ಕಾಯಂ ಅದಾಲತ್‌ ಮೊದಲ ಆದ್ಯತೆ ಸಂಧಾನ: ನ್ಯಾ.ಎಂ.ಎಸ್.ಸಂತೋಷ್

KannadaprabhaNewsNetwork |  
Published : Aug 07, 2025, 12:45 AM IST
ಪೋಟೋ: 06ಎಸ್‌ಎಂಜಿಕೆಪಿ02ಶಿವಮೊಗ್ಗದ ಜಿಪಂ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾಯಂ ಲೋಕ್ ಅದಾಲತ್ ಕುರಿತಾದ ಜಾಗೃತಿ ಅಭಿಯಾನವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕಾಯಂ ಲೋಕ್ ಅದಾಲತ್ ಒಂದು ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಸಂಧಾನವೇ ಈ ನ್ಯಾಯಾಲಯದ ಮೊದಲ ಆದ್ಯತೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಾಯಂ ಲೋಕ್ ಅದಾಲತ್ ಒಂದು ವಿಶೇಷ ನ್ಯಾಯಾಲಯವಾಗಿದ್ದು, ಪ್ರಕರಣಗಳ ಸಂಧಾನವೇ ಈ ನ್ಯಾಯಾಲಯದ ಮೊದಲ ಆದ್ಯತೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ತಿಳಿಸಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಪಂಚಾಯತ್, ಕುವೆಂಪು ವಿಶ್ವವಿದ್ಯಾಲಯದ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಾನಗರಪಾಲಿಕೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾಯಂ ಲೋಕ್ ಅದಾಲತ್ ಕುರಿತಾದ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.

ಸಾರ್ವಜನಿಕರ ಉಪಯುಕ್ತ ಸೇವೆಗೆ ಸಂಬಂಧಿಸಿದಂತೆ ಇದೊಂದು ವಿಶೇಷ ವೇದಿಕೆ ಆಗಿದ್ದು, ಪ್ರಯಾಣಿಕರನ್ನು ಅಥವಾ ಸರಕನ್ನು ಸಾಗಿಸುವ ಭೂ ಸಾರಿಗೆ, ಜಲಸಾರಿಗೆ, ವಾಯು ಸಾರಿಗೆ ಸೇವೆಗಳು, ಅಂಚೆ, ತಂತಿ, ದೂರವಾಣಿ ಸೇವೆಗಳು, ವಿದ್ಯುತ್, ನೀರು ಸರಬರಾಜು, ಸಾರ್ವಜನಿಕ ನೈರ್ಮಲ್ಯ ಹಾಗೂ ಚರಂಡಿ ವ್ಯವಸ್ಥೆ, ವಿಮಾ ಸೇವೆ, ಆಸ್ಪತ್ರೆ ಹಾಗೂ ಔಷಧಾಲಯಗಳ ಸೇವೆ, ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ ಸೇವೆ, ಶಿಕ್ಷಣ ಅಥವಾ ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟ ಸೇವೆ, ಗೃಹ ಹಾಗೂ ರಿಯಲ್ ಎಸ್ಟೇಟ್ ಸೇವೆ ಒಳಗೊಂಡಂತೆ ಇತರ ಸಾರ್ವಜನಿಕ ಉಪಯುಕ್ತ ಸೇವೆಗಳ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ಸಲ್ಲಿಸಬಹುದು ಎಂದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಅಧ್ಯಕ್ಷರಾಗಿ ಹಾಗೂ ಸಾರ್ವಜನಿಕ ಉಪಯುಕ್ತ ಸೇವೆಗಳ ಬಗ್ಗೆ 15 ರಿಂದ 20 ವರ್ಷಗಳ ಅನುಭವ ಹೊಂದಿರುವ ಇಬ್ಬರು ಸದಸ್ಯರು ಕರ್ನಾಟಕ ರಾಜ್ಯ ಸರ್ಕಾರದ ನಾಮನಿರ್ದೇಶನ ಮಾಡಿದಂತೆ ಈ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 1 ಕೋಟಿ ರು. ಮೌಲ್ಯದ ವ್ಯಾಜ್ಯಗಳನ್ನು ಅಥವಾ ಹಣಕಾಸಿ ವ್ಯವಹಾರದ ಅರ್ಜಿಯನ್ನು ದಾಖಲಿಸಬಹುದು ಎಂದು ತಿಳಿಸಿದರು.

ಉಭಯ ಪಕ್ಷಗಾರರು ಸಂಧಾನಕ್ಕೆ ಒಪ್ಪದೇ ಇದ್ದಾಗ ವಿವಾದವನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರ ಈ ನ್ಯಾಯಾಲಯಕ್ಕಿದ್ದು, ನಂತರ ತೀರ್ಪನ್ನು ಪ್ರಕಟಿಸಬಹುದು. ಅರ್ಜಿದಾರರಿಗೆ ಈ ತೀರ್ಪು ಸರಿ ಹೊಂದದೇ ಇದ್ದರೆ ಸಿವಿಲ್ ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವಿರುವುದಿಲ್ಲ. ಆದರೆ ನೇರವಾಗಿ ರಿಟ್ ಮೂಲಕ ಹೈ ಕೊರ್ಟ್‌ನಲ್ಲಿ ಪ್ರಶ್ನಿಸಬಹುದು. ಸಾರ್ವಜನಿಕರು ಅಧಿಕಾರಿಗಳ ಸಣ್ಣ ಪುಟ್ಟ ಲೋಪಗಳು ಸೇರಿದಂತೆ ಹಲವಾರು ವಿಷಯಗಳ ಕುರಿತು ಕಾಯಂ ಲೋಕ್ ಅದಾಲತ್‌ನಲ್ಲಿ ದಾವೆ ಹೂಡಬಹುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸ್ವಯಂ ಸೇವಕ ಎಸ್.ಬಿ.ವೆಂಕಟೇಶ್ ಮಾತನಾಡಿ, ಸಾರ್ವಜನಿಕರಿಗೆ ಕಾಯಂ ಲೋಕ್ ಅದಾಲತ್ ಬಗ್ಗೆ ತಿಳಿದಿಲ್ಲ. ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬ ಮಾಹಿತಿಯೂ ಇಲ್ಲ. ಅದಾಲತ್‌ನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಬಹುದಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅರ್ಜಿ ಲಭ್ಯವಿರುತ್ತದೆ. ಇದರಲ್ಲಿ ದಾವೆ ಹೂಡಿರುವವರು ನಮಗೆ ಬೇಕಾದ ಪರಿಹಾರವನ್ನು ಕೇಳುವ ಅಧಿಕಾರಿ ಹೊಂದಿದೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ (ಅಭಿವೃದ್ದಿ) ಕೆ.ಜಯಲಕ್ಷ್ಮಿ, ಜಿಪಂ ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ, ಯೋಜನಾಧಿಕಾರಿ ಎಲ್.ಹನುಮನಾಯ್ಕ್, ಮುಖ್ಯ ಲೆಕ್ಕಾಧಿಕಾರಿ ಕೆ.ಎಸ್.ಶ್ರೀಕಾಂತ್, ಮಹಾನಗರ ಪಾಲಿಕೆ ಉಪ ಆಯುಕ್ತ ವಿರುಪಾಕ್ಷಪ್ಪ ಪೂಜಾರ್, ತಾಪಂ ಇಒ ಅಧಿಕಾರಿ ಎನ್.ತಾರಾ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