ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ: ರೆಡ್ಡಿ

KannadaprabhaNewsNetwork |  
Published : Aug 29, 2026, 01:45 AM IST
ಚಿತ್ರ :  8ಎಂಡಿಕೆ2 : ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಮಡಿಕೇರಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿರುವುದು ಆನೆ-ಮಾನವ ಸಂಘರ್ಷಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸುಮಾರು 50ಕ್ಕೂ ಅಧಿಕ ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟರೆ ಪರಿಹಾರ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ ಎಂದರು.ಆನೆ ಹಾವಳಿ ತಡೆಯಲು ಕಾರಿಡಾರ್ ಮಾಡಬೇಡಬೇಕು, ಈ ಹಿನ್ನೆಲೆಯಲ್ಲಿ ಸರ್ವೇ ಮಾಡಲು ಸಲಹೆ ಕೇಳಿಬಂದಿದೆ. ರೈಲ್ವೇ ಬ್ಯಾರಿಕೇಡ್, ಕಂದಕ ಪರಿಣಾಮಕಾರಿಯಾಗಿ ಮಾಡಲು ಸಲಹೆ ನೀಡಿದ್ದಾರೆ. ನಾಗರಹೊಳೆಯಿಂದ ನಾಡಿಗೆ ಹುಲಿ ಬರದಂತೆ ಯೋಜನೆ ರೂಪಿಸಲು ಸಲಹೆ ನೀಡಿದ್ದಾರೆ. ಈ ಬಗ್ಗೆ ಸೋಮವಾರ ಮುಖ್ಯಮಂತ್ರಿಗಳೊಂದಿಗೆ ಹಿರಿಯ ಅರಣ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ ಎಂದರು.

ಸಿ ಅಂಡ್ ಡಿ ಲ್ಯಾಂಡ್, ಹಾರಂಗಿ ಸಂತ್ರಸ್ತರ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಶೀಘ್ರ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಕಾಡಿನಲ್ಲಿ ಆನೆಗಳಿಗೆ ಆಹಾರ ಸಿಗುವಂತಾಗುವ ನಿಟ್ಟಿನಲ್ಲಿ ಕಾಡಿನಲ್ಲಿರುವ ತೇಗ, ಅಕೇಶಿಯ ಸೇರಿದಂತೆ ವಿವಿಧ ಬಗೆಯ ಮರಗಳನ್ನು ತೆಗೆದು ಆನೆಗಳಿಗೆ ವಿವಿಧ ಜಾತಿಯ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

ವರದಿ ತಿರಸ್ಕರಿಸಲು ವಿಶೇಷ ಅಧಿವೇಶನ: ನಮ್ಮ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿದ್ದಾರೆ. ಅರಣ್ಯ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸರ್ವ ಪಕ್ಷದವರೂ ಕೂಡ ಈ ವರದಿಯನ್ನು ತಿರಸ್ಕರಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸಚಿವ ರೆಡ್ಡಿ ತಿಳಿಸಿದ್ದಾರೆ.ಕಸ್ತೂರಿ ರಂಗನ್ ವರದಿ ಜಾರಿ ಬಗ್ಗೆ ಈ ಹಿಂದಿನ ಸರ್ಕಾರ ತಿರಸ್ಕರಿಸಿತ್ತು. ನಾವು ಕೂಡ ಇದನ್ನು ತಿರಸ್ಕಾರ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ಬಗ್ಗೆ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ಮಾಡಲಾಗುವುದು ಎಂದರು.

ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಈ ಹಿಂದೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದ್ದು, ತಿರಸ್ಕಾರ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದೇವೆ. ಆದರೆ ಮತ್ತೆ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ಮಾಡಬೇಕು. ವಿಶೇಷ ಅಧಿವೇಶನ ಕರೆದು ತೀರ್ಮಾನ ತೆಗೆದು ಕೇಂದ್ರಕ್ಕೆ ನಿರ್ಣಯ ಕಳುಹಿಸಲಾಗುವುದು ಎಂದು ನಿರ್ಧರಿಸಲಾಗಿದೆ ಎಂದರು.

