ಮಳವಳ್ಳಿ : 543 ಕೋಟಿ ರು. ವೆಚ್ಚದ ಸತ್ತೇಗಾಲ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ತಾಲೂಕುಗಳಿಗೆ ಶಾಶ್ವತವಾಗಿ ಕಾವೇರಿ ಕುಡಿಯುವ ನೀರು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲೂಕಿನ ಬೆಳಕವಾಡಿ ಸಮೀಪದ ಸತ್ತೇಗಾಲ ಬಳಿಯ ಕಾವೇರಿ ನದಿ ಅಣೆಕಟ್ಟೆ ಬಳಿ ಸತ್ತೇಗಾಲ ಕುಡಿಯುವ ನೀರಿನ ಯೋಜನೆಯ ಉಳಿಕೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅಲ್ಲಿನ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ದೃಷ್ಟಿಯಿಂದ ಇಡೀ ರಾಜ್ಯದಲ್ಲಿಯೇ ವಿಶಿಷ್ಟವಾದ ಯೋಜನೆಯನ್ನು ಹಿಂದೆ ಸಚಿವರಾಗಿದ್ದಾಗ ಕಾವೇರಿ ನೀರಾವರಿ ನಿಗಮದಿಂದ ಕೈಗೊಳ್ಳಲಾಗಿತ್ತು ಎಂದರು.
ಭೂಮಿ ಸಮಸ್ಯೆ ಪರಿಹಾರ:
ಈ ವೇಳೆಗಾಗಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಪರಿಶೀಲಿಸಿದ ವೇಳೆ ಕಾವೇರಿ ನದಿಯಿಂದ ನೀರು ಲಿಫ್ಟ್ ಮಾಡುವ ಜಾಗವನ್ನು ರೈತರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಉಂಟಾಗಿತ್ತು. ಇದೀಗ ಎಲ್ಲ ರೈತರು ಭೂಮಿ ಕೊಡಲು ಒಪ್ಪಿದ್ದು, ಸಮಸ್ಯೆ ಬಗೆಹರಿದಂತಾಗಿದೆ. ಯೋಜನೆಯಡಿ ಸುಮಾರು 26 ಕಿ.ಮೀ. ಯಾವುದೇ ಪಂಪ್ ಇಲ್ಲದೇ ಟನಲ್ ಲೈನಿಂಗ್ ಮೂಲಕ ನೀರು ಸರಾಗವಾಗಿ ಹರಿದು ಚನ್ನಪಟ್ಟಣದ ಇಗ್ಗಲೂರು ಬ್ಯಾರೇಜ್ ತಲುಪಲಿದೆ ಎಂದರು.
ಇನ್ನೂ ಅರ್ಧ ಕಿ.ಮೀ.ವ್ಯಾಪ್ತಿಯ ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಡಿಸೆಂಬರ್ ವೇಳೆ ನೀರು ಇಗ್ಗಲೂರು ಬ್ಯಾರೇಜ್ ತಲುಪಲಿದೆ. ನಂತರ ರಾಮನಗರ, ಚನ್ನಪಟ್ಟಣ, ಕನಕಪುರ ಹಾಗೂ ಮಾಗಡಿ ವ್ಯಾಪ್ತಿಯ ಕೆರೆಗಳು ಹಾಗೂ ಕುಡಿಯುವ ನೀರನ್ನು ತುಂಬಿಸಿ ಅಂತರ್ಜಲ ಹೆಚ್ಚಳಕ್ಕೆ ಮುಂದಾಗುತ್ತೇವೆ. ೫೪೩ ಕೋಟಿ ರು.ವೆಚ್ಚದ ಯೋಜನೆಯ ರೂಪುರೇಷ ಸಿದ್ಧಪಡಿಸಿ ಇಲಾಖೆಯ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಶಂಸಿದರು.
23 ಕಿ.ಮೀ. ನೀರು ಹರಿದಿದೆ:
ಈಗಾಗಲೇ ಕಣ್ವಾ ಜಲಾಶಯದಿಂದ ವೈ.ಜಿ.ಗುಡ್ಡ ಜಲಾಶಯಕ್ಕೆ ಪ್ರಾಯೋಗಿಕವಾಗಿ 23 ಕಿ.ಮೀ. ನೀರು ಹರಿಸಲಾಗಿದೆ. ಆದರೆ, ಕಣ್ವಾ ಜಲಾಶಯದಿಂದ ಮಂಚನಬೆಲೆ ಜಲಾಶಯಕ್ಕೆ ನೀರು ಹರಿಸಲಾಗುವುದು. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅಲ್ಲಿನ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ದೃಷ್ಟಿಯಿಂದ ಯೋಜನೆಯನ್ನು ಜಾರಿ ಮಾಡಲಾಗಿದೆ. ಯೋಜನೆಯಡಿ 3.3 ಟಿಎಂಸಿ ನೀರು ಪೂರೈಕೆಯಾಗಲಿದೆ ಎಂದರು.
