ಪೆಪ್ಪರ್‌, ಲೈಮ್ ನೈಸರ್ಗಿಕ ಪಾನೀಯ ತಯಾರಿ

KannadaprabhaNewsNetwork |  
Published : Mar 30, 2026, 02:15 AM IST
ಫೋಟೋ: ೨೯ಪಿಟಿಆರ್-ಪಾನೀಯ ೧,ಫೋಟೋ: ೨೯ಪಿಟಿಆರ್-ಪಾನೀಯ ೨,ಫೋಟೋ: ೨೯ಪಿಟಿಆರ್-ಪಾನೀಯ ೩,ಫೋಟೋ: ೨೯ಪಿಟಿಆರ್-ಪಾನೀಯ ೪, | Kannada Prabha

ಸಾರಾಂಶ

ಉನ್ನತ ಶಿಕ್ಷಣ ಪಡೆದವರು ಹಳ್ಳಿ ಬದುಕಿಗೆ ಒಗ್ಗಿಕೊಳ್ಳುವುದಿಲ್ಲ. ಏನಿದ್ದರೂ ಅವರದ್ದು ನಗರದ ಐಷಾರಾಮಿ ಜೀವನ ಎಂದು ಹೇಳುವವರು ಹಲವು ಮಂದಿ. ಆದರೆ ಇಲ್ಲೊಬ್ಬರು ಇಂಜಿನಿಯರಿಂಗ್ ಪದವೀಧರ ಮಹಿಳೆಯು ತನ್ನ ವೃತ್ತಿ ಬದುಕಿಗಿಂತ ಭಿನ್ನವಾದ, ಕೃಷಿ ಬದುಕಿಗೆ ಪೂರಕವಾದ ಕಾಳುಮೆಣಸು ಬಳಸಿ ನೈಸರ್ಗಿಕ ಪಾನೀಯ ತಯಾರಿಸುವ ಹೊಸ ಪ್ರಯೋಗ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಪುತ್ತೂರು: ಉನ್ನತ ಶಿಕ್ಷಣ ಪಡೆದವರು ಹಳ್ಳಿ ಬದುಕಿಗೆ ಒಗ್ಗಿಕೊಳ್ಳುವುದಿಲ್ಲ. ಏನಿದ್ದರೂ ಅವರದ್ದು ನಗರದ ಐಷಾರಾಮಿ ಜೀವನ ಎಂದು ಹೇಳುವವರು ಹಲವು ಮಂದಿ. ಆದರೆ ಇಲ್ಲೊಬ್ಬರು ಇಂಜಿನಿಯರಿಂಗ್ ಪದವೀಧರ ಮಹಿಳೆಯು ತನ್ನ ವೃತ್ತಿ ಬದುಕಿಗಿಂತ ಭಿನ್ನವಾದ, ಕೃಷಿ ಬದುಕಿಗೆ ಪೂರಕವಾದ ಕಾಳುಮೆಣಸು ಬಳಸಿ ನೈಸರ್ಗಿಕ ಪಾನೀಯ ತಯಾರಿಸುವ ಹೊಸ ಪ್ರಯೋಗ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಸುಳ್ಯ ತಾಲೂಕಿನ ಪೆರುವಾಜೆ ಗ್ರಾದ ಇಂಜಿನಿಯರ್ ನರಸಿಂಹ ತೇಜಸ್ವಿ ಅವರ ಪತ್ನಿ ಶ್ವೇತಾ ಅವರು

ತಮ್ಮ ಹುಟ್ಟೂರಿನಲ್ಲಿ ಕಾಳುಮೆಣಸು ಲೈಮ್ ಎಸೆನ್ಸ್‌ ಬಳಸಿ ಹೊಸಬಗೆಯ ನೈಸರ್ಗಿಕ ಪಾನೀಯ ಆವಿಷ್ಕಾರ ಮಾಡಿದ್ದಾರೆ.