ಶಾಸಕ ಡಾ. ಮಂತರ್ ಮಾತನಾಡಿ ಅರಣ್ಯ ಕಾಯಿದೆ ಬಲಪಡಿಸಿದೆ ಸಾಕು, ಕಸ್ತೂರಿ ರಂಗನ್ ವರದಿ ಬೇಕಾಗಿಲ್ಲ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಮುಖರಾದ ಎಂ.ಲಕ್ಷ್ಮಣ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿ ಮೀನಾಕ್ಷಿ‌ ನೇಗಿ, ಪಿಸಿಸಿಎಫ್ (ವನ್ಯಜೀವಿ ವಿಭಾಗ) ಪುಷ್ಕರ್, ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಇತರರು ಇದ್ದರು. ನಮ್ಮನ್ನು ಸಭೆಗೆ ಕರೆದಿಲ್ಲ: ಕಸ್ತೂರಿ ರಂಗನ್ ವರದಿ ಸಂಬಂಧ ಮೈಸೂರು-ಕೊಡಗು ಕ್ಷೇತ್ರ ಸಂಸದ ಯದುವೀರ್ ಅವರು ಗುರುವಾರ ಮಡಿಕೇರಿಯಲ್ಲಿ ನಡೆಸಿದ ಸಭೆಗೆ ನಮನ್ನು ಆಹ್ವಾನಿಸಿಲ್ಲ. ವಾಟ್ಯ್ಸಾಪ್ ನಲ್ಲಿ ಸಂಸದರ ಪಿಎ ಸಂದೇಶ ಕಳುಹಿಸಿದ್ದಾರೆ ಅಷ್ಟೇ ಎಂದು ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಅಹವಾಲು ಸ್ವೀಕರಿಸಿದ ಸಚಿವರು: ಅರಣ್ಯ ಸಚಿವರಾದ ಬಳಿಕ ಕೊಡಗು ಜಿಲ್ಲೆಗೆ ಮೊದಲ ಬಾರಿ ಆಗಮಿಸಿದ ರಾಮಲಿಂಗಾ ರೆಡ್ಡಿ ಅವರು ಜಿಲ್ಲೆಯ ವಿವಿಧ ರಾಜಕೀಯ ಪಕ್ಷ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದರು. ಮಾಜಿ ವಿಧಾನಸಭಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅವರು, ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು ಎಂದು ಸಚಿವರನ್ನು ಒತ್ತಾಯಿಸಿದರು. ಕಾರ್ಮಿಕ ಸಂಘನೆಗಳ ಮುಖಂಡ ಪಿ.ಆರ್. ಭರತ್ ಮಾತನಾಡಿ ತೋಟದಿಂದ ತೋಟಕ್ಕೆ ಆನೆಯನ್ನು ಓಡಿಸುವುದನ್ನು ನಿಲ್ಲಿಸಬೇಕು. ಕಾಡಾನೆ-ಮಾನವ ಸಂಘರ್ಷ ತಡೆಗೆ ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿದರು. ಪರಿಸರ ಹಾಗೂ ಆರೋಗ್ಯ ಪ್ರತಿಷ್ಠಾನದ ಕಾರ್ಯದರ್ಶಿ ಸಿ.ಪಿ. ಮುತ್ತಣ್ಣ ಮಾತನಾಡಿ ಕಾಡಾನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಅಗತ್ಯ, ಅದಕ್ಕಾಗಿ ರೈಲ್ವೇ, ವಿದ್ಯುತ್ ಯೋಜನೆಗಳನ್ನು ಕೈಬಿಡಬೇಕು. ರೈಲ್ವೇ ಬ್ಯಾರಿಕೇಡ್ ಎಲ್ಲ ಕಡೆ ಹಾಕಬೇಕು, ಕಾಡಾನೆ ಕಾರಿಡಾರ್ ಗೆ ಯಾವುದೇ ರೀತಿ ಅಡ್ಡಿ ಉಂಟು ಮಾಡಬಾರದು ಎಂದರು.

ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ನ ನಂದಾ ಬೆಳ್ಯಪ್ಪ ಮಾತನಾಡಿ ಎಲಿಫೆಂಟ್‌ ಕಾರಿಡಾರ್ ಸರ್ವೇ ಆಗಬೇಕು ಎಂದರು. ಹೋರಾಟಗಾರ ರವಿ ತಮ್ಮಯ್ಯ ಮಾತನಾಡಿ ಅರಣ್ಯ ಕಾಯಿದೆಯನ್ನು ದುರುಪಯೋಗ ಮಾಡಿ ಮಾಂದಲ್ ಪಟ್ಟಿಯನ್ನು ಪ್ರವಾಸಿ ತಾಣವಾಗಿ ಮಾಡಲಾಗಿದೆ ಎಂದರು.

