚಾರಿತ್ರಿಕ ಹಾಗೂ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ವಿಶ್ವ ಗಮನ ಸೆಳೆಯುವ ತಾಣವಾಗಿದ್ದು, ಅಭಿವೃದ್ಧಿ ಕೆಲಸಗಳಾಗಬೇಕಿದೆ.

ಸಂಡೂರು ಪ್ರಾಕೃತಿಕ ಸೌಂದರ್ಯಕ್ಕೆ ಮನಸೋಲದವರಿಲ್ಲ. ಜನಾಕಾರ್ಷಣೆಗೆ ಸಾಕಷ್ಟು ಅವಕಾಶಗಳಿದ್ದರೂ ಸರ್ಕಾರ ಈ ಬಗ್ಗೆ ಗಮನ ನೀಡಿಲ್ಲ. ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಪ್ರದೇಶ ನೈಸರ್ಗಿಕ ಮೋಹಕ ತಾಣ. ವಿಜಯನಗರ ಕಾಲದ ಆಳ್ವಿಕೆಯ ಕುರುಹುಗಳಿವೆ. ಈ ಜಾಗವನ್ನು ಪ್ರವಾಸಿ ಕೇಂದ್ರವನ್ನಾಗಿಸಲು ಈ ಹಿಂದೆ ಪ್ರಯತ್ನ ನಡೆಯಿತು. ಜಿಂಕೆ ವನ ನಿರ್ಮಾಣ ಕಾರ್ಯವೂ ಸ್ಥಗಿತವಾಗಿದೆ. ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಏಳುಸುತ್ತಿನ ಕೋಟೆ, ಕೊಟ್ಟೂರು ತಾಲೂಕಿನ ಅತ್ಯಂತ ಪುರಾತನ ಅಂಬಳಿ ಕಲ್ಲೇಶ್ವರಸ್ವಾಮಿ ದೇವಾಲಯ, ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಆದಿಮಾನವ ಕಾಲದ ಗುಹೆಗಳು, ಏಷ್ಯಾದಲ್ಲಿಯೇ ಅತಿ ದೊಡ್ಡ ಕರಡಿಧಾಮ. ಹಡಗಲಿ ತಾಲೂಕಿನ ಮದಲಗಟ್ಟೆ, ಕುರುವತ್ತಿ, ಮೈಲಾರ ಪ್ರದೇಶಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಬದಲಾಗಿಲ್ಲ. ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಪ್ರತಿವರ್ಷವೂ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿಗಳು ಹೋಗುತ್ತವೆ. ಆದರೆ, ಅಲ್ಲಿಂದ ಬಿಡುಗಾಸು ನೀಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯ ಪ್ರವಾಸಿತಾಣಗಳು ಬಣಗುಟ್ಟುವಂತಾಗಿದೆ. ಈ ಬಾರಿಯ ಬಜೆಟ್‌ನಲ್ಲಾದರೂ ಅನುದಾನ ಸಿಗಬಹುದೇ ಎಂಬ ಪ್ರಶ್ನೆಗಳು ಮೂಡಿವೆ.

ಅಖಂಡ ಬಳ್ಳಾರಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡುವಂತಾಗಬೇಕು. ಈ ಭಾಗದ ಜನಪ್ರತಿನಿಧಿಗಳು ಅನುದಾನ ತರುವ ಕಾಳಜಿ ತೋರಿಸಬೇಕು ಎಂದು ಬಳ್ಳಾರಿಯ ಮಹೇಶ್ ಜಿ.ವಿ. ಹೇಳುತ್ತಾರೆ.ಪ್ರತಿ ಬಾರಿ ಬಜೆಟ್‌ನಲ್ಲೂ ಪ್ರವಾಸೋದ್ಯಮಕ್ಕೆ ಬಿಡುಗಾಸು ನೀಡುವುದಿಲ್ಲ. ಇದು ಪ್ರವಾಸೋದ್ಯಮ ಹಿನ್ನಡೆಗೆ ಕಾರಣವಾಗಿದೆ. ಸರ್ಕಾರ ಪ್ರವಾಸೋದ್ಯಮ ವಲಯವನ್ನು ಸಹ ಅಭಿವೃದ್ಧಿಗೆ ಪರಿಗಣಿಸಬೇಕು ಎಂದು ಸಿರುಗುಪ್ಪ ನಿವೃತ್ತ ಉಪನ್ಯಾಸಕ ಮಹ್ಮದ್ ಗೌಸ್ ಆಗ್ರಹಿಸಿದ್ದಾರೆ.

ನೆರೆಯ ಜಿಲ್ಲೆಗಳ ಹೋಲಿಸಿದರೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಪ್ರಗತಿ ಶೂನ್ಯ ಎನ್ನಬಹುದು. ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವೇ ಹೊರತು, ಮತ್ತೇನೂ ಅಲ್ಲ ಎನ್ನುತ್ತಾರೆ ಕೊಟ್ಟೂರಿನ ಗೃಹಿಣಿ ರತ್ನಮಾಲಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ
ಧಾರ್ಮಿಕ ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