ಕೊಪ್ಪಳ: ಭಾರತ ಜನಗಣತಿ 2027 ಕಾರ್ಯಕ್ಕೆ ನೇಮಿಸಲ್ಪಡುವ ಅಧಿಕಾರಿಗಳು ಮತ್ತು ಸಹಾಯಕ ಅಧಿಕಾರಿಗಳು ಜನಗಣತಿ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಜಿಲ್ಲೆಯಲ್ಲಿ ಜನಗಣತಿ-2027 ಪ್ರಕ್ರಿಯೆಯ ಪೂರ್ವ ಸಿದ್ಧತೆಗಳು ಆರಂಭಗೊಳ್ಳುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಜನಗಣತಿ ಪ್ರಕ್ರಿಯೆಗೆ ಅವಶ್ಯವಿರುವ ಅಗತ್ಯ ನಕ್ಷೆಗಳು, ನಮೂನೆಗಳನ್ನು ತಯಾರು ಮಾಡುವುದು ಸೇರಿದಂತೆ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಜನಗಣತಿ ಕರ್ತವ್ಯ ನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ಹಿರಿಯ ಅಧಿಕಾರಿಗಳ ಜತೆ ಸಮನ್ವಯ ಸಾಧಿಸಿಕೊಂಡು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಸೂಚನೆ ನೀಡಿದರು.
2011ರಲ್ಲಿ ಜನಗಣತಿಯು ಹಳೆಯ ಮ್ಯಾನುವೆಲ್ ಪದ್ಧತಿಯಲ್ಲಿ ನಡೆದಿತ್ತು. ಆದರೆ, ಈ ಬಾರಿ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಮೋಡ್‌ನಲ್ಲಿ ನಡೆಯಲಿದೆ. ಡಿಜಿಟಲ್ ಮೋಡ್‌ನಲ್ಲಿ ನಡೆಯುವ ಜನಗಣತಿಯು ನಿಖರತೆ ಹಾಗೂ ಪಾರದರ್ಶಕತೆಯಿಂದ ಕೂಡಿರಲಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸಲು ಸಾಧ್ಯವಾಗಲಿದೆ ಎಂದರು.2027ರ ಜನಗಣತಿ ಎರಡು ಹಂತಗಳಲ್ಲಿ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಮೊದಲ ಹಂತದಲ್ಲಿ ಕರ್ನಾಟಕದಲ್ಲಿ ಮನೆಪಟ್ಟಿ ಕಾರ್ಯಾಚರಣೆ 2026ರ ಏ. 16ರಿಂದ ಮೇ 15ರ ವರೆಗೆ ಒಂದು ತಿಂಗಳ ಕಾಲ ನಡೆಯಲಿದೆ. ಈ ಮೂವತ್ತು ದಿನಗಳ ಮನೆಪಟ್ಟಿ ಕಾರ್ಯ ಪ್ರಾರಂಭವಾಗುವ ಹದಿನೈದು ದಿನಗಳ ಮೊದಲು ಸ್ವಯಂ ಗಣತಿಯ ಆಯ್ಕೆ ಲಭ್ಯವಿರುತ್ತದೆ. ಎರಡನೇ ಹಂತದ ಜನಗಣತಿ 2027ರ ಫೆಬ್ರುವರಿಯಿಂದ ಆರಂಭವಾಗಲಿದೆ. ಈ ಬಾರಿಯ ಜನಗಣತಿಯಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ, ಜನಗಣತಿಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ತರುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಿ. ಮಂಜುನಾಥ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಉಪಸ್ಥಿತರಿದ್ದರು.