ಬಿಜೆಪಿ ಪ್ರಮಖರಾದ ಸುವಿನ್ ಗಣಪತಿ ಮಾತನಾಡಿ ಆನೆ ದಾಳಿಯಿಂದ ಮೃತಪಟ್ಟರೆ ಹೆಚ್ಚು ಪರಿಹಾರ ನೀಡಬೇಕು ಒತ್ತಾಯಿಸಿದರು. ಸಚಿವರು ಬರುವಂತೆ ಪಟ್ಟು ಹಿಡಿದ ರೈತ ಸಂಘ!: ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಆದರೆ ಸಚಿವರ ಸಭೆ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ಇದಕ್ಕೆ ಬಿಜೆಪಿ ಪಕ್ಷದ ಪ್ರಮುಖರು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು ವಿರೋಧ ವ್ಯಕ್ತಪಡಿಸಿದರು.

ಸಭಾಂಗಣದಲ್ಲಿ ನಮ್ಮನ್ನು ಸಭೆಗೆ ಕರೆದು, ಅರಣ್ಯ ಸಚಿವರು ಅಲ್ಲಿ ಸಭೆ ಮಾಡುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಆಗಮಿಸಿ, ಸಚಿವರ ಸಭೆ ಮತ್ತೊಂದು ಸಭಾಂಗಣದಲ್ಲಿ ನಡೆಯುತ್ತಿದೆ. ಅಲ್ಲಿಗೆ ಪ್ರತಿಯೊಂದು ಸಂಘಟನೆಯಿಂದ ಐದು ಮಂದಿ ಆಗಮಿಸಿ ತಮ್ಮ ಅಹವಾಲು ಸಲ್ಲಿಸುವಂತೆ ತಿಳಿಸಿದರು. ಆದರೆ ಇದಕ್ಕೆ ಸಭೆಗೆ ಆಗಮಿಸಿದ್ದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ನಡುವೆ ಶಾಸಕ ಎ.ಎಸ್. ಪೊನ್ನಣ್ಣ ಆಗಮಿಸಿ ಸಚಿವರು ಮತ್ತೊಂದು ಸಭಾಂಗಣದಲ್ಲಿ ಸಭೆ ನಡೆಸುತ್ತಿದ್ದು, ಪ್ರತಿಯೊಬ್ಬರು ಆಗಮಿಸಿ ತಮ್ಮ ಅಹವಾಲು ಸಲ್ಲಿಸುವಂತೆ ತಿಳಿಸಿದರು. ಆದರೂ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ರೈತ ಸಂಘದ ಪ್ರಮುಖರು ಸೇರಿದಂತೆ ವಿವಿಧ ಸಂಘದ ಪ್ರಮುಖರು ಇದೇ ಸಭಾಂಗಣದಲ್ಲಿ ಕುಳಿತು ಸಚಿವರು ನಮ್ಮಲ್ಲಿಗೆ ಬರುವಂತೆ ಪಟ್ಟು ಹಿಡಿದರು. ಮತ್ತೊಂದು ಸಭಾಂಗಣದಲ್ಲಿ ಅಹವಾಲು ಸ್ವೀಕರಿಸಿದ ಬಳಿಕ ಕೊನೆಗೆ ರೈತ ಸಂಘದವರು ಕಾದು ಕುಳಿತಿದ್ದ ಸಭಾಂಗಣಕ್ಕೆ ಸಚಿವರು ಭೇಟಿಯಾದರು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ ಸಭೆಗೆ ಕರೆದ ಮೇಲೆ ಎಲ್ಲರನ್ನೂ ಕರೆದು ಸಭೆ ಮಾಡಬೇಕಿತ್ತು. ಆದರೆ ಕೆಲವರನ್ನು ಮಾತ್ರ ಕರೆದು ಮಾತನಾಡಿಸುವ ಕ್ರಮ ಸರಿಯಲ್ಲ ಎಂದರು. ಸಾರ್ವಜನಿಕರ ಸಮಸ್ಯೆ ಆಲಿಸದ ಸಿಸಿಎಫ್ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು. ಕಾಡಾನೆ-ಮಾನವ ಸಂಘರ್ಷ ತಡೆಗೆ ಶಾಶ್ವತ ಪರಿಹಾರಕ್ಕೆ ಹೆಚ್ಚಿನ ಅನುದಾನ ನೀಡುವಂತಾಗಬೇಕು ಒತ್ತಾಯಿಸಿದರು. ಈ ಸಂದರ್ಭ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆ
ಪತ್ರಕರ್ತರ ಮೇಲೆ ಹಲ್ಲೆ ಖಂಡನೀಯ: ಸುಧೀರ್‌ ಕುಮಾರ್‌