ಪ್ರದರ್ಶನ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಬೇಕಿದೆ

KannadaprabhaNewsNetwork | Published : Jun 30, 2025 12:34 AM

ಇಂದಿನ ಮಕ್ಕಳು ಕಂಪ್ಯೂಟರ್‌, ಮೊಬೈಲ್‌ ದಾಸರಾಗಿದ್ದಾರೆ. ಅದರಿಂದ ಸ್ವತಂತ್ರ ಆಲೋಚನೆ, ಕ್ರೀಯಾಶೀಲತೆ, ದೈಹಿಕ ಶ್ರಮ ಮರೆತಿದ್ದಾರೆ. ಇದಕ್ಕೆಲ್ಲ ನೃತ್ಯ, ಗಾಯನ, ನಾಟಕ, ದೊಡ್ಡಾಟ, ಸಣ್ಣಾಟ ಮುಂತಾದ ಕಲೆಗಳು ದಿವ್ಯೌಷಧಿ ಆಗಿವೆ. ಓದಿನ ಜತೆಗೆ ಈ ಕಲೆಗಳ ಅಭ್ಯಾಸ ಮುಂದುವರೆಸಿದರೆ ಬೌದ್ಧಿಕ ಬೆಳವಣಿಗೆಯ ಜತೆಗೆ ಸಂವೇಧನಾಶೀಲ ಮನಸು ಹೊಂದಿ ಸುಸಂಸ್ಕೃತ ಪ್ರಜೆಗಳಾಗುತ್ತಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಈ ಜನಪದ ಕಲೆಗಳನ್ನು ಕಲಿಸಲು ಮುಂದಾಗಬೇಕು.

ಹುಬ್ಬಳ್ಳಿ: ಸಮಾಜವನ್ನು ತಿದ್ದುವ, ಜನತೆಗೆ ನೈಜ ಮನರಂಜನೆ ನೀಡುವ ಮೂಲಕ ಭಾರತೀಯ ಪರಂಪರೆ, ಸಂಸ್ಕೃತಿ ತಿಳಿಸುವ ಪ್ರದರ್ಶನ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ಬೇಕಿದೆ. ಸಮಾಜ ಮತ್ತು ಸರ್ಕಾರಗಳು ಈ ಕುರಿತು ಗಮನ ಹರಿಸಬೇಕು ಎಂದು ಹಿರಿಯ ಜಾನಪದ ತಜ್ಞ ಬಸವರಾಜ ಶಿಗ್ಗಾಂವಿ ಆಗ್ರಹಿದರು.

ಇಲ್ಲಿನ ಸಂಕಲ್ಪ ಪ್ರದರ್ಶಕ ಕಲೆಗಳ ಹಾಗೂ ಸಂಶೋಧನಾ ಕೇಂದ್ರ ಭಾನುವಾರ ಹಳೇಹುಬ್ಬಳ್ಳಿ ದೇವರ ಗುಡಿಹಾಳ ರಸ್ತೆಯಲ್ಲಿನ ಮಾರುತಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಒಂದು ತಿಂಗಳು ಅವಧಿಯ ದೊಡ್ಡಾಟ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಮಕ್ಕಳು ಕಂಪ್ಯೂಟರ್‌, ಮೊಬೈಲ್‌ ದಾಸರಾಗಿದ್ದಾರೆ. ಅದರಿಂದ ಸ್ವತಂತ್ರ ಆಲೋಚನೆ, ಕ್ರೀಯಾಶೀಲತೆ, ದೈಹಿಕ ಶ್ರಮ ಮರೆತಿದ್ದಾರೆ. ಇದಕ್ಕೆಲ್ಲ ನೃತ್ಯ, ಗಾಯನ, ನಾಟಕ, ದೊಡ್ಡಾಟ, ಸಣ್ಣಾಟ ಮುಂತಾದ ಕಲೆಗಳು ದಿವ್ಯೌಷಧಿ ಆಗಿವೆ. ಓದಿನ ಜತೆಗೆ ಈ ಕಲೆಗಳ ಅಭ್ಯಾಸ ಮುಂದುವರೆಸಿದರೆ ಬೌದ್ಧಿಕ ಬೆಳವಣಿಗೆಯ ಜತೆಗೆ ಸಂವೇಧನಾಶೀಲ ಮನಸು ಹೊಂದಿ ಸುಸಂಸ್ಕೃತ ಪ್ರಜೆಗಳಾಗುತ್ತಾರೆ. ಹಾಗಾಗಿ ಪಾಲಕರು ತಮ್ಮ ಮಕ್ಕಳಿಗೆ ಈ ಜನಪದ ಕಲೆಗಳನ್ನು ಕಲಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಹಿರಿಯ ಜಾನಪದ ತಜ್ಞ ಡಾ. ಪ್ರಕಾಶ ಮಲ್ಲಿಗವಾಡ ಅವರು, ಹುಬ್ಬಳ್ಳಿ-ಧಾರವಾಡ ಕಲೆ, ಕಲಾವಿದರು, ಗಾಯಕರು, ಸಾಹಿತಿಗಳ ತವರು. ಆದಾಗ್ಯೂ ದೊಡ್ಡಾಟದಂತ ಕಲೆಗಳನ್ನು ಕಲಿಯಲು ಮಕ್ಕಳಿಗೆ ಇಲ್ಲಿ ಹೆಚ್ಚಿನ ಅವಕಾಶಗಳು ಇಲ್ಲ. ಇಂಥ ಸಂದರ್ಭದಲ್ಲಿ ಬಸವರಾಜ ಶಿಗ್ಗಾಂವಿ ಅವರು ಈ ಹುಬ್ಬಳ್ಳಿಗೆ ಬಂದು ದೊಡ್ಡಾಟ ತರಬೇತಿ ನೀಡುತ್ತಿರುವುದು ಸ್ತುತ್ಯಾರ್ಹ ಎಂದರು.

