ಹಿರೇಕೆರೂರು: ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಅತ್ಯಾಧುನಿಕ ವಿದ್ಯುತ್ ಪರಿವರ್ತಕ ಪರೀಕ್ಷಾ ಕೇಂದ್ರ ಆರಂಭಿಸುವ ಮೂಲಕ ಬಹಳ ದಿನಗಳಿಂದ ರೈತರು ಅನುಭವಿಸುತ್ತಿದ್ದ ಕಷ್ಟಕ್ಕೆ ಶಾಶ್ವತವಾಗಿ ಪರಿಹಾರ ದೊರೆತಂತಾಗಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಹೆಸ್ಕಾಂ ಇಲಾಖೆಯ ಆವರಣದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಿದ್ಯುತ್ ಪರಿವರ್ತಕ(ಟಿಸಿ)ಪರೀಕ್ಷಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಮೊದಲು ರೈತರು ರಿಪೇರಿಗೊಂಡ ವಿದ್ಯುತ್ ಪರಿವರ್ತಕಗಳನ್ನು ರಾಣಿಬೆನ್ನೂರಿನ ಪರೀಕ್ಷಾ ಕೇಂದ್ರದಿಂದ ತರಬೇಕಾಗಿತ್ತು. ಈ ಕುರಿತು ಇಂಧನ ಖಾತೆ ಸಚಿವರು, ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಅವರು ಈ ಪರೀಕ್ಷಾ ಕೇಂದ್ರವನ್ನು ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ ಮಾತನಾಡಿ, ವಿದ್ಯುತ್ ಪರಿವರ್ತಕ ಪರೀಕ್ಷಾ ಕೇಂದ್ರದಿಂದ ತಾಲೂಕಿನ ರೈತರಿಗೆ ಉತ್ತಮ ಸೇವೆ ಕಲ್ಪಿಸಲು ಮತ್ತಷ್ಟು ಅನುಕೂಲವಾಗಿದೆ. ಇದಕ್ಕೆ ಇಲ್ಲಿನ ಶಾಸಕ ಯು.ಬಿ. ಬಣಕಾರ ಸತತ ಪ್ರಯುತ್ನ ಕಾರಣವಾಗಿದೆ. ಜಿಲ್ಲೆಯಲ್ಲಿ ಇಂತಹ 8 ಟಿಸಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಹಗಲು ಹೊತ್ತು ಬೀದಿದೀಪಗಳು ಉರಿಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಖುದ್ದು ನಾನೇ ಪರೀಶೀಲನೆ ನಡೆಸುತ್ತೇನೆ. ತಪ್ಪಿತಸ್ಥರು ಕಂಡುಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ರಮೇಶ ಮಡಿವಾಳರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಪಪಂ ಸದಸ್ಯ ಮಹೇಂದ್ರ ಬಡಳ್ಳಿ, ರಟ್ಟೀಹಳ್ಳಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಶಿವರಾಜ ಹರಿಜನ, ಪರಮೇಶ ದೊಡ್ಮನಿ, ವೀರನಗೌಡ ಪ್ಯಾಟಿಗೌಡ್ರ, ಸಮೀರ ಪ್ಯಾಟಿ, ಹಸ್ಕಾಂ ಅಧಿಕಾರಿಗಳಾದ ನಾಗಪ್ಪ ಬೆಳಕೇರಿ, ನಾಗಪ್ಪ ಎಚ್.ಎಸ್., ಪ್ರಭಾಕರ ಎಂ.ಎಸ್., ನೂರಹ್ಮದ್, ರಾಜೀವ್ ಮರಿಗೌಡ್ರ, ಜಯಪ್ರಕಾಶ, ಶಂಭು ಹಂಸಭಾವಿ ಹಾಗೂ ರೈತರು, ಹೆಸ್ಕಾಂ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಶಿಕ್ಷಕ ನಾಗರಾಜ ಪುರದ, ನಾಗರಾಜ ಸೊಮಕ್ಕಳವರ ನಿರ್ವಹಿಸಿದರು.