ಡಿಸೆಂಬರ್ ವೇಳೆಗೆ ಲೋಕಾರ್ಪಣೆಯಾಗುವ ಸಾಧ್ಯತೆ ಇದ್ದು, ಯೋಜನೆಯ ಬಗ್ಗೆ ಚನ್ನಪಟ್ಟಣ ಉಪ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಕೆಲಸ ಮಾಡಿದ್ದೇವೆ. ಚನ್ನಪಟ್ಟಣ ಚುನಾವಣೆ ವೇಳೆ ನೀಡಿದ್ದ ಅನೇಕ ಭರವಸೆಗಳ ಚರ್ಚೆ ಮಾಡಲಾಗುವುದು. ಇಲ್ಲಿದ್ದ ಜಾಗದ ಸಮಸ್ಯೆ ಬಗೆಹರಿದಿದ್ದು, ಭೂಮಿ ಕಳೆದುಕೊಂಡ ರೈತರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಯೋಜನೆಯ ವಿವರ:
ರಾಮನಗರ ಜಿಲ್ಲೆಯ ಭವಿಷ್ಯದ ದೃಷ್ಟಿಯಿಂದ ೨೦೧೮-೧೯ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಆಗ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು543 ಕೋಟಿ ರು. ವೆಚ್ಚದಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ ಹಾಗೂ ಕನಕಪುರ ತಾಲೂಕುಗಳಿಗೆ ನೀರು ಪೂರೈಸುವ ಸತ್ತೇಗಾಲ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿ ಚಾಲನೆ ನೀಡಿದ್ದರು.
ಇಂತಹ ಬೃಹತ್ ಯೋಜನೆಯ ಕೇವಲ ೬೦ ಮೀಟರ್ ಉದ್ದದ ಪೈಪ್‌ಲೈನ್ ಕಾಮಗಾರಿಗೆ ಬಾಕಿ ಉಳಿದಿತ್ತು. ಅಲ್ಲಿನ ರೈತರು ಭೂಮಿ ನೀಡಲು ವಿರೋಧಿಸುತ್ತಿರುವ ಯೋಜನೆ ಕುಂಟುತ್ತಾ, ತೆವಳುತ್ತಾ ಸಾಗಿತ್ತು. ಇದೀಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರವೇಶದ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿದಂತಾಗಿದೆ. ರಾಮನಗರ ಜಿಲ್ಲೆಗೆ ಪೂರೈಸಲು ಯೋಜನೆಯಲ್ಲಿ ಸತ್ತೇಗಾಲದಿಂದ ಇಗ್ಗಲೂರು ಬ್ಯಾರೇಜ್‌ವರೆಗೆ ೨೬ಕಿ.ಮೀ. ವ್ಯಾಪ್ತಿಯಲ್ಲಿ ಗುರುತ್ವಾಕರ್ಷಣೆ ಬಲದಿಂದ ನೀರು ಹರಿಯಲಿದೆ.
ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಮದ್ದೂರು ಶಾಸಕ ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್‌ದಾಸ್, ಮಾಜಿ ಸಂಸದ ಡಿ.ಕೆ.ಸುರೇಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ತಹಶೀಲ್ದಾರ್ ಎಸ್.ವಿ.ಲೋಕೇಶ್, ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಇದ್ದರು.
ಇದಕ್ಕೂ ಮುನ್ನ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುರ್ಮಾ ಅವರನ್ನು ಪ್ರವಾಸಿ ಮಂದಿರ ಬಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಭಿನಂದಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಚಿಕ್ಕಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಕಾಂತ್, ಟಿಎಪಿಸಿಎಂಎಸ್ ಟಿ.ಸಿ.ಚೌಡಯ್ಯ, ಮುಖಂಡರಾದ ಶಿವಮಾದೇಗೌಡ, ಸಿ.ಮಾಧು, ಸುಜಾತಾ ಕೆ.ಎಂ.ಪುಟ್ಟು, ರೋಹಿತ್ ಗೌಡ, ಎಂ.ಲಿಂಗರಾಜು, ಸಾಹಳ್ಳಿ ಶಶಿ, ಕಿರಣ್ ಶಂರ್ಕ, ಚೇತನ್ ನಾಯಕ್ ಇದ್ದರು.
ಬದಲಿ ಭೂಮಿ ಖರೀದಿಸಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ವೇಳೆ ಕಾಮಗಾರಿಯ ಹಿನ್ನೆಲೆಯಲ್ಲಿ ಭೂಮಿ ಕಳೆದುಕೊಂಡ ರೈತರು ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಿಮಗೆ ಯಾವುದೇ ಅನ್ಯಾಯವಾಗದಂತೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೇ ನೀವು ಬದಲಿ ಭೂಮಿ ಖರೀದಿಸಿ ವ್ಯವಸಾಯದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಚಿಕ್ಕ ಮಾರಿಗುಡಿಗೆ ಡಿಕೆಶಿ ಭೇಟಿ
ಕಾಮಗಾರಿ ವೀಕ್ಷಣೆಗೆ ಆಗಮಿಸಿದ ಅವರು ಕಾವೇರಿ ನದಿ ದಡದ ಹಿರಿಯ ನಾಗರದಮ್ಮ(ಚಿಕ್ಕ ಮಾರಿಗುಡಿ) ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದಕೊಂಡರು. ನಂತರ ದೇವಸ್ಥಾನವನ್ನು ಪರಿಶೀಲಿಸಿದ ಅವರು ದೇವಸ್ಥಾನವನ್ನು ಪುನರ್‌ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಅವರಿಗೆ ಸೂಚಿಸಿದರು.
ನಂತರ ಜವನಗಹಳ್ಳಿ ಗುಡ್ಡ ಬಳಿಯ ಕಾಮಗಾರಿಯ ಸುರಂಗ ಮಾರ್ಗ(ಟನಲ್) ಹಾಗೂ ಯೋಜನೆಯ ನೀಲನಕ್ಷೆಯನ್ನು ವೀಕ್ಷಣೆ ಮಾಡಿದರು. ಭೂಮಿ ಕಳೆದುಕೊಂಡ ಕೆಲ ರೈತರು ಡಿ.ಕೆ.ಶಿವಕುಮಾರ್ ಅವರನ್ನು ಅಭಿನಂದಿಸಿದರು.