ಜನರ ದೂರು ಬಾರದಂತೆ ಕರ್ತವ್ಯ ನಿರ್ವಹಿಸಿ: ಶಾಸಕ ಮಾನೆ

KannadaprabhaNewsNetwork | Published : May 13, 2025 1:20 AM
Follow Us

ಸಾರಾಂಶ

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಾರ್ವಜನಿಕರಿಂದ ದೂರು ಬರದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ನೌಕರರು ಕೆಲಸ ನಿರ್ವಹಿಸಬೇಕು. ಸರ್ಕಾರದ ಅನುದಾನದ ಕಾಮಗಾರಿಗಳು ವಿಳಂಬವಿಲ್ಲದೆ ನಡೆಯಬೇಕು ಎಂದರು.

ಹಾನಗಲ್ಲ: ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಿಬ್ಬಂದಿಯಿಂದಲೇ ತೊಂದರೆಯಾದರೂ ಗೊತ್ತಿಲ್ಲ ಎಂದ ವೈದ್ಯಾಧಿಕಾರಿ, ತಾಲೂಕಿನಾದ್ಯಂತ ರಸ್ತೆಗಳಲ್ಲಿ ಅಪಘಾತ ವಲಯ ಎಂಬ ಫಲಕ ಹಾಕದ ಲೋಕೋಪಯೋಗಿ ಇಲಾಖೆ, ಕೃಷಿ ಪರಿಕರ ಮಾರಾಟಗಾರರು ದರಪಟ್ಟಿ ಹಾಕಿರದಿದ್ದರೂ ಗಮನಿಸದ ಕೃ಼ಷಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ಶಾಸಕ ಶ್ರೀನಿವಾಸ ಮಾನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸದಸ್ಯರು ಗಂಭೀರವಾಗಿ ಚರ್ಚಿಸಿದರು.ಸೋಮವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಡಾ. ಲಿಂಗರಾಜ ಅವರಿಗೆ ಶಾಸಕ ಶ್ರೀನಿವಾಸ ಮಾನೆ ಅವರೇ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಇಲಾಖೆಯ ಸಿಬ್ಬಂದಿಯೇ ತಳ್ಳಿದ್ದರಿಂದ ಸಾರ್ವಜನಿಕರು ಗಲಾಟೆ ಮಾಡಿದ್ದಾರೆ. ಈ ಬಗ್ಗೆ ಏನು ಕ್ರಮ ಜರುಗಿಸಿದ್ದೀರಿ ಎಂದು ಕೇಳಿದರೆ, ಅದು ನನಗೆ ಗೊತ್ತಿಲ್ಲ ಎಂದ ಸುಮ್ಮನಾದರು. ಸರ್ಕಾರಿ ಆಸ್ಪತ್ರೆಯಲ್ಲಿ ಬಂದ ರೋಗಿಗಳಿಗೆ ಸರದಿ ವ್ಯವಸ್ಥೆ ಇಲ್ಲದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ. ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆ ಎಂಬುದು ವೈದ್ಯಾಧಿಕಾರಿಗಳಿಗೇ ಗೊತ್ತಿಲ್ಲದಿದ್ದರೆ ಆಸ್ಪತ್ತೆಗಳ ಗತಿ ಏನು ಎಂದು ತರಾಟೆಗೆ ತೆಗೆದುಕೊಂಡರು.ತಾಲೂಕಿನ ರಸ್ತೆಗಳಲ್ಲಿ ಹಲವು ಕಡೆ ರಸ್ತೆ ಅಪಘಾತಗಳಾಗುತ್ತಿವೆ. ಇದಕ್ಕೆ ಕಾರಣ ಅಪಘಾತ ಸಂಭವಿಸಬಹುದಾದ ರಸ್ತೆಯ ಕೆಲವು ಸ್ಥಳಗಳಲ್ಲಿ ಅಪಘಾತ ವಲಯ ಎಂದು ಫಲಕ ಹಾಕಬೇಕು. ಆದರೆ ಲೋಕೋಪಯೋಗಿ ಇಲಾಖೆ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ಅಪಘಾಗಳಿಗೆ ಇಲಾಖೆಯೇ ಹೊಣೆಗಾರರಾಗಬೇಕಾಗುತ್ತದೆ ಎಂದು ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ ಎಚ್ಚರಿಸಿದರು.