ಕಾಳುಮೆಣಸು ಅಡಕೆ ಬೆಳೆಗಾರರಿಗೆ ಪರ್ಯಾಯ ಬೆಳೆ

KannadaprabhaNewsNetwork |  
Published : Sep 25, 2024, 12:47 AM IST
ಚಿತ್ರ – 24 ಟಿಜಿಪಿ 1 ಕಿಬ್ಬಚ್ಚಲಿನಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ರೈತಕೂಟದ ಆಶ್ರಯದಲ್ಲಿ ಕಾಳುಮೆಣಸು ಬೇಸಾಯ ಪ್ರಾತ್ಯಕ್ಷತೆ ಮತ್ತು ಮಾಹಿತಿ ಕಾರ್ಯಗಾರ ನಡೆಯಿತು. | Kannada Prabha

ಸಾರಾಂಶ

ಕಿಬ್ಬಚ್ಚಲಿನಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ರೈತಕೂಟದ ಆಶ್ರಯದಲ್ಲಿ ಕಾಳುಮೆಣಸು ಬೇಸಾಯ ಪ್ರಾತ್ಯಕ್ಷತೆ ಮತ್ತು ಮಾಹಿತಿ ಕಾರ್ಯಗಾರ ನಡೆಯಿತು.

ಕನ್ನಡ ಪ್ರಭ ವಾರ್ತೆ ತಾಳಗುಪ್ಪ

ವಿಶಿಷ್ಟ ಸಾಂಬಾರ ಪದಾರ್ಥವಾದ ಕಾಳುಮೆಣಸು ಮಲೆನಾಡ ಅಡಕೆ ಬೆಳೆಗಾರರಿಗೆ ಪ್ರಮುಖ ಪರ್ಯಾಯ ಬೆಳೆ ಆಗಬಹುದು ಎಂದು ಐಐಎಸ್‍ಆರ್‌ನ ನಿವೃತ್ತ ವಿಜ್ಞಾನಿ ಡಾ.ಎಂಎನ್.ವೇಣುಗೋಪಾಲ್ ಹೇಳಿದರು.

ಸಮೀಪದ ಕಿಬ್ಬಚ್ಚಲಿನಲ್ಲಿ ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಹಾಗೂ ರೈತಕೂಟ ಸಸರವಳ್ಳಿಯವರು ಏರ್ಪಡಿಸಿದ್ದ ಕಾಳುಮೆಣಸು ಬೇಸಾಯ ಪ್ರಾತ್ಯಕ್ಷತೆ ಮತ್ತು ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕರಿಮೆಣಸು ಸಾಂಬಾರ ಪದಾರ್ಥವಾಗಿ ಪುರಾತನ ಕಾಲದಿಂದಲೂ ಬೆಳೆಯಲಾಗುತ್ತಿದೆ ಎಂದರು.

‘ಕಪ್ಪು ಚಿನ್ನ’ ಎಂದೇ ಹೆಸರಾಗಿದ್ದ ಮೆಣಸಿನಕಾಳು ಪ್ರಾಚೀನ ರೋಮನ್ನರಿಗೆ, ಗ್ರೀಕರಿಗೆ ಬಳಕೆ ತಿಳಿದಿತ್ತು.

ಭಾರತದಲ್ಲಿ ಬೆಳೆದ ಕಾಳುಮೆಣಸು ಪಶ್ಚಿಮ ಕರಾವಳಿಯ ಹಳೆಯ ರೇವುಪಟ್ಟಣಗಳಿಂದ ಜಗತ್ತಿನ ಮೂಲೆಮೂಲೆಗಳಿಗೆ ರಫ್ತಾಗುತ್ತಿತ್ತು. ಆದರೆ ಒಂದು ಕಾಲದಲ್ಲಿ ದೇಶದ ಪ್ರಮುಖ ಬೆಳೆಯಾಗಿದ್ದ ಈ ಬೆಳೆ ಸ್ವಾತಂತ್ರಾನಂತರ ದಿನಗಳಲ್ಲಿ ತನ್ನ ಅಗ್ರ ಸ್ಥಾನವನ್ನು ಕಳೆದುಕೊಂಡಿದೆ.