ಇಂಜಿನಿಯರಿಂಗ್ ಪದವೀಧರೆಯಾಗಿರುವ ಶ್ವೇತಾ ಅವರು ಪತಿ ನರಸಿಂಹ ತೇಜಸ್ವಿ ಅವರೊಂದಿಗೆ ವಿದೇಶದಲ್ಲಿ ಉದ್ಯೋಗದಲ್ಲಿದ್ದವರು. ಅಲ್ಲಿಂದ ಮರಳಿದ ಬಳಿಕ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಒದಗಿಸುವ ಹೊಸತನದ ಪ್ರಯೋಗಕ್ಕೆ ಮುಂದಾಗಿ ಯಶಸ್ವು ಕಾಣುತ್ತಿದ್ದಾರೆ. ಕೃಷಿಕ ಕುಟುಂಬದಿಂದ ಬಂದಿರುವ ಶ್ವೇತಾ ಅವರು ಈಗಾಗಲೇ ಕೃಷಿ ಕ್ಷೇತ್ರದಲ್ಲಿ ಹಲವು ಪ್ರಯೊಗಗಳನ್ನು ನಡೆಸಿ ಯಶಸ್ವಿ ಕಂಡಿದ್ದಾರೆ. ಅಡಿಕೆ, ಕಾಳುಮೆಣಸು ಕೃಷಿ ಹೊಂದಿರುವ ಇವರಿಗೆ ವಾರ್ಷಿಕ ೨,೦೦೦ ಕೆ.ಜಿ ಕಾಳುಮೆಣಸು ದೊರೆಯುತ್ತದೆ. ಹಿಂದೆ ಕಾಳುಮೆಣಸಿಗೆ ಉತ್ತಮ ಧಾರಣೆ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇದರಿಂದಾಗಿ ನಿರೀಕ್ಷಿತ ಆದಾಯ ದೊರೆಯುವುದು ಕಷ್ಟವಾಗುತ್ತಿದೆ. ಈ ಹಿನ್ನೆಲೆ ಕಾಳುಮೆಣಸಿಗೆ ಮೌಲ್ಯವರ್ಧನೆ ಉದ್ದೇಶದಿಂದ ಕಳೆದ ಒಂದು ವರ್ಷದ ಹಿಂದೆ ಮನೆಯಲ್ಲೇ ಕಾಳುಮೆಣಸು, ಲೈಮ್ ಎಸೆನ್ಸ್‌ ನೈಸರ್ಗಿ ಕ ಪಾನೀಯ ತಯಾರಿಸಲು ಮುಂದಾಗಿದ್ದರು. ಬಳಿಕ ಹಂತ ಹಂತವಾಗಿ ಹಲವು ಪ್ರಯೋಗಗಳನ್ನು ನಡೆಸಿ ಪಾನೀಯದ ಗುಣಮಟ್ಟ ಮತ್ತು ರುಚಿಯನ್ನು ಅಭಿವೃದ್ಧಿ ಪಡಿಸಿ ಇದೀಗ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ತಯಾರಿ ಹೇಗೆ: ಕಾಳುಮೆಣಸು, ಲೈಮ್ ಎಸೆನ್ಸ್‌ ನೈಸರ್ಗಿ ಕ ಪಾನೀಯ ತಯಾರಿಸಲು ತಾಜಾ ನಿಂಬೆ ರಸ, ಕರಿಮೆಣಸು ಸಾರ, ನೈಸರ್ಗಿಕ ಸಕ್ಕರೆ, ಶುದ್ದೀಕರಿಸಿದ ನೀರನ್ನು ಬಳಸಲಾಗುತ್ತದೆ.

ಪ್ರಯೋಗಶೀಲ ದಂಪತಿ: ಅಮೆರಿಕಾದಲ್ಲಿ ಉದ್ಯೋಗದಲ್ಲಿದ್ದ ನರಸಿಂಹ ತೇಜಸ್ವಿ ಮತ್ತು ಶ್ವೇತಾ ಕಾನಾವು ದಂಪತಿ ೨೦೧೫ರಲ್ಲಿ ಸ್ವದೇಶಕ್ಕೆ ಮರಳಿ ಬಂದಿದ್ದರು. ಬಳಿಕ ಬೆಂಗಳೂರಿನ ಕನಕಪುರ ರಸ್ತೆಯ ಎಡುಮಡು ಹಾರೋಹಳ್ಳಿ ಹತ್ತಿರ ೩ ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕಾನಾವು ಜಲಜಶ್ರೀ ಫಾರ್ಮ್ ಅಕ್ರಾಫೋನಿಕ್ಸ್ ಕೃಷಿ ಆರಂಭಿಸಿದರು. ಮೂರು ತೊಟ್ಟಿಯಲ್ಲಿ ಮೀನು ಸಾಕಣೆ ಮಾಡಿ ಅವುಗಳ ತ್ಯಾಜ್ಯ ಕೊಳವೆ ಮಾದರಿಯೊಳಗೆ ಹರಿಯುತ್ತಾ ಗಿಡಗಳಿಗೆ ಆಹಾರ ನೀಡುತ್ತದೆ. ಕೊಳವೆಯೊಳಗೆ ಗಿಡ ಬೆಳೆಯುತ್ತದೆ. ಗಿಡವೂ ಅಗತ್ಯ ಇರುವ ಆಹಾರವನ್ನು ಹೀರಿದ ಬಳಿಕ ನೀರು ಮತ್ತೆ ಮೀನಿನ ತೊಟ್ಟಿ ಸೇರುತ್ತದೆ. ಒಂದೆಡೆ ಮೀನು ಮಾರಾಟ, ಇನ್ನೊಂದೆಡೆ ಗಿಡದ ಫಸಲು ಮಾರಾಟ. ಎರಡು ಬಗೆಯ ಆದಾಯ ದೊರೆಯುತ್ತದೆ.