ಕೃಷಿ ಇಲಾಖೆ ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಲ್ಲಿ ವಸ್ತುಗಳ ದರಪಟ್ಟಿ ಹಾಕಿರುವುದಿಲ್ಲ. ಫಲಕದಲ್ಲಿ ಸ್ಟಾಕ್ ಕೂಡ ಬರೆದಿರುವುದಿಲ್ಲ. ಇದು ಅನಗತ್ಯವಾಗಿ ರಾಸಾಯನಿಕ ಗೊಬ್ಬರಗಳ ಕೊರತೆ ಸೃಷ್ಟಿಸಿ ಆತಂಕ ಮೂಡಿಸಲು ಕಾರಣವಾಗುತ್ತಿದೆ. ಅಲ್ಲದೆ ಕೊರತೆ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶವೂ ಇದರಲ್ಲಿದೆ ಎಂದು ಕೆಡಿಪಿ ಸದಸ್ಯ ರಾಜಕುಮಾರ ಜೋಗಪ್ಪನವರ ಹಾಗೂ ರಾಜೇಶ ಚವ್ಹಾಣ ಅಧಿಕಾರಿಗಳ ಗಮನ ಸೆಳೆದು, ಇದರಿಂದಾಗುವ ತೊಂದರೆಗೆ ನೀವೇ ಹೊಣೆಗಾರರಾಗುತ್ತೀರಿ ಎಂದು ಕೃಷಿ ಅಧಿಕಾರಿಗಳನ್ನು ಎಚ್ಚರಿಸಿದರು.ಮಹಾತ್ಮರ ಜಯಂತಿ ಆಚರಣೆ ಪೂರ್ವಭಾವಿ ಸಭೆಗೆ ಜಾತಿಗಳ ಹೆಸರಿನಲ್ಲಿ ಸಾರ್ವಜನಿಕರನ್ನು ಕರೆಯವುದಲ್ಲ. ಎಲ್ಲ ಸಮುದಾಯದ ಹಿರಿಯರನ್ನು ಆಹ್ವಾನಿಸಬೇಕು. ಮಹಾತ್ಮರನ್ನು ಒಂದೊಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಅನಿತಾ ಡಿಸೋಜಾ ಎಚ್ಚರಿಸಿ, ತಾಲೂಕು ಮಟ್ಟದ ಅಧಿಕಾರಿ, ನೌಕರರೇ ಪಾಲ್ಗೊಳ್ಳುತ್ತಿಲ್ಲ ಎಂದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಸಾರ್ವಜನಿಕರಿಂದ ದೂರು ಬರದಂತೆ ಎಲ್ಲ ಇಲಾಖೆಯ ಅಧಿಕಾರಿಗಳು, ನೌಕರರು ಕೆಲಸ ನಿರ್ವಹಿಸಬೇಕು. ಸರ್ಕಾರದ ಅನುದಾನದ ಕಾಮಗಾರಿಗಳು ವಿಳಂಬವಿಲ್ಲದೆ ನಡೆಯಬೇಕು. ಸಾರ್ವಜನಿರಿಂದ ಬರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಎಸ್. ರೇಣುಕಾ, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಡಿಪಿ ಸದಸ್ಯರಾದ ಅನಿತಾ ಡಿಸೋಜಾ, ರಾಜಕುಮಾರ ಜೋಗಪ್ಪನವರ, ರಾಜೇಶ ಚವ್ಹಾಣ, ಮೆಹಬೂಬಸಾಬ ಬಂಕಾಪೂರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಇದ್ದರು.

ಸ್ಥಳಾಂತರ ಮಾಡಿ

ತಾಲೂಕು ಬಿಟ್ಟು ಹೊರಗೆ ಮನೆ ಮಾಡಿಕೊಂಡಿರುವ ಲೈನ್‌ಮನ್‌ಗಳಿಗೆ ನೋಟಿಸ್‌ ನೀಡಿ, ಕೂಡಲೇ ತಾಲೂಕಿನಲ್ಲಿಯೇ ಮನೆ ಮಾಡಿಕೊಳ್ಳಲು ಅದೇಶಿಸಿ. ವಿದ್ಯುತ್ ಟ್ರಾನ್ಸಫಾರ್ಮರ್‌ ಅಳವಡಿಸಿದ ತಕ್ಷಣ ಮತ್ತೆ ಸುಡುತ್ತವೆ ಎಂದರೆ ಇದು ಯಾರ ದೋಷ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳಿ. ಹೊಸ ಆಡಳಿತ ಕಚೇರಿಗೆ ಇಲಾಖೆಗಳನ್ನು ಕೂಡಲೆ ಸ್ಥಳಾಂತರ ಮಾಡಿ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.