ನಾನು ಕೂಡ ಈ ಕಲೆಗಳನ್ನು ಕಲಿಯಲು ಸಾಕಷ್ಟು ತೊಂದರೆ ಅನುಭವಿಸಿದೆ. ಹಠಕ್ಕೆ ಬಿದ್ದು ಕಲಿತು, ಅದರಲ್ಲೇ ಜೀವಿಸಿ, ಹೊಸಪೀಳಿಗೆಗೆ ತರಬೇತಿ ನೀಡುವ ಸಂಸ್ಥೆ ಕಟ್ಟಿರುವೆ. ಪ್ರದರ್ಶನ ಕಲೆಗಳನ್ನು ಉಳಿಸಿ, ಬೆಳೆಸುವುದು ಕಷ್ಟದ ಕೆಲಸವಾಗಿದೆ ಎಂದು ತಮ್ಮ ನೊವು ಹಂಚಿಕೊಂಡದರು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಯಾವುದೇ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಕುಂದಗೋಳಕ್ಕೆ ನಡೆದು ಹೋಗಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿದ ಡಾ.ಗಂಗೂಬಾಯಿ ಹಾನಗಲ್‌ ಅವರು ವಿಶ್ವವಿಖ್ಯಾತರಾದರು. ಭಾರತರತ್ನ ಭೀಮಸೇನ ಜೋಶಿ, ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ.ಬಸವರಾಜ ರಾಜಗುರು, ಪಂ.ಪ್ರವೀಣ ಘೋಡಖಿಂಡಿ ಮುಂತಾದವರು ಅಪಾರ ಶ್ರಮದಿಂದಲೇ ಮೇರು ಪರ್ವತವಾಗಿ ಬೆಳೆದವರು ಎಂದು ಸ್ಮರಿಸಿದರು.

ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ದೊಡ್ಡಾಟ ಕಲೆ ಹುಲುಸಾಗಿ ಬೆಳೆದಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಈ ಕಲೆ ಅಷ್ಟಾಗಿ ಇಲ್ಲ. ಇದೀಗ ಸಹನಾ ಬನ್ನಿಗಿಡದ ಅವರು ಒಂದು ಸಂಸ್ಥೆ ಕಟ್ಟಿಕೊಂಡು ಎಳೆಯ ಮಕ್ಕಳಿಗೆ ದೊಡ್ಡಾಟ ಕಲಿಸಲು ಮುಂದಾಗಿರುವುದು ಅಭಿನಂದನಾರ್ಹ ಕೆಲಸ ಎಂದು ಶ್ಲಾಘಿಸಿದರು.

ಸಂಕಲ್ಪ ಸಂಸ್ಥೆಯ ಸಹನಾ ಬನ್ನಿಗಿಡದ ಈ ಶಿಬಿರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರೋಜ ಪಾಟೀಲ್, ಪ್ರವೀಣ ಬಡಿಗೇರ, ಸೂರಜ್ ಬನ್ನಿಗಿಡದ, ಅಶ್ವತ್ ಮಲ್ಲಿಗವಾಡ ಇದ್ದರು.

ಸಹನಾ ಮಠ ನಿರೂಪಿಸಿದೆ, ಸೌಮ್ಯ ಹರಿಶೆಟ್ಟರ್ ಸ್ವಾಗತಿಸಿದಳು. ದೀಪ್ತಿ ಸೋಮ ವಂದಿಸಿದಳು.