ಮದುವೆ ಸೇರಿದಂತೆ ವಿವಿಧ ಶುಭ ಕಾರ್ಯಕ್ರಮಗಳಲ್ಲಿ ಈ ಪಾನೀಯವನ್ನು ಪರಿಚಯಿಸಿದ್ದು ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕಳೆದ ಮೂರು ತಿಂಗಳಲ್ಲಿ ಅಂದಾಜು ೨,೦೦೦ ಲೀಟರ್ ಪಾನೀಯ ಮಾರಾಟವಾಗಿದೆ. ಸುಮಾರು ೭೦೦ ಎಂಎಲ್‌ನ ಬಾಟಲ್ ರೂಪದಲ್ಲಿ ಪಾನೀಯ ಲಭ್ಯವಿದ್ದು, ಒಂದು ಬಾಟಲ್ ತಯಾರಿಸಲು ಸರಾಸರಿ ೩೦ ಗ್ರಾಂ ಕರಿಮೆಣಸು ಬಳಸಲಾಗುತ್ತದೆ. ಕೃಷಿಕರು ಕೇವಲ ಬೆಳೆ ಕೊಯ್ದು ಮಾರಾಟ ಮಾಡುವುದಕ್ಕಿಂತ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಪ್ರಯೋಗಗಳನ್ನು ಮಾಡುವ ಉದ್ದೇಶವಿದೆ. ಆರಂಭದಲ್ಲಿ ಮನೆಯಲ್ಲಿ ನಾವೇ ಮೌಲ್ಯವರ್ಧನೆಯ ಪ್ರಯೋಗ ಮಾಡಿದೆವು. ಆ ಮೇಲೆ ಈ ಎಸೆನ್ಸ್ ಅನ್ನು ವಿಜ್ಞಾನಿಗಳಿಗೆ ತೋರಿಸಿ ಲ್ಯಾಬ್ ಪರೀಕ್ಷೆಗೆ ಒಡ್ಡಲಾಯಿತು. ಅಲ್ಲಿ ಉತ್ತಮ ಫಲಿತಾಂಶ ಸಿಕ್ಕಿತ್ತು. ಸಕ್ಕರೆ ಪ್ರಮಾಣ ಮೊದಲಾದವುಗಳ ಬಗ್ಗೆ ನಾವು ವಿಜ್ಞಾನಿಗಳ ಜತೆ ಚರ್ಚೆ ನಡೆಸಿದೆವು. ಉಳಿದ ತಾಂತ್ರಿಕ ಸಂಗತಿಗಳನ್ನು ನಾವೇ ಮಾಡಿದೆವು.- ಶ್ವೇತಾ ಕಾನಾವು

ಶುಭಸಮಾರಂಭಗಳಲ್ಲಿ ಬೇಡಿಕೆ : ಶ್ವೇತಾ ಕಾನಾವು ಅವರು ಮೊದಲಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ ಪೆಪ್ಪರ್‌ ಲೈಮ್‌ ಎಸೆನ್ಸ್‌ ಪಾನೀಯವನ್ನು ಮಾರಾಟಮಾಡುತ್ತಿದ್ದರು. ಪ್ರಸ್ತುತ ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಪೇಯವನ್ನು ಪೂರೈಸುವತ್ತ ಗಮನಹರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶನಿವಾರಸಂತೆ ಶ್ರದ್ಧಾಭಕ್ತಿಯ ಶ್ರೀರಾಮನವಮಿ
ಕುಂಜಿಬೆಟ್ಟು ರುಕ್ಮಿಣಿ ಸತ್ಯಭಾಮಾ ಗೋಪಾಲಕೃಷ್ಣ ದೇವಸ್ಥಾನಕ್ಕೆ ಶಿಲಾನ್ಯಾಸ