ಇತ್ತೀಚಿಗೆ ವಿಯೆಟ್ನಾಂ ದೇಶವು ಅತಿ ಹೆಚ್ಚು ಕರಿಮೆಣಸು ಉತ್ಪಾದಕ ಹಾಗೂ ನಿರ್ಯಾತ ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿದ್ದು, ಭಾರತವು ಮೂರನೇ ಉತ್ಪಾದಕ ರಾಷ್ಟ್ರವಾಗಿದೆ ಎಂದು ತಿಳಿಸಿದರು.

ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಮಲೆನಾಡು ಕಾಳುಮೆಣಸಿನ ಬೆಳೆಗೆ ಸೂಕ್ತ ಪ್ರದೇಶವಾಗಿದ್ದು, ಅಡಿಕೆ ಬೆಳೆಗಾರರು ಹಿಂದೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದರು. ಬದಲಾದ ಕಾಲ ಘಟ್ಟದಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ ಹಲವು ರೋಗ ರುಜಿನ, ದರ ಏರಿಳಿತದ ಸುಳಿಯಲ್ಲಿ ಸಿಲುಕಿದೆ. ಈ ಸಂಕಷ್ಟದಿಂದ ಪಾರಾಗಲು ಬೆಳೆಗಾರರು ಕಾಳು ಮೆಣಸನ್ನು ಪರ್ಯಾಯ ಬೆಳೆಯನ್ನಾಗಿ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ಬಹು ವಾರ್ಷಿಕ ಬೆಳೆಯಾದ ಕಾಳು ಮೆಣಸಿನಲ್ಲಿ ಕರಿಮಂಡ, ಕರಿಮೊರಾಟ, ಅರಿಸಿನ ಮೊರಾಟ, ದೊಡ್ಡಗ, ಬಾಲಂಕೊಟ್ಟ, ಮಲ್ಲಿಗೆ ಸರ, ತಟ್ಟಿಸರ ಮುಂತಾದ ಹಲವಾರು ತಳಿಗಳಿವೆ. ಇತ್ತೀಚೆಗೆ ಹಲವಾರು ಮಿಶ್ರತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಇವುಗಳ ಪೈಕಿ ಪೆನಿಯೂರ್ -1 ಹೆಚ್ಚು ಜನಪ್ರಿಯವಾಗಿದೆ.

ಸಾಂಬಾರ ಮಂಡಳಿಯಿಂದ ಕಾಳು ಮೆಣಸನ್ನು ಬೆಳೆಯಲು ವಿವಿಧ ರೀತಿಯ ಯೋಜನೆಗಳಿದ್ದು ಆಸಕ್ತ ರೈತರಿಗೆ ಇಲಾಖೆ ಮಾರ್ಗದರ್ಶನ ಮಾಡುತ್ತದೆ ಎಂದರು.

ತೋಟಗಾರಿಕಾ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕ ವಿನಾಯಕ ರಾವ್ ಬೇಳೂರು. ಕಾಳು ಮೆಣಸಿನ ತಳಿ ಸಂರಕ್ಷಕ ರಮಾನಂದ ಹೆಗಡೆ ಕಾನ್ಸೂರ, ಉಪಯುಕ್ತ ಮಾಹಿತಿ ನೀಡಿದರು.

ಮರತ್ತೂರು ಗ್ರಾಪಂ ಅಧ್ಯಕ್ಷ ಶಾಂತಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ರೈತ ಕೂಟದ ಅಧ್ಯಕ್ಷ ವಾಸುದೇವ ಗೋರೇಗದ್ದೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ವೀರಭದ್ರ ಹುಣಸೂರು, ವಿನಾಯಕ ಕಿಬ್ಬಚ್ಚಲು, ನರೇಂದ್ರ, ರಾಜೇಂದ್ರ ಮತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತರ್ಜಾತಿ ವಿವಾಹಿತರಿಗೆ ಪೊಲೀಸರ ರಕ್ಷಣೆ : ಗೃಹ ಮಂತ್ರಿ
ಮುಂಬೈ ಮೇಯರ್‌ ಹುದ್ದೆಗೆ ಶಿಂಧೆ ಲಡಾಯಿ?